Advertisement

ಫ‌ಲಿತಾಂಶ ಕುಸಿದರೂ ಗುಣಮಟ್ಟ ಫ‌ಲಿತಾಂಶದಲ್ಲಿ ಮುಂದೆ!

02:33 AM May 01, 2019 | sudhir |

ಉಡುಪಿ: ಗುಣಮಟ್ಟದ ಶಿಕ್ಷಣದಲ್ಲಿ ದ್ವಿತೀಯ ಸ್ಥಾನ
ಉಡುಪಿ: ಎಸೆಸೆಲ್ಸಿ ಫ‌ಲಿತಾಂಶದಲ್ಲಿ ಉಡುಪಿ ಜಿಲ್ಲೆ ಈ ಬಾರಿ 5ನೇ ಸ್ಥಾನಕ್ಕೆ ಕುಸಿದಿದ್ದು, 4 ಸ್ಥಾನ ಇಳಿಕೆಯಾದರೂ ಶೇಕಡಾವಾರು ಪ್ರಮಾಣದಲ್ಲಿ ತೀರಾ ಕಡಿಮೆಯಾಗಿಲ್ಲ. ಕಳೆದ ವರ್ಷ ಶೇ.88.18 ಫ‌ಲಿತಾಂಶ ಸಿಕ್ಕಿದ್ದರೆ ಈ ಬಾರಿ ಶೇ.88.11 ದಾಖಲಿ ಸಿದೆ. ಗುಣಮಟ್ಟದ ಶಿಕ್ಷಣದಲ್ಲೂ ಮುಂದಿದೆ.

Advertisement

ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಪ್ರೇರಣ ಶಿಬಿರ, ಪ.ಪಂಗಡದ ಮಕ್ಕಳಿಗೆ ವಿಶೇಷ ಕಲಿಕಾ ಶಿಬಿರ, ವಿಷಯ ಆಧಾರಿತ ಕಾರ್ಯಕ್ರಮ, ಬೆಳಗ್ಗೆ ಮತ್ತು ಮಧ್ಯಾಹ್ನ ಒಂದೊಂದು ತಾಸು ಹೆಚ್ಚುವರಿ ತರಗತಿ ಮೊದಲಾದ ಉಪಕ್ರಮಗಳನ್ನು ತೆಗೆದುಕೊಂಡಿತ್ತು. ಅದರ ಪರಿಣಾಮವೆಂಬಂತೆ ಕಳೆದ ಬಾರಿ ಪ್ರಥಮ ಸ್ಥಾನ ಪಡೆದಿತ್ತು. ಈ ಬಾರಿಯೂ ಮುಂದುವರಿಸಲಾಗಿತ್ತು.

ಗುಣಮಟ್ಟದಲ್ಲಿ ದ್ವಿತೀಯ
ಒಟ್ಟಾರೆ ಫ‌ಲಿತಾಂಶದಲ್ಲಿ ಇಳಿಕೆಯಾಗಿದ್ದರೂ ಗುಣ ಮಟ್ಟದ ಶಿಕ್ಷಣದಲ್ಲಿ ಜಿಲ್ಲೆ ದ್ವಿತೀಯ ಸ್ಥಾನಿಯಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ವಿಶಿಷ್ಟ ದರ್ಜೆ, ಪ್ರಥಮ ದರ್ಜೆ ಮತ್ತು ಒಟ್ಟು ತೇರ್ಗಡೆಯ ಪ್ರಮಾಣ ಮಾನದಂಡವನ್ನಾಗಿ ಇರಿಸಿಕೊಂಡು ಗುಣ ಮಟ್ಟ ಮಾಪನ ಮಾಡಲಾಗುತ್ತದೆ ಎಂದಿದ್ದಾರೆ.

16ನೇ ಸ್ಥಾನಕ್ಕೂ ಕುಸಿದಿತ್ತು
ಉಡುಪಿ ಜಿಲ್ಲೆ 2007ರಲ್ಲಿ ದ್ವಿತೀಯ, 2008ರಲ್ಲಿ ತೃತೀಯ, 2009ರಲ್ಲಿ ಪ್ರಥಮ, 2010ರಲ್ಲಿ 4ನೆಯ, 2011ರಲ್ಲಿ 6ನೆಯ, 2012ರಲ್ಲಿ ಪ್ರಥಮ, 2013ರಲ್ಲಿ 3ನೆಯ, 2014ರಲ್ಲಿ 16ನೆಯ, 2015ರಲ್ಲಿ ಪ್ರಥಮ, 2016ರಲ್ಲಿ ದ್ವಿತೀಯ, 2017ರಲ್ಲಿ ಪ್ರಥಮ ಸ್ಥಾನ ಗಳಿಸಿತ್ತು. ದ್ವಿತೀಯ ಪಿಯುಸಿಯಲ್ಲಿ ಈ ಬಾರಿಯೂ ಪ್ರಥಮ ಸ್ಥಾನ ಗಳಿಸಿತ್ತು.

ವಲಯವಾರು ಫ‌ಲಿತಾಂಶ
ಈ ಬಾರಿ ಜಿಲ್ಲೆಯಲ್ಲಿ ಉಡುಪಿ ಉತ್ತರ ವಲಯ ಶೇ.85.83 ಫ‌ಲಿತಾಂಶ ದಾಖಲಿಸಿದೆ. ಉಳಿದಂತೆ ಬೈಂದೂರು ವಲಯ ಶೇ.83.15, ಕುಂದಾಪುರ ಶೇ.85.44, ಕಾರ್ಕಳ ಶೇ.84.06 ಹಾಗೂ ಉಡುಪಿ ದಕ್ಷಿಣ ವಲಯ ಶೇ.79.74 ಫ‌ಲಿತಾಂಶ ದಾಖಲಿಸಿದೆ.

Advertisement

ಒಟ್ಟು 111 ಸರಕಾರಿ ಶಾಲೆ ಗಳ 5,849 ವಿದ್ಯಾರ್ಥಿ ಗಳಲ್ಲಿ 4,972 (ಶೇ.85.01) ಮಂದಿ ತೇರ್ಗಡೆಯಾಗಿ ದ್ದಾರೆ. 71 ಅನು ದಾನಿತ ಶಾಲೆಗಳ 3,280 ವಿದ್ಯಾರ್ಥಿಗಳ ಪೈಕಿ 2,813 (ಶೇ.85.76), 81 ಖಾಸಗಿ ಶಾಲೆಗಳ 3,874 ವಿದ್ಯಾರ್ಥಿಗಳಲ್ಲಿ 3,672 ಮಂದಿ (ಶೇ.94.79) ತೇರ್ಗಡೆಯಾಗಿದ್ದಾರೆ.

11 ಸರಕಾರಿ ಶಾಲೆಗಳಿಗೆ ಶತ ಪ್ರತಿಶತ
ಒಟ್ಟು 36 ಶಾಲೆಗಳು ಶೇ.100 ಫ‌ಲಿತಾಂಶ ದಾಖಲಿಸಿದ್ದು, 11 ಸರಕಾರಿ ಶಾಲೆಗಳು.

ದಕ್ಷಿಣ ಕನ್ನಡ: ಮೂರು ವರ್ಷಗಳಿಂದ ಫಲಿತಾಂಶ ಕುಸಿತ
ಮಂಗಳೂರು: ಎಸೆಸೆಲ್ಸಿ ಶೇಕಡಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ರ್‍ಯಾಂಕ್‌ ಪಟ್ಟಿಯಲ್ಲಿ 3 ವರ್ಷಗಳಿಂದ ಕುಸಿತ ಕಾಣುತ್ತಿದೆ. 2016-17ನೇ ಸಾಲಿನಲ್ಲಿ ಶೇ.82.39 ಫಲಿತಾಂಶದೊಂದಿಗೆ 2ನೇ ಸ್ಥಾನದಲ್ಲಿದ್ದದ್ದು, ಕಳೆದ ವರ್ಷ ಶೇ.85.61 ಫಲಿತಾಂಶದೊಂದಿಗೆ 4ನೇ ಸ್ಥಾನಕ್ಕಿಳಿದಿತ್ತು. ಈ ಬಾರಿ ಶೇ.86.85 ಫಲಿತಾಂಶದಿಂದ 7ನೇ ಸ್ಥಾನಕ್ಕಿಳಿದಿದೆ.

ಈ ಬಾರಿಯ ಫಲಿತಾಂಶದಲ್ಲಿ ಶೇಕಡಾವಾರು 1.24 ಏರಿಕೆ ಆಗಿದ್ದರೆ, ಕಳೆದ ಬಾರಿ ಶೇ.3.22ರಷ್ಟು ಏರಿಕೆಯಾಗಿತ್ತು.

ತಾಲೂಕುವಾರು ಬೆಳ್ತಂಗಡಿ ಪ್ರಥಮ
ತಾಲೂಕುವಾರು ಫಲಿತಾಂಶದಲ್ಲಿ ಬೆಳ್ತಂಗಡಿ ಮುಂದಿದ್ದು, ಶೇ.91.64ರಷ್ಟು ಫಲಿತಾಂಶ ಲಭಿಸಿದೆ. ಎರಡನೇ ಸ್ಥಾನವನ್ನು ಮೂಡುಬಿದಿರೆ ಪಡೆದಿದ್ದು, ಶೇ. 91.52 ಫಲಿತಾಂಶ ಪಡೆದಿದೆ. ಮಂಗಳೂರು ಉತ್ತರ ಮೂರನೇ ಸ್ಥಾನದಲ್ಲಿದ್ದು, ಶೇ.87.35 ಫಲಿತಾಂಶ ಬಂದಿದೆ. ನಾಲ್ಕನೇ ಸ್ಥಾನದಲ್ಲಿರುವ ಪುತ್ತೂರು ಶೇ.86.44 ಪಡೆದಿದೆ. ಮಂಗಳೂರು ನಗರ ಐದನೇ ಸ್ಥಾನದಲ್ಲಿ ಶೇ.84.97 ಫಲಿತಾಂಶ ಪಡೆದಿದೆ. ಆರನೆಯದಾಗಿ ಸುಳ್ಯವಿದ್ದು, ಶೇ.84.73 ಫಲಿತಾಂಶ ಗಳಿಸಿದೆ. ಬಂಟ್ವಾಳ ಕೊನೆಯ ಸ್ಥಾನವನ್ನು ಪಡೆದಿದ್ದು, ಶೇ.84.19 ಸಾಧಿಸಿದೆ.

ಶೇ.100 ಶಾಲೆಗಳ ಏರಿಕೆ
ಎರಡು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ ಈ ಬಾರಿ ಏರಿಕೆಯಾಗಿದೆ. 2017ರಲ್ಲಿ 9 ಸರಕಾರಿ ಶಾಲೆ, ಒಂದು ಅನುದಾನಿತ ಮತ್ತು 43 ಅನುದಾನ ರಹಿತ ಶಾಲೆಗಳು ಸೇರಿದಂತೆ 53 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದವು. 2018ರಲ್ಲಿ ಈ ಸಂಖ್ಯೆ 66 ಆಗಿತ್ತು. ಈ ಬಾರಿ 17 ಸರಕಾರಿ ಶಾಲೆ, 5 ಅನುದಾನಿತ ಮತ್ತು 62 ಅನುದಾನಿತ ಶಾಲೆಗಳು ಸೇರಿ ಒಟ್ಟಾರೆ 84 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next