ಎಂ.ಮೂರ್ತಿ
ಮಾಸ್ತಿ: ಸರ್ಕಾರ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಕೋಟ್ಯಂತರ ರೂ.ವೆಚ್ಚ ಮಾಡುತ್ತಿದೆ. ಆದರೆ, ಆ ಯೋಜನೆಗಳ ಸಮರ್ಪಕ ಬಳಕೆಯಾಗದೆ ಸರ್ಕಾರದ ಹಣ ಯಾವ ರೀತಿ ವ್ಯರ್ಥವಾಗುತ್ತಿದೆ ಎಂಬುದಕ್ಕೆ ಮಾಸ್ತಿ ಹೋಬಳಿಯ ತುರುಣಿಸಿ ಗ್ರಾಪಂ ವ್ಯಾಪ್ತಿಯ ಕಾಂಚಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೊಸ ಕಟ್ಟಡವೇ ಪ್ರಮುಖ ಸಾಕ್ಷಿಯಾಗಿದೆ.
ಶಾಲೆಯಲ್ಲಿ ಈ ಹಿಂದೆ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಸರ್ಕಾರ 2005ರಲ್ಲಿ ಹೊಸ ಕಟ್ಟಡವನ್ನು ಮಂಜೂರು ಮಾಡಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡು 14 ವರ್ಷ ಕಳೆದರೂ ಶಾಲಾ ಕಟ್ಟಡ ಉಪಯೋಗಕ್ಕೆ ಬಾರದೆ ನನೆಗುದಿಗೆ ಬಿದ್ದಿದ್ದು, ಕಟ್ಟಡದ ಗೋಡೆಗಳು ಬಿರುಕು ಬಿಡುತ್ತಿವೆ.
ಕಟ್ಟಡದ ಒಳಗೆ ತ್ಯಾಜ್ಯ ವಸ್ತುಗಳನ್ನು ಹಾಕಲಾಗಿದೆ. ಶಾಲೆಗೆ ಸಮರ್ಪಕ ಕಾಂಪೌಂಡ್ ಹಾಗೂ ಆಟದ ಮೈದಾನವೂ ಇಲ್ಲದ ಕಾರಣ ಕಟ್ಟಡಕ್ಕೆ ರಕ್ಷಣೆ ಇಲ್ಲದೆ ಪಾಳುಬಿದ್ದಿದೆ. ಕಟ್ಟಡ ಸುತ್ತಲು ಹಾಗೂ ಆವರಣದಲ್ಲಿ ಗಿಡಗಂಟಿಗಳು ಬೆಳೆದು ವಿಷ ಜಂತುಗಳು ಸೇರಿಕೊಂಡಿವೆ.
ಕೊಠಡಿಯೇ ಇಲ್ಲ: ಕಾಂಚಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 24 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಕಾರ್ಯ ನಿರ್ವಸುತ್ತಿದ್ದಾರೆ. ಈ ಶಾಲೆಗೆ ಇರುವ 2 ಕೊಠಡಿಗಳು ಹಳೆಯದಾಗಿದ್ದು, ಕೊಠಡಿಯ ಗೋಡೆಗಳು ಬಿರುಕು ಬಿಡುತ್ತಿವೆ. ಅಲ್ಲದೆ, ಕಿಟಕಿ ಬಾಗಿಲುಗಳು ಸಹ ಕಿತ್ತು ಹೋಗಿವೆ. ಇದರಿಂದ ಮಕ್ಕಳ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಈಗಿರುವ ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಆದರೆ, ಮಕ್ಕಳಿಗೆ ಅವಶ್ಯಕವಿರುವ ಕೊಠಡಿಗಳೇ ಇಲ್ಲವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ತುರುಣಿಸಿ ಗ್ರಾಪಂನಿಂದ ಎನ್‌ಆರ್‌ಇಜಿಎ ಯೋಜನೆಯಡಿಯಲ್ಲಿ 2010-11ನೇ ಸಾಲಿನಲ್ಲಿ ನೂತನ ಕಟ್ಟಡಕ್ಕೆ ಆಟದ ಮೈದಾನದ ಸಮತಟ್ಟು ಹಾಗೂ ಕಾಂಪೌಂಡ್ ಕಾಮಗಾರಿಗೆ 1.50 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಆದರೆ, ಕಾಂಪೌಂಡ್ ಹಾಗೂ ಆಟದ ಮೈದಾನ ಅರ್ಧಕ್ಕೆ ನಿಂತು 8 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. 2013ರಲ್ಲಿ ಮತ್ತೆ ಕಾಂಪೌಂಡ್ ನಿರ್ಮಾಣಕ್ಕೆ 1.50 ಲಕ್ಷ ರೂ. ವೆಚ್ಚ ಮಾಡಿರುವ ಬಗ್ಗೆ ಶಾಲಾ ಕಟ್ಟಡದ ಮೇಲೆ ನಾಮಫಲಕ ಬರೆಸಲಾಗಿದೆ.
ಆದಷ್ಟು ಬೇಗನೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, 14 ವರ್ಷಗಳ ಹಿಂದೆ ನಿರ್ಮಿಸಿರುವ ಶಾಲಾ ಕಟ್ಟಡವನ್ನು ದುರಸ್ತಿ ಪಡಿಸಿ, ಅರ್ಧಕ್ಕೆ ನಿಂತುಹೋಗಿರುವ ಕಾಂಪೌಂಡ್ ಹಾಗೂ ಆಟದ ಮೈದಾನ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.