Advertisement

76ನೇ ವಯಸ್ಸಲ್ಲಿ 4ನೇ ಸ್ನಾತಕೋತ್ತರಪರೀಕ್ಷೆ ಬರೆಯುತ್ತಿರುವ “ಒಡೆಯ’!

03:09 PM Dec 18, 2018 | |

ವಿಜಯಪುರ: ಓದಿಗೆ ವಯೋಮಿತಿಯ ಹಂಗಿಲ್ಲ ಎಂಬುದನ್ನು ಸಾಬೀತು ಮಾಡಲು ಹೊರಟಿರುವ ವೃದ್ಧರೊಬ್ಬರು 76ರ ಇಳಿ ವಯಸ್ಸಿನಲ್ಲೂ 4ನೇ ಪದವಿ ಪಡೆಯುವ ಹಂಬಲ ತೋರಿದ್ದಾರೆ. ಹಾಗಂತ ಕೇವಲ ಒಂದು ಪದವಿಗೆ ಅವರ ಜ್ಞಾನದ ಹಸಿವು ನೀಗಿಲ್ಲ, ಕನ್ನಡ, ಇಂಗ್ಲೀಷ್‌, ಹಿಂದಿ ವಿಷಯಗಳಲ್ಲಿ ಮೂರು ಉನ್ನತ ಶಿಕ್ಷಣ ಪದವಿ ಪಡೆದರೂ ನಾಲ್ಕನೇ ಪದವಿಗಾಗಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ ಈ ಅಜ್ಜ. ಇವರ ಮೊಮ್ಮಗಳು ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಎಂಬುದು ಅಚ್ಚರಿಯ ಸಂಗತಿ. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೆರೂರು ಗ್ರಾಮದ ನಿಂಗಯ್ಯ ಬಸಯ್ಯ ಒಡೆಯರ ಎಂಬುವರೇ ವೃದ್ಧ ಸಾಧಕ. ಈ ಸಾಧನೆ ಮಾಡಿದವರು. ಆರೋಗ್ಯ ಇಲಾಖೆಯಲ್ಲಿ ಕ್ಲರ್ಕ್‌ ಆಗಿ 32 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿ 18 ವರ್ಷಗಳ ಹಿಂದೆ ನಿವೃತ್ತರಾಗಿದ ಇವರು ಹರೆಯದಲ್ಲಿ ಕಂಡ ಸ್ನಾತಕೋತ್ತರ ಶಿಕ್ಷಣ ಪಡೆಯುವ ಕನಸನ್ನು ಇಳಿ ವಯಸ್ಸಿನಲ್ಲಿ ನೂರಾರು ಕಿ.ಮೀ. ಪ್ರಯಾಣ ಮಾಡಿ ನನಸಾಗಿಸಲು ಹೊರಟಿದ್ದಾರೆ.

Advertisement

ನಿಂಗಯ್ಯ ಅವರ ಪತ್ನಿ ಮಂಗಳಾ ಅವರು ಮಹಾರಾಷ್ಟ್ರದ ಸೊಲ್ಲಾಪುರ ಮೂಲದವರಾಗಿದ್ದು, ಅವರು ಕೂಡ 6ನೇ ತರಗತಿ ಓದಿದ್ದು, ಪತಿಯಿಂದಲೇ ಇವರು ಕನ್ನಡ ಕಲಿತಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದು, ಮೊದಲ ಮಗ ರಘುಸಿದ್ಧ ಪದವಿಗೆ ಶಿಕ್ಷಣ ಕೈಬಿಟ್ಟರೆ, ಎರಡನೇ ಮಗ ಪಿಯುಸಿ ಸಾಕೆಂದು ಶಿಕ್ಷಣಕ್ಕೆ ಶರಣೆಂದಿದ್ದಾನೆ. ಆದರೆ ಇವರ ಏಕೈಕ ಮಗಳು ಸವಿತಾ ಪಿಎಚ್‌ಡಿ ಸಂಶೋಧನಾ ಪದವಿ ಪಡೆದು ಶಿಕ್ಷಕಿಯಾಗಿದ್ದಾರೆ. ಸವಿತಾ ಅವರ ಮಗಳು ಅಕ್ಷತಾ ಬೆಳಗಾವಿಯಲ್ಲಿ ಆಯುರ್ವೇದ ವೈದ್ಯಕೀಯ ಕೊನೆಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ಸವಿತಾಳ ಅಜ್ಜ ನಿಂಗಯ್ಯ
ಈಗ ನಾಲ್ಕನೇ ಸ್ನಾತಕೋತ್ತರ ಪದವಿ ಪಡೆಯಲು ಪರೀಕ್ಷೆ ಬರೆಯುತ್ತಿದ್ದಾರೆ.

ಬಡತನದಲ್ಲೇ ಬಿಎ ಪದವಿ ಓದಿದ ತಮಗೆ ಸರ್ಕಾರಿ ಹುದ್ದೆ ಸಿಕ್ಕಾಗ ಬದುಕಿನ ಬಂಡಿಗೆ ಆಸರೆಯಾಗಿತ್ತು. ಮುಂದೆ ಉನ್ನತ ಶಿಕ್ಷಣ ಪಡೆಯಲು ಓದುವ ಕನಸಿದ್ದರೂ ಬಡತನ ಅವರನ್ನು ಉನ್ನತ ಶಿಕ್ಷಣ ಪಡೆಯುವ ಹಂಬಲ ಈಡೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ನಿವೃತ್ತಿ ಬಳಿಕ ಇವರು ಒಂದೂವರೆ ದಶಕದಲ್ಲಿ ಸತತ ಅಧ್ಯಯನ ಮಾಡಿ
ಈಗಾಗಲೇ ಮೂರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎರಡೂ ಕೈಗಳಿಂದ ಪರೀಕ್ಷೆ ಬರೆಯುವ ಶೈಲಿ ರೂಢಿಸಿಕೊಂಡಿರುವುದು ಇವರ ಇನ್ನೊಂದು ವಿಶೇಷತೆ.

ಧಾರವಾಡ ವಿಶ್ವವಿದ್ಯಾಲಯದಿಂದ ಬಾಹ್ಯ ವಿದ್ಯಾರ್ಥಿಯಾಗಿ 1996ರಲ್ಲಿ ಕನ್ನಡದಲ್ಲಿ ಮೊದಲ ಸ್ನಾತಕ ಪದವಿ ಪಡೆದರೆ, ನಿವೃತ್ತಿ ನಂತರ 2011ರಲ್ಲಿ ಇಂಗ್ಲಿಷ್‌ ಹಾಗೂ 2015ರಲ್ಲಿ ಹಿಂದಿ ಭಾಷೆಯಲ್ಲಿ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಷ್ಟಕ್ಕೆ ಇವರ ಶಿಕ್ಷಣ ಪಡೆಯುವ ದಾಹ ಇಂಗದ ಕಾರಣ ಇದೀಗ ನಾಲ್ಕನೇ ಸ್ನಾತಕೋತ್ತರ ಪದವಿಗೆ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರ ವಿಷಯದಲ್ಲಿ ಎಂಎ
ಪರೀಕ್ಷೆ ಎದುರಿಸುತ್ತಿದ್ದಾರೆ. ಪರೀಕ್ಷೆ ಬರೆಯಲು ಅವರು ನೂರಾರು ಕಿ.ಮೀ. ದೂರದ ವಿಜಯಪುರಕ್ಕೆ ಬಂದು ಹೋಗುತ್ತಿದ್ದಾರೆ.

ಸಂಪಾದಿಸಿದ ಜ್ಞಾವನ್ನು ಅಕ್ಷರ ರೂಪಕ್ಕೂ ಇಳಿಸಿರುವ ಇವರು ಸಂಕೇತ, ಸುಚೇತನ, ಹುನಗುಂದ ತಾಲೂಕಿನ ಸ್ವಾತಂತ್ರ್ಯಾ ಹೋರಾಟಗಾರರು, ಸಪ್ತಕೋಟಿ ರಾಣಿಯರು, ಜ್ವಾಲಾಮುಖೀ, ವಿಶ್ವಚೇತನ ಸೇರಿ 7 ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೂ ತಮ್ಮ ಸೇವೆ ಸಲ್ಲಿಸಿದ್ದಾರೆ. 

Advertisement

ಬಾಲ್ಯದಿಂದಲೂ ಉನ್ನತ ಶಿಕ್ಷಣ ಪಡೆಯುವ ಹಂಬಲ ಇದ್ದರೂ ಬಡತನ ನನ್ನ ಜ್ಞಾನ ದಾಹಕ್ಕೆ ತಣ್ಣೀರೆರಚಿತ್ತು. ಇದೀಗ ವೃದ್ಧಾಪ್ಯದಲ್ಲಿ ಹಣ ಹಾಗೂ ಸಮಯ ಎರಡೂ ಇದ್ದು, ಜ್ಞಾನ ಸಂಪಾದನೆಗೆ ನಾಲ್ಕನೇ ಸ್ನಾತಕೋತ್ತರ ಪರೀಕ್ಷೆ ಬರೆಯುತ್ತಿದ್ದೇನೆ. ಪ್ರತಿಷ್ಠೆ, ಸಾಧನೆಗಿಂತ ನನ್ನ ಆತ್ಮತೃಪ್ತಿಗೆ ನಾನು ಉನ್ನತ ಶಿಕ್ಷಣದ ಬೆನ್ನು ಬಿದ್ದಿದ್ದೇನೆ.
 ನಿಂಗಯ್ಯ ಒಡೆಯರ, ಎಂಎ 4ನೇ ಪದವಿ ಪರೀಕ್ಷಾರ್ಥಿ

ಹಿಡಿದ ಹಠ ಬಿಡದ ಅವರ ಛಲಗಾರಿಕೆ ಮನೋಭಾವವೇ ಇಳಿ ವಯಸ್ಸಲ್ಲೂ ಅವರಿಗೆ ಓದುವ ಹಂಬಲ ಉಂಟಾಗಿದೆ. ಎಂಎ ನಾಲ್ಕನೇ ಪದವಿ ಪಡೆಯುವ ಅವರ ಆಸೆ ಈಡೇರಲಿ, ಬಾಲ್ಯದಲ್ಲಿ ಕಂಡ ಕನಸು ವೃದ್ಧಾಪ್ಯದಲ್ಲಾದರೂ ಈಡೇರಲಿ.
 ಮಂಗಳಾ ಒಡೆಯರ, ನಿಂಗಯ್ಯ ಅವರ ಪತಿ

Advertisement

Udayavani is now on Telegram. Click here to join our channel and stay updated with the latest news.

Next