ನವದೆಹಲಿ: ಬಿಹಾರದ ಸರನ್ ಪ್ರದೇಶದಲ್ಲಿ ನಡೆದ ಕಳ್ಳಭಟ್ಟಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ವ್ಯಕ್ತಿಯನ್ನು ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ಶನಿವಾರ (ಡಿಸೆಂಬರ್ 31) ಬಂಧಿಸಿದ್ದಾರೆ. ಬಿಹಾರದಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.
ಇದನ್ನೂ ಓದಿ:ಕೋವಿಡ್ ನಿಯಂತ್ರಣ: ಜನವರಿ 2ರವರೆಗೆ ಉಡುಪಿ ಜಿಲ್ಲೆಯಲ್ಲಿ ಹೊಸ ನಿಯಮ ಜಾರಿ
ಆರೋಪಿಯನ್ನು ಸರನ್ ಜಿಲ್ಲೆಯ ಡೊಯ್ಲಾ ಗ್ರಾಮದ ನಿವಾಸಿ ರಾಮ್ ಬಾಬು ಮಹತೊ ಎಂದು ಗುರುತಿಸಲಾಗಿದೆ. ಅಪರಾಧ ನಿಗ್ರಹ ವಿಭಾಗದ ವಿಶೇಷ ಪೊಲೀಸ್ ಕಮಿಷನರ್ ರವೀಂದ್ರ ಸಿಂಗ್ ಯಾದವ್ ನೀಡಿರುವ ಮಾಹಿತಿ ಪ್ರಕಾರ, ಮಾಸ್ಟರ್ ಮೈಂಡ್ ಮಹತೋ ದೆಹಲಿಯಲ್ಲಿ ಅಡಗಿರುವ ಸಾಧ್ಯತೆ ಇದೆ ಎಂದು ಅಂತರಾಜ್ಯ ಕ್ರೈಂ ಬ್ರ್ಯಾಂಚ್ ನೀಡಿರುವ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಕ್ರೈಂ ಬ್ರ್ಯಾಂಚ್ ನೀಡಿರುವ ಮಾಹಿತಿಯನ್ನಾಧರಿಸಿ ಆರೋಪಿ ಮಹತೋನನ್ನು ದ್ವಾರಕದಲ್ಲಿ ಬಂಧಿಸಲಾಗಿದೆ ಎಂದು ಯಾದವ್ ವಿವರ ನೀಡಿದ್ದಾರೆ. ಮುಂದಿನ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬಂಧಿತ ಆರೋಪಿ ಕುರಿತ ಮಾಹಿತಿಯನ್ನು ದೆಹಲಿ ಪೊಲೀಸರ ಜತೆ ಹಂಚಿಕೊಳ್ಳಲಾಗುವುದು ಎಂದು ವರದಿ ಹೇಳಿದೆ.
ಬಿಹಾರದಲ್ಲಿ ಮದ್ಯಪಾನ ನಿಷೇಧಿಸಿದ್ದರಿಂದ ಆರೋಪಿ ಈ ಅವಕಾಶ ಬಳಸಿಕೊಂಡು, ಸುಲಭವಾಗಿ ಹಣಗಳಿಸುವ ನಿಟ್ಟಿನಲ್ಲಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.