ಮೈಸೂರು: ತ್ರಿವಿಧ ದಾಸೋಹದ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿರುವ ಸುತ್ತೂರು ಮಠ ಶಿಕ್ಷಣದೊಂದಿಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿಯೂ ಅಪಾರ ಸೇವೆ ಸಲ್ಲಿಸುತ್ತಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಶ್ಲಾಘಿಸಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹೊರ ತಂದಿರುವ ವೀರಶೈವ-ಲಿಂಗಾಯತ ಪಾರಿಭಾಷಿಕ ಪದಕೋಶ ಸಂಸ್ಕೃತ ಗ್ರಂಥದ ಅನುವಾದಿತ ಶಿವಪದ ರತ್ನಕೋಶ ಗ್ರಂಥವನ್ನು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿದರು.
ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆನ್‌ಲೈನ್ ಮೂಲಕವೇ ಮಾತನಾಡಿ, ಶ್ರೀಮಠ ಬಡಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ, ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ. ಇದೀಗ ಶಿವಪದ ರತ್ನಕೋಶದಂತಹ ಬೃಹತ್ ಗ್ರಂಥ ಬಿಡುಗಡೆ ಶ್ಲಾಘನೀಯ ಸಂಗತಿ. ಈ ಗ್ರಂಥ ವಚನ ಸಂಸ್ಕೃತಿ, ವೀರಶೈವ ಸಾಹಿತ್ಯ ಸೇರಿ ಶಿವಧರ್ಮ ಸಂಸ್ಕೃತಿ ಪರಿಚಯಿ ಸುವ ಜ್ಞಾನ ಭಂಡಾರವಾಗಿದೆ. ಜೆಎಸ್ ಎಸ್ ಮಹಾವಿದ್ಯಾಪೀಠ 300ಕ್ಕೂ ಹೆಚ್ಚು ಗ್ರಂಥ ಗಳನ್ನು ಹೊರ ತಂದು ಸಾಹಿತ್ಯ ಕ್ಷೇತ್ರದಲ್ಲೂ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಎಲ್ಲರೂ ಓದಬೇಕಾದ ಗ್ರಂಥ: ಆನ್‌ಲೈನ್ ಮೂಲಕವೇ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿವಪದ ರತ್ನಕೋಶ ಎಲ್ಲರೂ ಓದಲೇಬೇಕಾದ ಅತ್ಯುತ್ತಮ ಗ್ರಂಥ. ಉತ್ತಮ ಬದುಕಿಗೆ ಮಾರ್ಗದರ್ಶಕ ಗ್ರಂಥ ಇದಾಗಿದ್ದು, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು. ಡಿಸಿಎಂ ಗೋವಿಂದ ಕಾರಜೋಳ , ಸಿದ್ಧ ಗಂಗಾ ಮಠದ ಸಿದ್ಧಲಿಂಗ ಶ್ರೀ, ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆನ್‌ಲೈನ್ ಮೂಲಕವೇ ಆಶೀರ್ವಚನ ನೀಡಿದರು. ಸಚಿವ ಸಿ.ಟಿ.ರವಿ ಭಾಗವಹಿಸಿದ್ದರು.
ಶಿವಪದ ರತ್ನಕೋಶದ ಕಾರ್ಯನಿರ್ವಾಹಕ ಸಂಪಾದಕ ಡಾ.ನಂದೀಶ್ ಹಂಚೆ, ಗ್ರಂಥ ಸಂಪಾದಕ ಮಂಡಳಿಯ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ, ಡಾ.ಟಿ.ವಿ.ವೆಂಕಟಾಚಲಶಾಸ್ತ್ರೀ, ಎಚ್.ವಿ.ನಾಗರಾಜರಾವ್, ಡಾ.ಸಿ.ಶಿವಕುಮಾರ ಸ್ವಾಮಿ, ಡಾ.ಎನ್.ಎಸ್.ತಾರಾನಾಥ್, ಆರ್.ಎಸ್. ಪೂರ್ಣಾನಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಂಸದ ಪ್ರತಾಪಸಿಂಹ, ಆರ್.ಧರ್ಮಸೇನಾ, ಜೆಎಸ್‌ಎಸ್ ಸಿಇಒ ಡಾ.ಸಿ.ಜಿ.ಬೆಟಸೂರು ಮಠ ಭಾಗವಹಿಸಿದ್ದರು.