Advertisement

ಕಾರ್ಯರೂಪಕ್ಕೆ ಬರುತ್ತಾ ಮಾಸ್ಟರ್‌ ಪ್ಲ್ಯಾನ್‌?

09:04 AM Dec 12, 2021 | Team Udayavani |

ಆಳಂದ: ಪಟ್ಟಣದ ಬಹುದಿನಗಳ ಬೇಡಿಕೆಯಾದ ಮುಖ್ಯರಸ್ತೆ ಅಗಲೀಕರಣ ಅಥವಾ ಮಾಸ್ಟರ್‌ ಪ್ಲ್ಯಾನ್‌ ಕಾರ್ಯ ಕಡತಗಳಲ್ಲೇ ಹೊರಳಾಡುತ್ತಿದೆ. ಮುಖ್ಯ ರಸ್ತೆ ಅಗಲೀರಣಕ್ಕೆ ಶಾಸಕ ಸುಭಾಷ ಗುತ್ತೇದಾರ ಅಧ್ಯಕ್ಷತೆಯಲ್ಲಿ ಕರೆದ ಸಭೆಯಲ್ಲಿ ನಾಗರಿಕರು ಮತ್ತು ರಸ್ತೆ ಬದಿ ನಿವೇಶನಗಳ ಮಾಲೀಕರು ಪಾಲ್ಗೊಂಡು ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದರೂ ಸಹಿತ ಅಗಲೀಕರಣ ಕಾರ್ಯ ವಿಳಂಬದಿಂದ ವಾಹನ ಹಾಗೂ ಜನರು ಸಂಚರಿಸಲು ಪರದಾಡುವಂತೆ ಆಗಿದೆ.

Advertisement

ರಸ್ತೆ ಅಗಲೀಕರಣದಲ್ಲಿ ಮನೆ, ಅಂಗಡಿಗಳು ಹೋಗುತ್ತವೆ ಎಂದು ರಸ್ತೆ ಬದಿಗಿರುವ ಜನರು ತಮ್ಮ ಹಳೆಯ ಕಟ್ಟಡ ಬಿಳಿಸುತ್ತಿಲ್ಲ. ತಾವಾಗಿಯೇ ಬಿದ್ದ ಅಂಗಡಿ, ಮನೆಗಳನ್ನು ಕಟ್ಟಿಕೊಳ್ಳುತ್ತಿಲ್ಲ. ರಸ್ತೆ ಅಗಲೀಕರಣವಾದರೆ ಮುಂದಿನ ದಾರಿ ನೋಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ರಸ್ತೆ ಬದಿಯ ನೆರೆಹೊರೆಯವರು ಹಲವು ವರ್ಷಗಳಿಂದಲೂ ದಿನದೂಡುತ್ತಿದ್ದಾರೆ. ಹೀಗಾಗಿ ಇಕ್ಕಟ್ಟಿನ ರಸ್ತೆಯಲ್ಲಿ ಜನತೆ ಹಾಗೂ ವಾಹನ ಸಂಚಾರ ದಟ್ಟಣೆಯಾಗಿ ಸಂಚಾರಕ್ಕೆ ಸಂಚಕಾರ ಬಂದೊದಗಿದೆ.

ಸಭೆಯಲ್ಲಿ ಮೌಖೀಕ ಒಪ್ಪಂದ

ರಸ್ತೆ ಅಗಲೀಕರಣ ಕುರಿತು ಪುರಸಭೆಯಿಂದ ಶಾಸಕ ಸುಭಾಷ ಗುತ್ತೇದಾರ ಅಧ್ಯಕ್ಷತೆಯಲ್ಲಿ ನಾಗರಿಕರ ಮತ್ತು ವ್ಯಾಪಾರಿಗಳ ಸಭೆ ಕರೆದು ಚರ್ಚಿಸಿ ಒಪ್ಪಂದಕ್ಕೆ ಬಂದು ಅಗಲೀಕರಣಕ್ಕೆ ಒಪ್ಪಿಗೆ ನೀಡಲಾಗಿದೆ. ಅಲ್ಲದೇ ನಾಗರಿಕರ ಈ ಮೌಖೀಕ ಒಪ್ಪಂದದ ಪ್ರಸ್ತಾವವನ್ನು ಪುರಸಭೆ ಸಾಮಾನ್ಯ ಸಭೆಯಲ್ಲೂ ಅಂಗೀಕರಿಸಿ ಜಿಲ್ಲಾಧಿಕಾರಿಗೂ ಕಳುಹಿಸಿಕೊಡಲಾಗಿದೆ. ಟೌನ್‌ ಪ್ಲ್ಯಾನಿಂಗ್‌ ಅಧಿಕಾರಿಗಳು ಈಗಾಗಲೇ ಒಂದು ಸುತ್ತಿನ ಸರ್ವೇ ನಡೆಸಿದ್ದಾರೆ. ಆದರೆ ಯಾವುದೇ ಅಂತಿಮ ನಿರ್ಧಾರವನ್ನು ಪುರಸಭೆ ಪ್ರಕಟಿಸಿಲ್ಲ.

ಲಿಖೀತ ಒಪ್ಪಂದವೇ ಇಲ್ಲ

Advertisement

ಪಟ್ಟಣದ ಮಾಸ್ಟರ್‌ ಪ್ಲ್ಯಾನ್‌ ಹಾಗೂ ಮುಖ್ಯ ರಸ್ತೆಯಲ್ಲಿನ ಆಸ್ತಿಗೆ ಸಂಬಂಧಿಸಿದ ಎಲ್ಲ ಮಾಲೀಕರೊಂದಿಗೆ ಕರಾರುವಕ್ಕಾಗಿ ಲಿಖೀತ ಒಪ್ಪಂದವೇ ಆಗಿಲ್ಲ. ಹೀಗಾಗಿ ಪುರಸಭೆಯಿಂದ ರಸ್ತೆ ಅಗಲೀಕರಣದ ಕಡತ ಕಚೇರಿಯಿಂದ ಕಚೇರಿಗೆ ಓಡಾಡುತ್ತಲೇ ಇದೆ. ಕಾರ್ಯದಲ್ಲಿ ಮಾತ್ರ ಸಾಕಾರಗೊಳ್ಳುತ್ತಿಲ್ಲ. ವಾಸ್ತವ್ಯದಲ್ಲಿ ಪುರಸಭೆಯಿಂದ ರಸ್ತೆ ಬದಿಯ ಕಟ್ಟಡ ಮಾಲೀಕರಿಂದ ಲಿಖೀತ ಒಪ್ಪಂದ ಪಡೆಯುವ ತಳಮಟ್ಟದ ಕೆಲಸ ಮಾಡಿದರೆ ಮುಂದಿನ ಕೆಲಸ ಸಲೀಸಾಗುತ್ತದೆ ಎನ್ನುತ್ತಾರೆ ಟೌನ್‌ ಪ್ಲ್ಯಾನಿಂಗ್‌ ಅಧಿಕಾರಿಯೊಬ್ಬರು.

ಮಾಸ್ಟರ್‌ ಪ್ಲ್ಯಾನ್‌ಕುರಿತು ಕಳೆದ ಬಾರಿ ಪ್ರಸ್ತಾವನೆ ಇತ್ತು. ಸದ್ಯ ಸರ್ಕಾರದ ಮಟ್ಟದಲ್ಲಿದೆ. ಟೌನ್‌ ಪ್ಲಾ Âನಿಂಗ್‌ ಮುಂದೆ ಯಾವುದೇ ಪ್ರಸ್ತಾವನೆಯಿಲ್ಲ. ಪುರಸಭೆಯಿಂದಲೇ ರಸ್ತೆ ಅಗಲೀಕರಣದ ಕುರಿತು ನಿರ್ಧಾರವಾಗಬೇಕು. ಆಸ್ತಿಗಳ ಎಲ್ಲ ಮಾಲೀಕರು ಡೀಡ್‌ ಮಾಡಿ ನೋಟರಿ ಮೂಲಕ ಬರೆದುಕೊಡಬೇಕು. ಆಗ ಸರ್ವೇ ನಡೆಯುತ್ತದೆ. ಮಾಸ್ಟರ್‌ ಪ್ಲ್ಯಾನ್‌ರೂಪಿಸುವಾಗ ರಸ್ತೆ ಅಗಲೀಕರಣ 20 ವರ್ಷಕ್ಕೆ ಸೀಮಿತವಾಗಿ ಮಾಡುತ್ತೇವೆ. ಸದ್ಯ ಆಳಂದದ ದಾಖಲಾತಿಯಲ್ಲಿ ರಸ್ತೆ ಅಗಲ ಇಷ್ಟೇ ಎಂದಿಲ್ಲ. ಜನಸಂಖ್ಯೆ ಕಡಿಮೆಯಿದ್ದಾಗ ರಸ್ತೆ ಸರಿಯಿತ್ತು. ಈಗ ಜನಸಂಖ್ಯೆ ಹೆಚ್ಚಾಗಿ ರಸ್ತೆ ಇಕ್ಕಟಾಗಿದೆ. ಹೆಚ್ಚಿನ ರಸ್ತೆ ಮಾಡಲು ಮಾಲೀಕರ ಲಿಖೀತ ಒಪ್ಪಿಗೆ ಅಗತ್ಯವಾಗಿದೆ ಎನ್ನುತ್ತಾರೆ ಅಧಿಕಾರಿ.

ಈ ಹಿಂದೆ ಮುಖ್ಯ ರಸ್ತೆ ಅಗಲೀಕರಣದ ಒಪ್ಪಿಗೆ ಕುರಿತು ನಾಗರಿಕರು ಮತ್ತು ವ್ಯಾಪಾರಸ್ಥರು ಸಭೆ ಸೇರಿ ಕೈಗೊಂಡ ಸಭೆಯ ನಡಾವಳಿ, ಪುರಸಭೆಯ ಅನುಮೋದಿತ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ. ಟೌನ್‌ ಪ್ಲ್ಯಾನಿಂಗ್‌ ಸರ್ವೇ ಕೈಗೊಂಡಿದ್ದು, ವರದಿ ನೀಡುವುದು ಬಾಕಿಯಿದೆ. ಸಭೆಯಲ್ಲಿ ಒಟ್ಟು 45 ಅಡಿ ರಸ್ತೆ ವಿಸ್ತಾರಕ್ಕೆ ನಾಗರಿಕರು ಒಪ್ಪಿಕೊಂಡಿದ್ದಾರೆ. ಟೌನ್‌ ಪ್ಲ್ಯಾನಿಂಗ್‌ ಅಧಿಕಾರಿಗಳ ಪ್ರಕಾರ 60 ಅಡಿ ಅಗಲ ರಸ್ತೆ ಬೇಕಾಗುತ್ತದೆ. ಈ ಕುರಿತು ಒಪ್ಪಂದಕ್ಕೆ ಬಂದು ಅಂತಿಮಗೊಳಿಸಿದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಜಯ ಮಹಾಂತೇಶ ಹೂಗಾರ, ಮುಖ್ಯಾಧಿಕಾರಿ, ಪುರಸಭೆ

ಪಟ್ಟಣದ ಮಾಸ್ಟರ್‌ ಪ್ಲ್ಯಾನ್‌ ಕುರಿತು ಪ್ರಾಥಮಿಕ ಅಧ್ಯಯನ ಮುಗಿದಿದೆ. ಇನ್ನು ಎರಡನೇ ಅಧ್ಯಾಯದಲ್ಲಿ ಮಹಾ ಯೋಜನೆ ತಯಾರಿಸುವ ಕುರಿತು ಕೆಲಸ ನಡೆಯಬೇಕಿದೆ. ವಿದ್ಯಾ ಬೆಳಂಕರ್‌, ಸಹಾಯಕ ನಿರ್ದೇಶಕಿ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ

ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next