ನವದೆಹಲಿ: ಇಲ್ಲಿನ ಉತ್ತರ ದೆಹಲಿಯ ಭಜನ್ ಪುರ ಪ್ರದೇಶದಲ್ಲಿನ ಬಾಡಿಗೆ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಮೃತದೇಹಗಳು ಪತ್ತೆಯಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಲದ ತಕರಾರರೇ ಈ ಕೊಲೆಗೆ ಹೇತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತಪಟ್ಟ ಮನೆಯ ಯಜಮಾನನ ಸೋದರ ಮಾವನೇ ಈ ಐದೂ ಕೊಲೆಗಳನ್ನು ಮಾಡಿರುವುದಾಗಿ ಪೊಲೀಸ್ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾದ ಶಂಭು ಚೌಧರಿಯ ಸೋದರ ಮಾವ ಪ್ರಭು ಮಿಶ್ರಾ ಎಂಬಾತನೇ ಈ ಹೀನ ಕೃತ್ಯವನ್ನು ಎಸಗಿದವನಾಗಿದ್ದಾನೆ.
ಘಟನೆ ಬೆಳಕಿಗೆ ಬಂದ ಬಳಿಕ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಸಂಶಯದ ಆಧಾರದಲ್ಲಿ ಪ್ರಭು ಮಿಶ್ರಾನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಶಂಭು ಜೊತೆ ತನಗೆ ತಗಾದೆ ಉಂಟಾದ ಕಾರಣ ಆತನನ್ನು ಮತ್ತು ಆತನ ಕುಟುಂಬ ಸದಸ್ಯರನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಭು ಶರ್ಮಾ ತನ್ನ ಅಳಿಯ ಶಂಭು ಚೌಧರಿಯಿಂದ 30 ಸಾವಿರ ಸಾಲ ಪಡೆದುಕೊಂಡಿದ್ದ. ಈ ಸಾಲದ ಮೊತ್ತವನ್ನು ಹಿಂತಿರುಗಿಸುವಂತೆ ಪ್ರಭು ಶಂಭುವನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಹಲವು ಬಾರಿ ಗಲಾಟೆಗಳು ನಡೆದಿದ್ದವು.
ಇದರಿಂದ ರೋಸಿ ಹೋಗಿದ್ದ ಪ್ರಭು ಶರ್ಮಾ ಉತ್ತರ ದೆಹಲಿಯ ಭಜನ್ ಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಶಂಭು ಚೌಧರಿ (43) ಆತನ ಪತ್ನಿ ಸುನೀತಾ (37), ಮಕ್ಕಳಾದ, ಹದಿನೇಳು ವರ್ಷದ ಶಿವಂ, ಹದಿನಾಲ್ಕು ವರ್ಷದ ಸಚಿನ್ ಮತ್ತು ಹನ್ನೆರಡು ವರ್ಷದ ಮಗಳು ಕೋಮಲ್ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿ ಪರಾರಿಯಾಗಿದ್ದ.
ಜ್ಯೂಸ್ ಅಂಗಡಿ ನಡೆಸುತ್ತಿದ್ದ ಮತ್ತು ರಿಕ್ಷಾ ಚಲಾಯಿಸಿ ಜೀವನ ಸಾಗಿಸುತ್ತಿದ್ದ ಶಂಭು ಚೌಧರಿ ಬಿಹಾರ ಮೂಲದವನಾಗಿದ್ದ. ಈ ಕುಟುಂಬ ವಾಸವಿದ್ದ ಮನೆಯೊಳಗಿನಿಂದ ಬುಧವಾರದಂದು ಕೆಟ್ಟ ವಾಸನೆ ಬರುತ್ತಿದ್ದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಅವರು ಬಂದು ಬಾಗಿಲು ಒಡೆದು ನೋಡಿದ ಸಂದರ್ಭದಲ್ಲಿಈ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.