ಬಾಗಲಕೋಟೆ: ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಲಿಂಗೈಕ್ಯರಾದ ಕೂಡಲಸಂಗಮ ಬಸವ ಧರ್ಮ ಪೀಠದ ಎರಡನೇ ಪೀಠಾಧ್ಯಕ್ಷೆ ಡಾ| ಮಾತೆ ಮಹಾದೇವಿ ಅವರ ಅಂತ್ಯಸಂಸ್ಕಾರ ಶನಿವಾರ ಲಿಂಗಾಯತ ಧರ್ಮದ ವಿಧಿ-ವಿಧಾನಗಳೊಂದಿಗೆ ನೆರವೇರಿತು.
ಡಾ|ಮಾತೆ ಮಹಾದೇವಿ ಅವರ ಉತ್ತರಾಧಿಕಾರಿ ಮಾತೆ ಗಂಗಾದೇವಿ, ಚಿತ್ರದುರ್ಗ ಮುರುಘಾಮಠದ ಶ್ರೀ ಮುರಘಾ ಶರಣರು, ಭಾಲ್ಕಿ ಪಟ್ಟದ್ದೇವರು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಂಡರಗಿಯ ಶ್ರೀ ನಿಜಗುಣಾನಂದ ಸ್ವಾಮೀಜಿ ಸೇರಿ ನಾಡಿನ 25ಕ್ಕೂ ಹೆಚ್ಚು ಮಠಾಧೀಶರು ಕ್ರಿಯಾಸಮಾಧಿ ವೇಳೆ ಅಂತಿಮ ವಿಧಿ ವಿಧಾನ ನಡೆಸಿದರು. ಬಸವ ಧರ್ಮ ಪೀಠದ ಆವರಣದ ಶರಣ ಲೋಕದ ಬಳಿ ಘಣಲಿಂಗದ ಬಲ ಭಾಗದಲ್ಲಿ 24 ವರ್ಷಗಳ ಹಿಂದೆಯೇ ಕ್ರಿಯಾಸಮಾಧಿ ನಿರ್ಮಿಸಲಾಗಿತ್ತು. 6 ಅಡಿ ಎತ್ತರ, 5 ಅಡಿ ಅಗಲದ ಸಿಮೆಂಟ್ (ಕಾಂಕ್ರೀಟ್)ನಿಂದ ನಿರ್ಮಿಸಿದ ಇಷ್ಟಲಿಂಗ ಆಕೃತಿ ಹೊಂದಿದ ಸಮಾಧಿಯಲ್ಲಿ ಅಂತ್ಯಸಂಸ್ಕಾರ ಕ್ರಿಯೆಗಳನ್ನು ನೆರವೇರಿಸಲಾಯಿತು.
ಇದಕ್ಕೂ ಮುನ್ನ ಇಷ್ಟಲಿಂಗ ಆಕೃತಿಯ ಕ್ರಿಯಾಸಮಾಧಿ ಸುತ್ತಲೂ ತ್ಯಾಗಾಂಗ, ಭೋಗಾಂಗ, ಯೋಗಾಂಗ ಹೀಗೆ ಮೂರು ಹಂತಗಳಲ್ಲಿ ವಿಭೂತಿ ಜೋಡಿಸಲಾಗಿತ್ತು. ನಂತರ ಷಟ್ಕೊàನ ಆಕಾರ ಹಾಕಿ, ಅದರಲ್ಲಿ ಮಾತಾಜಿಯವರ ಶರೀರ ಇರಿಸಿ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗ, ಶರಣ, ಐಕ್ಯಹೀಗೆ ಷಟ್‌ಸ್ಥಳ ಸೂಚಕವಾಗಿ ವಿಭೂತಿ ಧಾರಣೆ ಕ್ರಿಯೆ ನಡೆಯಿತು. ಅಂತಿಮವಾಗಿ ವಚನ ಪ್ರಾರ್ಥನೆ ಸಲ್ಲಿಸಲಾಯಿತು.
ಲಿಂಗಾಯತ ಮತ್ತು ಬಸವ ತತ್ವಗಳ ಅನುಗುಣವಾಗಿ ಸುಮಾರು 2 ಗಂಟೆಗಳ ಕಾಲ ಅಂತಿಮ ಕ್ರಿಯಾಸಮಾಧಿ ಕಾರ್ಯ ನಡೆದವು. ಜೀವಿತಾವಧಿಯಲ್ಲಿ ಅವರು ಲಿಂಗಾಯತ ಪರಂಪರೆ-ಸಂಸ್ಕೃತಿ-ಕ್ರಿಯಾವಿಧಿ ಕುರಿತು ಬರೆದಿದ್ದ ಲಿಂಗಾಯತ ಸಂಸ್ಕಾರ ಎಂಬ ಪುಸ್ತಕದಲ್ಲಿ ದಾಖಲಿಸಿದ ರೀತಿಯಲ್ಲೇ ಅವರ ಅಂತ್ಯಸಂಸ್ಕಾರ ನಡೆಸಲಾಯಿತು.
ಪೊಲೀಸ್ ಗೌರವ: ಗೃಹ ಸಚಿವ ಎಂ.ಬಿ. ಪಾಟೀಲರ ವಿಶೇಷ ಆಸಕ್ತಿ ಮೇರೆಗೆ ಡಾ| ಮಾತೆ ಮಹಾದೇವಿ ಅವರಿಗೆ ಪೊಲೀಸ್ ಗೌರವ ಸಲ್ಲಿಸಲಾಯಿತು. ಬಸವ ಧರ್ಮ ಪೀಠದ ಆವರಣದಲ್ಲಿ ಮಾತಾಜಿಯವರಿಗೆ ಪೊಲೀಸರ ತಂಡ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಿತು. ಬಳಿಕ ಗೃಹ ಸಚಿವ ಎಂ.ಬಿ. ಪಾಟೀಲ, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಜಿಪಂ ಸಿಇಒ ಗಂಗೂಬಾಯಿ ಮಾನಕರ ಸೇರಿ ಇತರರು ಮಾತಾಜಿ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುತ್ಛಅರ್ಪಿಸಿ ಗೌರವ ಸಲ್ಲಿಸಿದರು.