ಢಾಕಾ : ಇಂದು ನಸುಕಿನ ವೇಳೆ ಬಾಂಗ್ಲಾ ಪೊಲೀಸರು ನಡೆಸಿದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಇಸ್ಲಾಮಿಕ್ ಉಗ್ರರು ಹತರಾಗಿದ್ದಾರೆ. ಇವರಲ್ಲಿ ಒಬ್ಟಾತನು ಕಳೆದ ವರ್ಷ ಢಾಕಾ ಕೆಫೆ ಮೇಲೆ ನಡೆದಿದ್ದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಎಂದು ಗೊತ್ತಾಗಿದೆ.
ಬಾಂಗ್ಲಾದೇಶದ ಉಗ್ರ ನಿಗ್ರಹ ದಳದ ಸಿಬಂದಿಗಳು ನಡೆಸಿದ ಈ ದಾಳಿಯಲ್ಲಿ ನಿಯೋ ಜಮಾತ್ ಉಲ್ ಮುಜಾಹಿದೀನ್ ನ ಮೋಸ್ಟ್ ವಾಂಟೆಡ್ ನಾಯಕ ನೂರುಲ್ ಇಸ್ಲಾಮ್ ಅಲಿಯಾಸ್ ಮರ್ಜಾನ್ ಮತ್ತು ಇನ್ನೋರ್ವ ಅಪರಿಚಿತ ಉಗ್ರ ಹತರಾಗಿರುವುದಾಗಿ ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿರುವ ಮೊನಿರುಲ್ ಇಸ್ಲಾಂ ತಿಳಿಸಿದ್ದಾರೆ.
ಹತ ಉಗ್ರರಲ್ಲಿ ಮರ್ಜಾನ್ ಎಂಬಾತನು ಕಳೆದ ವರ್ಷ 22 ಮಂದಿಯ ಹತ್ಯೆಗೆ ಕಾರಣವಾದ ಢಾಕಾದ ಗುಲ್‌ಶನ್ ಹೋಲಿ ಆರ್ಟಿಸಾನ್ ಬೇಕರಿಯ ಮೇಲಿನ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ.
ಇನ್ನೊಬ್ಬ ಉಗ್ರನೊಂದಿಗೆ ಮರ್ಜಾನ್ ನಿರ್ದಿಷ್ಟ ತಾಣದಲ್ಲಿ ಅಡಗಿಕೊಂಡಿರುವ ಮಾಹಿತಿ ಪಡೆದ ಉಗ್ರ ನಿಗ್ರಹ ದಳದವರು ನಸುಕಿನ 3 ಗಂಟೆಯ ವೇಳೆಗೆ ದಾಳಿ ನಡೆಸಿದರು.
ಆ ಕೂಡಲೇ ಮರ್ಜಾನ್ ಮತ್ತು ಆತನ ಸಹವರ್ತಿ ಉಗ್ರ ಗುಂಡಿನ ಪ್ರತಿ ದಾಳಿ ನಡೆಸಿದರು. ಗುಂಡಿನ ಕಾಳಗದಲ್ಲಿ ಇಬ್ಬರೂ ಉಗ್ರರು ಗಾಯಗೊಂಡರು.
ಅವರನ್ನು ಆಸ್ಪತ್ರೆಗೆ ಒಯ್ದಾಗ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಘಟನೆಯ ವಿವರ ನೀಡಿರುವ ದಳದ ಮುಖ್ಯಸ್ಥ ಮುನಿರುಲ್ ತಿಳಿಸಿದ್ದಾರೆ.