Advertisement

ಹಾಲು ಮಾರದ-ಮಾರುವ ಕಾಲಘಟ್ಟಗಳ ನಡುವೆ…

05:17 PM Nov 06, 2021 | Team Udayavani |

“ಕನ್ನಡದ ಆಸ್ತಿ’ ಎಂದು ಹೆಸರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ (6.6.1891 - 6.6.1986) ಮೈಸೂರು ರಾಜ್ಯದಲ್ಲಿ 1914ರಿಂದ 1943ರ ವರೆಗೆ ಹಿರಿಯ ಸರಕಾರಿ ಅಧಿಕಾರಿಯಾಗಿದ್ದರು. ಸರ್‌| ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ವೇಳೆ ಸಹಾಯಕ ಕಮಿಷನರ್‌ ಆಗಿ ಕೋಲಾರ ತಾಲೂಕಿನಲ್ಲಿ ಜಮಾಬಂದಿ ಹೊಣೆ ಹೊತ್ತರು. ಆಗ ಜೀಪು, ಕಾರುಗಳೆಲ್ಲ ಇರಲಿಲ್ಲ. ಕುದುರೆಯನ್ನೇರಿ ಹೋಗಬೇಕು. ಗ್ರಾಮಗಳಲ್ಲಿ ಠಿಕಾಣಿ ಹೂಡಬೇಕು. ಒಂದು ದಿನ ಹೋಗುವಾಗ ಕೊಂಡೊಯ್ದ ಹುರುಳಿಯನ್ನು ರಾತ್ರಿ ಕುದುರೆಗೆ ಬೇಯಿಸಿ ಹಾಕಲು ಹೇಳಿ, ಅವಲಕ್ಕಿಯನ್ನು ತಾನು ತಿಂದರು. ಊರಿನ ಪಟೇಲರು ಹಾಲು ತಂದು ಕೊಟ್ಟರು. ಮರುದಿನ ಹೊರಡುವಾಗ ಜನರು ಬೀಳ್ಕೊಡಲು ಬಂದಿದ್ದರು.

Advertisement

“ಪಟೇಲರೇ ರಾತ್ರಿ ಕೊಟ್ಟ ಹಾಲು ಬಹಳ ರುಚಿಯಾಗಿತ್ತು’ ಎಂದಾಗ ಪಟೇಲರು ಹಿಗ್ಗಿ ಹೋದರೆ, ಆ ಬಾಬ್ತು ನಾಲ್ಕಾಣೆ ಕೊಡಲು ಹೋದಾಗ ಬೆಚ್ಚಿ ಬಿದ್ದರು. ಹಾಲು ಮಾರುವುದನ್ನು ಜನರು ಇನ್ನೂ ಕಲಿತಿರಲಿಲ್ಲ. ಅವರ ನಡುವಣ ಮಾತುಕತೆ ಹೀಗಿದೆ:

ಪಟೇಲ್‌ ಗೌಡರು: ಎಲ್ಲಿಯಾದರೂ ಹಾಲು ಮಾರುವುದು ಉಂಟೆ ಸ್ವಾಮಿ?

ಮಾಸ್ತಿ: ಈ ಹಣವನ್ನು ಸರಕಾರ ನನಗೆ ಕೊಡುತ್ತೆ. ನಾನು ಕೊಡದೆ ಇದ್ದರೆ ನನ್ನಲ್ಲೇ ಉಳಿದು ಹೋಗುತ್ತೆ. ಅದು ಅನ್ಯಾಯವಲ್ಲವೆ?

ಗೌಡರು: ತಮ್ಮೊಂದಿಗೆ ಮಾತನಾಡುವ ಶಕ್ತಿ ನನಗಿಲ್ಲ. ಇದು ನಾನು ಹಣ ಕೊಟ್ಟು ತಂದ ಹಾಲಲ್ಲ. ನಮ್ಮೂರಲ್ಲಿ ಯಾರೂ ಹಾಲು ಮಾರೋಲ್ಲ. ಮನೆಯಲ್ಲಿ ಹಸು, ಎಮ್ಮೆ ಹಾಲು ಕೊಡುತ್ತದೆ. ಹೀಗಿರುವಾಗ ಹಾಲಿಗೆ ಹಣ ತೆಗೆದುಕೊಂಡು ಯಾವ ಪಾಪಕ್ಕೆ ಹೋಗಲಿ. ಹಾಲು ಅಂದರೆ ಅಮೃತವಲ್ಲವೇ? ಅಮೃತಾನ ಮಾರ್ತಾರಾ? ಕೇಳಿದವರು ಛೀಮಾರಿ ಹಾಕ್ತಾರೆ.

Advertisement

ಮಾಸ್ತಿ: ಈ ನಾಲ್ಕಾಣೆ ತೆಗೆದುಕೊಳ್ಳಿ. ಅನಂತರ ಕೇಳಿ.

ಮಾಸ್ತಿ: ಈ ಹಣದಲ್ಲಿ ಎಣ್ಣೆ ಕೊಂಡು ನಿಮ್ಮೂರಿನ ಹನುಮಪ್ಪನ ಗುಡಿಯಲ್ಲಿ ದೀಪ ಹಚ್ಚಿಸಿ. ಆಗ ನೀವು ಹಾಲು ಮಾರಲೂ ಇಲ್ಲ, ನಾನು ಪುಕ್ಕಟೆ ಕುಡಿಯಲೂ ಇಲ್ಲ.

ಎಲ್ಲರೂ “ಇದು ಒಪ್ಪುವ ಮಾತು’ ಎಂದರು. ಸೇರಿದವರು ತಮ್ಮ ಪಾಲಿನ ಹಣ ಹಾಕಿದರು.

ಗೌಡರು: ನೋಡ್ರಪ್ಪಾ ಎಷ್ಟೊಂದು ಹಣ ಸೇರಿತು? ನಿಮಗೆಲ್ಲ ಊಟದ ವ್ಯವಸ್ಥೆ ಆಗುತ್ತೆ. ರಾತ್ರಿ ನಮ್ಮೂರಿನ ಎಲ್ಲ ದೇವಸ್ಥಾನಗಳಲ್ಲೂ ವಿಶೇಷ ಪೂಜೆ, ಭಜನೆ ಮಾಡಿಸೋಣ.

ಹೀಗೆಯೇ ಆಯಿತು.

***

ಸ್ವಾತಂತ್ರ್ಯ ಸಿಕ್ಕಿದ ಬಳಿಕ ಜನಸಂಖ್ಯೆ ವೃದ್ಧಿಯಾಯಿತು. 1970ರ ದಶಕದಲ್ಲಿ ಮಿಶ್ರತಳಿ ಮೂಲಕ ಕ್ಷೀರ ಕ್ರಾಂತಿ ಬಂತು.

ದೇಶೀ ತಳಿಗಳಲ್ಲಿ ಹಾಲು, ಮಾಂಸದ ಪ್ರಮಾಣ ಕಡಿಮೆ, ಹಾಲಿನ ಗುಣಮಟ್ಟ, ರೋಗನಿರೋಧಕ ಶಕ್ತಿ, ಉಷ್ಣ ಸಹಿಷ್ಣುತೆ ಶಕ್ತಿ ಹೆಚ್ಚು. ವಿದೇಶೀ ತಳಿಗಳಲ್ಲಿ ಹಾಲು, ಮಾಂಸದ ಪ್ರಮಾಣ ಹೆಚ್ಚು, ಹಾಲಿನ ಗುಣಮಟ್ಟ, ರೋಗನಿರೋಧಕ ಶಕ್ತಿ, ಉಷ್ಣ ಸಹಿಷ್ಣುತೆ ಶಕ್ತಿ ಕಡಿಮೆ. ಈ ಗುಣಗಳು ಆನುವಂಶಿಕವಾಗಿ ಬಂದವು. ಇವೆರಡರ ಮಿಶ್ರಣವಾದ ಈ ಮಿಶ್ರ ತಳಿಯಲ್ಲಿ ಎರಡರ ಗುಣ, ಅವಗುಣಗಳು ಬಂದವು. ಅಧಿಕ ಹಾಲು, ಮಾಂಸ ಉತ್ಪಾದನೆ ಸಾಧ್ಯವಾಯಿತು. ಕ್ರಮೇಣ ವಿದೇಶೀ ವಂಶವಾಹಿಗಳ ಪ್ರಮಾಣ ಶೇ.95 ಮೀರಿತು. ಇದೇ ಕಾರಣಕ್ಕೆ ಕಾಲು ಬಾಯಿ ಜ್ವರ, ಕೆಚ್ಚಲುಬಾವು ಕಾಯಿಲೆಗಳು ಹೆಚ್ಚಿವೆ. ಈಗ ಮತ್ತೆ ದೇಸೀ ದನಗಳ ಹಾಲು ಆರೋಗ್ಯದಾಯಿ ಎಂಬ ಸಂದೇಶಗಳು ಬರುತ್ತಿವೆ. ಆದರೆ ಮಿಶ್ರ ತಳಿಗಳ ಧಾವಂತದಲ್ಲಿ ದೇಶೀ ತಳಿಗಳಂತೆ ನಾಟಿ ಪಶುವೈದ್ಯರೂ ಅಳಿವಿನಂಚಿನಲ್ಲಿದ್ದಾರೆ.

ಕೃತಕ ಗರ್ಭಧಾರಣೆ ಬಳಿಕ ಎತ್ತುಗಳು (ಹೋರಿ, ಬಸವ) ಅನಗತ್ಯವಾದವು. ಎತ್ತುಗಳ ಸಂಖ್ಯೆ ಕಡಿಮೆಯಾದಾಗ ಕೃಷಿಗೆ ಯಾಂತ್ರೀಕರಣ ಅಗತ್ಯವಾಯಿತು. ಜಾನುವಾರುಗಳ ಸಹಜ ಗೊಬ್ಬರ ಕಡಿಮೆಯಾಗಿ ರಾಸಾಯನಿಕ ಗೊಬ್ಬರ ಹುಟ್ಟಿತು. ರಸಗೊಬ್ಬರದಿಂದ ಉತ್ಪನ್ನವಾದ ಧಾನ್ಯ ಮತ್ತು ಕಲಬೆರಕೆ ಪಶು ಆಹಾರ, ರೋಗನಿರೋಧಕ ಶಕ್ತಿ ಕಡಿಮೆ ಇರುವ ದನಗಳಿಂದ ಬಂದ ಹಾಲಿ ನಿಂದ ಮನುಷ್ಯರ ಆರೋಗ್ಯ ಕುಂಠಿತ ವಾಯಿತು. ಔಷಧಗಳನ್ನು ಕಂಡು ಹಿಡಿದರು, ವೆಚ್ಚ ಹೆಚ್ಚಾದಾಗ ವಿಮಾ ಯೋಜನೆ ಗಳು ಜಾರಿಗೆ ಬಂದವು. ಇವೆಲ್ಲವೂ ಉದ್ಯಮ ವಾದವು. ಈಗ ಸಾವಯವ ಕೃಷಿ ಆರೋಗ್ಯವರ್ಧಕ ಎನ್ನುತ್ತಿದ್ದಾರೆ.

ಜನರ ತೆರಿಗೆ ಹಣದಲ್ಲಿಯೇ ಎಲ್ಲ ಸಂಶೋಧನೆಗಳು ನಡೆದವು, ಸಮ್ಮಾನಿತರಾದರು, ವ್ಯವಸ್ಥೆಗಳು ಏರುಪೇರಾದವು. ಈಗ ಮತ್ತೆ ಸರಕಾರವೇ ದೇಶೀ ತಳಿಗಳ ಸಂರಕ್ಷಣೆಗೆ, ಸಾವಯವ ಕೃಷಿಗೆ ಯೋಜನೆಗಳನ್ನು ರೂಪಿಸಿವೆ. ಕೃಷಿ (ಪಾರಂಪರಿಕ ವಿದ್ಯಾವಂತರು) ಮತ್ತು ಕೃಷಿಯೇತರರ (ಆಧುನಿಕ ವಿದ್ಯಾವಂತರು) ನಡುವೆ ತಾರತಮ್ಯ, ಮೇಲುಕೀಳು ಉಂಟಾಗಿ ಕೃಷಿ ಅವಲಂಬಿತರು ಕಡಿಮೆ ಯಾಗಿ ನಿರುದ್ಯೋಗಿಗಳು ಹೆಚ್ಚಾದರು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸುತ್ತಲೇ ಇರುತ್ತಾರೆ. ಆದ ಅನಾಹುತಗಳಿಗೆ ಬೆಲೆ ತೆರುವವರಾರು? ವ್ಯವಸ್ಥೆಗಳನ್ನು ಕೆಡಿಸಿ ಮತ್ತೆ ಹಳಿಗೆ ತರುವುದು ಸಾಧ್ಯವೆ? ದೊಡ್ಡ ವ್ಯಕ್ತಿಗಳು ಮಾಡಿದ ನೀತಿ, ಸಣ್ಣ ವ್ಯಕ್ತಿಗಳು ಅನುಭವಿಸಬೇಕು. ಒಂದೆಡೆ ಚಿವುಟಿ ಮತ್ತೂಂದೆಡೆ ಎಣ್ಣೆ ಸವರಿ ಜನಪ್ರಿಯತೆ ಗಳಿಸುವ ಅನೇಕ ಯೋಜನೆಗಳಿವೆ. ಎಲ್ಲದಕ್ಕೂ ತಲೆ ಅಲ್ಲಾಡಿಸುವ ಜನರ ಮನಃಸ್ಥಿತಿ ಮುಗ್ಧತೆಯೆ? ಅಜ್ಞಾನವೆ?

ಒಂದೆಡೆ ಪ್ಲೇಗ್‌, ಕಾಲರಾ ದಾಳಿ, ಇನ್ನೊಂದೆಡೆ ರೋಗ ನಿರ್ಮೂಲನಾಧಿಕಾರಿಯಾಗಿಯೂ ಶುದ್ಧ ಹಾಲು ಕುಡಿದ, ಶುದ್ಧ ಮನಸ್ಸಿನ ಮಾಸ್ತಿ 95 ವರ್ಷ ಬದುಕಿದ್ದರು. ನೂರು ವರ್ಷಗಳ ಹಿಂದೆ ಹಾಲು, ಮೊಸರು, ಬೆಣ್ಣೆ, ತುಪ್ಪ ಸಮೃದ್ಧವಾಗಿ ಶುದ್ಧವಾಗಿ ಸಿಗುತ್ತಿದ್ದ ಕಾಲ. ಜನರು ಹೇಗಿದ್ದರೆಂಬುದಕ್ಕೆ ಮಾಸ್ತಿ, ಗೌಡರು ಉದಾಹರಣೆ. ಈಗಿನ ವಿದ್ಯಮಾನಗಳಿಗೆ ನಾವೆಲ್ಲರೂ ಸಾಕ್ಷಿಗಳು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next