Advertisement

ಮಾಸ್ಟರ್ಸ್ ಅತ್ಲೆಟಿಕ್ಸ್ ಚಾಂಪಿಯನ್ಸ್ ಕ್ರೀಡಾಕೂಟ: ಮಣಿಪಾಲದ ನಂದಿನಿ ಭಟ್ ಐದು ಚಿನ್ನದ ಸಾಧನೆ

09:55 AM Feb 18, 2020 | Hari Prasad |

ಉಡುಪಿ: ಮಾಸ್ಟರ್ಸ್ ಗೇಮ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಮೂರನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಮಣಿಪಾಲದ ನಂದಿನಿ ಭಟ್ ಅವರು ತಾವು ಸ್ಪರ್ಧೆ ಮಾಡಿದ್ದ ಎಲ್ಲಾ ಐದು ವಿಭಾಗಗಳಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಮೋಘ ಸಾಧನೆಯನ್ನು ಮಾಡಿದ್ದಾರೆ.

Advertisement

ಹಾಗೂ ಇವರ ತರಬೇತುಗಾರ್ತಿ ಪ್ರದೀಪ ಅವರು ಒಟ್ಟಾರೆ ಐದು ವಿಭಾಗಗಳಲ್ಲಿ ಭಾಗವಹಿಸಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಗೆದ್ದಿದ್ದಾರೆ. ಇವರಿಬ್ಬರೂ ಮಣಿಪಾಲದಲ್ಲಿರುವ ಯೋಗಾಂತರ ಸಂಸ್ಥೆಯ ರೂವಾರಿಗಳಾಗಿದ್ದಾರೆ.

200 ಮೀಟರ್, 400 ಮೀಟರ್ ಮತ್ತು 800 ಮೀಟರ್ ವೈಯಕ್ತಿಕ ವಿಭಾಗದಲ್ಲಿ ಹಾಗೂ 4×100 ಮತ್ತು 4×400 ಮೀಟರ್ ತಂಡ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ನಂದಿನಿ ಭಟ್ ಅವರು ಈ ಸುವರ್ಣ ಸಾಧನೆಯನ್ನು ಮಾಡಿದ್ದಾರೆ.


ಗುಜರಾತ್ ನ ವಡೋರದ ಮಂಜಲ್ಪುರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಈ ಕ್ರೀಡಾಕೂಟ ಇತ್ತೀಚೆಗೆ ಸಂಪನ್ನಗೊಂಡಿತ್ತು. ಈ ಸಾಧನೆಯ ಮೂಲಕ ನಂದಿನಿ ಭಟ್ ಅವರು ಇದೇ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾಸ್ಟರ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ನಂದಿನಿ ಭಟ್ ಅವರ ತರಬೇತುಗಾರ್ತಿ ಪ್ರದೀಪ ಎನ್. ಅವರೂ ಸಹ ಈ ರಾಷ್ಟ್ರೀಯ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪ್ರದೀಪ ಅವರು 400 ಮೀಟರ್ ಹರ್ಡಲ್ಸ್, 4×100 ಮತ್ತು4×400 ರಿಲೇ ವಿಭಾಗದಲ್ಲಿ ಚಿನ್ನದ ಪದಕ, 800 ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿಯ ಪದಕ ಹಾಗೂ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.


ಈ ಸಾಧನೆಯ ಮೂಲಕ ಪ್ರದೀಪ ಅವರೂ ಸಹ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಾಸ್ಟರ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Advertisement

ನಂದಿನಿ ಭಟ್ ಮತ್ತು ಪ್ರದೀಪ ಅವರು ಉಡುಪಿಯ ಮಾಸ್ಟರ್ಸ್ ಅತ್ಲೆಟಿಕ್ಸ್ ಮತ್ತು ಗೇಮ್ಸ್ ಅಸೋಸಿಯೇಷನ್ ಮೂಲಕ ಈ ಕೂಟದಲ್ಲಿ ಭಾಗವಹಿಸಿದ್ದರು. ಇವರ ಈ ಸಾಧನೆಗೆ ಉಡುಪಿ ಮಾಸ್ಟರ್ಸ್ ಅತ್ಕೆಟಿಕ್ಸ್ ಹಾಗೂ ಗೇಮ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ ಉದಯ ಕುಮಾರ್ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಈ ಇಬ್ಬರು ಹಿರಿ ಕ್ರೀಡಾಪಟುಗಳ ಸಾಧನೆಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next