Advertisement

ಮಠತ್ತಾರು: ಕಿಂಡಿ ಅಣೆಕಟ್ಟಿನಿಂದ ಜಲ ಸಮೃದ್ಧಿ

10:35 AM Jan 09, 2019 | Team Udayavani |

ಕಾಣಿಯೂರು : ಜಲ ಸಂರಕ್ಷಣೆ ಇಂದು ಅನಿವಾರ್ಯ. ಆರಂಭದಲ್ಲಿ ಅಬ್ಬರಿಸಿದರೂ ಕೊನೆಗೆ ಮಳೆಯ ಪ್ರಮಾಣ ಕಡಿಮೆಯಾಗಿ, ಭೂಮಿಯಲ್ಲಿ ನೀರಿನ ಒಸರು ಕ್ಷೀಣಸಿದೆ. ನೀರಿನ ಸಮಸ್ಯೆ ಅಲ್ಲಲ್ಲಿ ತಲೆದೋರುತ್ತಿದೆ. ಜಲ ಸಂರಕ್ಷಣೆಗೆ ಸರಕಾರದ ಜತೆಗೆ ಸಾರ್ವಜನಿಕರೂ ಮುಂದಾಗಿದ್ದಾರೆ.

Advertisement

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಕೊಳವೆ ಬಾವಿಗಳಿಗೆ ನೀರಿಂಗಿಸುವಿಕೆ, ಇಂಗು ಗುಂಡಿಗಳ ನಿರ್ಮಾಣ, ಕಿಂಡಿ ಅಣೆಕಟ್ಟು, ಡ್ಯಾಮ್‌ಗಳ ನಿರ್ಮಾಣ ಇತ್ಯಾದಿ ಉಪಕ್ರಮಗಳು ನಡೆಯುತ್ತಿವೆ. ದೊಡ್ಡ ನದಿ, ಹೊಳೆಗಳ ನೀರಿನ ಹರಿವಿಗೆ ಅಡ್ಡಲಾಗಿ ಒಡ್ಡುಗಳನ್ನು ಕಟ್ಟಿ, ಅದಕ್ಕೆ ಫೈಬರ್‌ ಅಥವಾ ಮರದ ಹಲಗೆಗಳನ್ನು ಅಳವಡಿಸಿ ನೀರು ಶೇಖರಿಸಲಾಗುತ್ತದೆ.

ಕಾಣಿಯೂರು ಗ್ರಾಮದ ಶ್ರೀ ರಾಮತೀರ್ಥ ಮಠದ ಸಮೀಪದ ಮಠತ್ತಾರು ಎಂಬಲ್ಲಿ 5 ವರ್ಷಗಳ ಹಿಂದೆ ದೊಡ್ಡ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದ್ದು, ಸುಳ್ಯ ಶಾಸಕ ಎಸ್‌. ಅಂಗಾರ ಅವರು ಸಣ್ಣ ಮತ್ತು ಕಿರು ನೀರಾವರಿ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಒದಗಿಸಿದ್ದರು. ಈ ಅಣೆಕಟ್ಟಿನಿಂದ ಈ ಭಾಗದ 50-60 ಮನೆಗಳ ಕೃಷಿ ಚಟುವಟಿಕೆಗಳಿಗೆ ನೀರು ಲಭ್ಯವಾಗುವಂತಾಗಿದೆ.

ಇದರೊಂದಿಗೆ ಪರೋಕ್ಷ ಲಾಭ ಎಂಬಂತೆ ಸುಮಾರು 1ರಿಂದ 2 ಕಿ.ಮೀ. ಆಸುಪಾಸಿನ ಕೆರೆ, ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಠತ್ತಾರು, ಗುಂಡಿಗದ್ದೆ, ಮುಗರಂಜ, ಅನಿಲ, ಕಟ್ಟತ್ತಾರು, ಬಂಡಾಜೆ, ಕಲ್ಪಡ, ಪೆರ್ಲೋಡಿ ಭಾಗದಲ್ಲಿ ಅಂತರ್ಜಲ ಗಣನೀಯವಾಗಿ ಹೆಚ್ಚಳವಾಗಿರುವುದು ಕಂಡುಬರುತ್ತಿದೆ.

ಪ್ರತೀ ವರ್ಷ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಡ್ಯಾಮ್‌ಗೆ ಫೈಬರ್‌ ಹಲಗೆಗಳನ್ನು ಅಳವಡಿಸಲಾಗುತ್ತಿದ್ದು, ಮಳೆಗಾಲ ಆರಂಭವಾದೊಡನೆ ಹಲಗೆ ತೆಗೆದು ನೀರು ಸರಾಗವಾಗಿ ಹರಿಯು ವಂತೆ ಮಾಡಲಾಗುತ್ತದೆ. ಸ್ಥಳೀಯರು ಒಟ್ಟು ಸೇರಿ ಹಲಗೆ ಜೋಡಿಸುವ ಕೆಲಸ ಮಾಡುತ್ತಾರೆ. ಅಣೆಕಟ್ಟು ನಿರ್ವ ಹಣೆಯ ಹೊಣೆಯೂ ಅವರದೇ. ಈ ಕಿಂಡಿ ಅಣೆಕಟ್ಟಿನಿಂದ ಸುಮಾರು 1 ಕಿ.ಮೀ ದೂರದ ಬೈಲಡ್ಯೆ ಎಂಬಲ್ಲಿ ಇದೇ ರೀತಿಯ ಮತ್ತೂಂದು ಡ್ಯಾಮ್‌ ನಿರ್ಮಾಣ ಮಾಡಲಾಗಿದ್ದು, ಎರಡೂ ಡ್ಯಾಮ್‌ಗಳು ಭರ್ತಿಯಾಗಿ, ಹೆಚ್ಚುವರಿ ನೀರು ಹರಿದು ಹೋಗುತ್ತಿದೆ. ಹೊಳೆಗೆ ಈ ರೀತಿಯ ಕಿಂಡಿ ಅಣೆಕಟ್ಟನ್ನು ಅಲ್ಲಲ್ಲಿ ನಿರ್ಮಾಣ ಮಾಡಿದರೆ ಬಹುತೇಕ ನೀರಿನ ಸಮಸ್ಯೆ ಪರಿಹಾರವಾಗುವುದಲ್ಲದೆ, ಅಂತರ್ಜ ಲದ ವೃದ್ಧಿಗೂ ಸಹಕಾರಿಯಾಗಲಿದೆ.

Advertisement

ಮುಂದಿನ ಪೀಳಿಗೆಗೆ ಉಳಿಸೋಣ
ಹಿಂದೆ ಹಳ್ಳಿಗಳಲ್ಲಿ ಸಣ್ಣ ತೋಡುಗಳಿಗೆ ಮಣ್ಣಿನ ಕಟ್ಟ ನಿರ್ಮಾಣ ಮಾಡಿ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತಿತ್ತು. ಆದರೆ ಈಗ ಸರಕಾರವೇ ಲಕ್ಷಗಟ್ಟಲೆ ರೂ. ವೆಚ್ಚ ಮಾಡಿ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಆದರೆ ಕೆಲವು ಕಡೆ ಇದಕ್ಕೆ ಹಲಗೆಗಳನ್ನು ಜೋಡಿಸದೆ ನೀರು ಹರಿದುಹೋಗುತ್ತಿರುವುದು ಕಂಡುಬಂದಿದೆ. ಮುಂದಿನ ತಲೆಮಾರಿಗಾಗಿ ಹಾಗೂ ಅಂತರ್ಜಲ ವೃದ್ಧಿಗಾಗಿ ಜಲ ಸಂರಕ್ಷಣೆ, ವೈಜ್ಞಾನಿಕ ಕೃಷಿ ಪದ್ಧತಿ ಅನುಷ್ಠಾನ ಅನಿವಾರ್ಯ ಎನ್ನುತ್ತಾರೆ ಕಾಣಿಯೂರು ಗ್ರಾ.ಪಂ. ಸದಸ್ಯ ಸುರೇಶ್‌ ಓಡಬಾಯಿ ಅವರು.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next