ಸತೀಶ್ ಪಾಠಕ, ಗಿರೀಶ್ ಪಟೇಲ್, ಚಂದ್ರಶೇಖರ್ ಮಣೂರ ಹಾಗೂ ಎಸ್.ಡಿ.ಅರವಿಂದ್ ನಿರ್ಮಿಸುತ್ತಿರುವ “ಮಟಾಶ್” ಚಿತ್ರಕ್ಕಾಗಿ ಸುನೀಲ್ ಕುಮಾರ್ ಸುಧಾಕರ್ ಅವರು ಬರೆದಿರುವ, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಾಡಿರುವ “ಚಜ್ಜಿ ರೊಟ್ಟಿ ಚವಲಿಕಾಯಿ’ ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಜಾಪುರದ ಶ್ರೀಸಿದ್ದೇಶ್ವರ ಮಂಗಳ ಕಾರ್ಯಾಲಯದಲ್ಲಿ ಸಾಕಷ್ಟು ಗಣ್ಯರ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು.
ಚಿತ್ರತಂಡದ ಸದಸ್ಯರು ಈ ಸಮಾರಭದಲ್ಲಿ ಭಾಗವಹಿಸಿದ್ದರು. “ಡಿಮಾನಿಟೈಸೇಷನ್ ನಂತರ ನಮ್ಮ ಸುತ್ತಮುತ್ತ ಹಲವು ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. “ಡಿಮಾನಿಟೈಸೇಷನ್ ಸರಿಯೋ.., ಅಥವಾ ತಪ್ಪೋ.., ಇದ್ಯಾವುದರ ಬಗ್ಗೆಯೂ ಚಿತ್ರದಲ್ಲಿ ಚರ್ಚಿಸಿಲ್ಲ. ಆದರೆ ಡಿಮಾನಿಟೈಸೇಷನ್ ನಂತರ ಏನೇನು ಬೆಳವಣಿಗೆಗಳು ನಡೆದವು. ಇದೇ ಪರಿಸ್ಥಿಯನ್ನು ಕೆಲವರು ಹೇಗೆ ತಮ್ಮ ಸ್ವಂತ ಲಾಭಕ್ಕೆ ಬಳಸಿಕೊಂಡರು,
ಹಣದ ಬದಲಾವಣೆ ಹೇಗೆಲ್ಲಾ ನಡೆಯಿತು. ನಿಜವಾಗಿಯೂ ಇದರಿಂದ ಪ್ರಯೋಜನವಾಗಿದ್ದು ಯಾರಿಗೆ..? ಇಂತಹ ಸಂಗತಿಗಳ ಸುತ್ತ ಸಿನಿಮಾ ಸಾಗುತ್ತದೆ’ ಎನ್ನುವುದು ಅರವಿಂದ್ ಮಾತು. ಚಿತ್ರದಲ್ಲಿ ಸಮರ್ಥ ನರಸಿಂಹರಾಜು, ಐಶ್ವರ್ಯ ಸಿಂಧೋಗಿ, ರಜನಿ ಭಾರದ್ವಾಜ್, ರಘು ರಮಣಕೊಪ್ಪ, ಮನೋಹರ್, ನಂದಗೋಪಾಲ್, ಸದಾನಂದ್ ಕಾಳಿ, ರಕಿರಣ್ ರಾಜೇಂದ್ರನ್, ಸಿದ್ದಾಂತ್ ಸುಂದರ್ ನಟಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಕೂಡ ನಿರ್ದೇಶಕ ಅರವಿಂದ್ ಎಸ್.ಡಿ ಅವರೇ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ವಿಜಯ ಪ್ರಕಾಶ್, ಪುನೀತ್ ರಾಜಕುಮಾರ್ ಮೊದಲಾದ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇನ್ನು ಚಿತ್ರದ ಹಿನ್ನೆಲೆ ಸಂಗೀತವನ್ನು ಅರವಿಂದ್ ಮತ್ತು ವಿಜಯ್ ಕೃಷ್ಣ ಜಂಟಿಯಾಗಿ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಾನಿ ಅಬ್ರಾಹಂ ಛಾಯಾಗ್ರಹಣ, ವಿನೋದ್ ಬಸವರಾಜ್ ಸಂಕಲನವಿದೆ.