ಉಪ್ಪಿನಂಗಡಿ : ಕುಂಟುತ್ತ ಸಾಗಿದ ಕಾಮಗಾರಿ ಕೊನೆಗೂ ಮುಗಿಯಿತು. ಇನ್ನಾದರೂ ಹೊಸ ಕೊಠಡಿಯಲ್ಲಿ ಭಯವಿಲ್ಲದೆ ಕುಳಿತು ಪಾಠ ಕೇಳಬಹುದು ಎಂದು ಈ ಸರಕಾರಿ ಶಾಲೆಯ ಮಕ್ಕಳು ನಿರೀಕ್ಷಿಸುತ್ತಿದ್ದಾರೆ. ಆದರೆ, ಕೊಠಡಿಗಳ ಉದ್ಘಾಟನೆಗೆ ದಿನಾಂಕ ನಿಗದಿಯಾಗದೆ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ.
ಇಲ್ಲಿನ ಮಠ ಹಿರ್ತಡ್ಕ ಸರಕಾರಿ ಉನ್ನತಿಕರಿಸಿದ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಜೀರ್ಣಾವಸ್ಥೆಯಲ್ಲಿದ್ದವು. ಉದಯವಾಣಿ ಸುದಿನ ನಾಲ್ಕು ಕಂತುಗಳಲ್ಲಿ ಮಠ ಹಿರ್ತಡ್ಕ ಶಾಲೆಯ ದುಃಸ್ಥಿತಿಯನ್ನು ವಿವರಿಸಿತ್ತು. ಗ್ರಾಮಾಂತರ ಪ್ರದೇಶದ ಈ ಶಾಲೆ ಏಳನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿದ್ದರೂ ಮಕ್ಕಳು ಕೊಠಡಿ ಕೊರತೆಯಿಂದ ಸಮಸ್ಯೆ ಎದುರಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಖುದ್ದು ಪರಿಶೀಲಿಸಿ, ಹೊಸ ಕಟ್ಟಡ ನಿರ್ಮಾಣವಾಗುವ ತನಕ ಮುಖ್ಯ ಶಿಕ್ಷಕರ ಕೊಠಡಿಯನ್ನೇ ಮಕ್ಕಳ ಪಾಠ ಪ್ರವಚನಕ್ಕೆ ಬಳಸುವಂತೆ ಸೂಚಿಸಿ, ಸ್ಥಳದಲ್ಲಿದ್ದು ತರಗತಿಯನ್ನು ವರ್ಗಾಯಿಸಿದ್ದರು.
ಶಾಲಾಭಿವೃದ್ಧಿ ಸಮಿತಿಯೂ ಎಚ್ಚೆತ್ತು, ಮಾಜಿ ಅಧ್ಯಕ್ಷ ಆದಂ ಕೊಪ್ಪಳ ಹಾಗೂ ಸಮಿತಿ ಸದಸ್ಯರು ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ 7 ಲಕ್ಷ ರೂ. ಹಾಗೂ ಶಾಸಕರ ಪ್ರಾದೇಶಿಕ ಅಭಿವೃದ್ಧಿ ಯೋಜನೆಯಡಿ 8 ಲಕ್ಷ ರೂ. ಮಂಜೂರು ಮಾಡಿಸಿದ್ದರು. ಮೂರು ಕೊಠಡಿಗಳ ನಿರ್ಮಾಣ ಕಾಮಗಾರಿ ಮಂಜೂರಾಗಿ, ಗುತ್ತಿಗೆದಾರರು ಬಹುತೇಕ ಕೆಲಸ ನಿರ್ವಹಿಸಿದರು. ಆದರೆ. ಕೊನೆ ಗಳಿಗೆಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ನೆಲ ಸಾರಣೆ ಸೇರಿಕೊಂಡಿಲ್ಲ ಎಂಬ ಕುಂಟು ನೆಪ ಹೇಳಿ ಗುತ್ತಿಗೆದಾರರು ಕಾಮಗಾರಿ ಬಾಕಿ ಉಳಿಸಿ ನುಣುಚಿಕೊಂಡಿದ್ದರು. ಶಾಲಾಭಿವೃದ್ಧಿ ಸಮಿತಿ ತಾಲೂಕು ಕೇಂದ್ರದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಶಾಲೆಯ ಅವ್ಯವಸ್ಥೆ ಕುರಿತು ಮನವರಿಕೆ ಮಾಡಿಕೊಟ್ಟಿತು. ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಬಳಿಕ ಅಭಿಯಂತರು ಬದಲಿ ಗುತ್ತಿಗೆದಾರರಿಗೆ ನೆಲ ಸಾರಣೆ ಕಾಮಗಾರಿ ವಹಿಸಿ, ಇದೀಗ ಪೂರ್ಣಗೊಂಡಿದೆ. ಉದ್ಘಾಟನೆಯ ದಿನಕ್ಕಾಗಿ ಕಾಯುತ್ತಿದೆ.
ಮೇಲಧಿಕಾರಿಗಳ ಸೂಚನೆಯಂತೆ ಕೊಠಡಿಗಳ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ನೆಲಸಾರಣೆ ಕಾಮಗಾರಿಯ ಅಂದಾಜು ವೆಚ್ಚವನ್ನು ಇನ್ನಷ್ಟೇ ನಿಗದಿ ಮಾಡಬೇಕಾಗಿದೆ. ಈ ಹಿಂದಿನ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದ ಟೆಂಡರ್ ನಲ್ಲಿ ನೆಲ ಸಾರಣೆ ಸೇರಿಕೊಳ್ಳದೇ ಇದ್ದುದು ವಿಳಂಬಕ್ಕೆ ಕಾರಣವಾಗಿತ್ತು ಎಂದು ಎಂಜಿನಿಯರ್ ವಿವರಿಸಿದ್ದಾರೆ.
ಶೀಘ್ರದಲ್ಲೇ ದಿನಾಂಕ ನಿಗದಿ
ಶಾಲಾಭಿವೃದ್ಧಿ ಸಮಿತಿಯು ಮಕ್ಕಳ ಹೆತ್ತವರ ಸಭೆ ಕರೆದು ಕೊಠಡಿಗಳ ಉದ್ಘಾಟನೆಗೆ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಾಲೆಯ ಮುಖ್ಯ ಶಿಕ್ಷಕಿ ಉದಯವಾಣಿಗೆ ತಿಳಿಸಿದ್ದಾರೆ.