ಕೊಲ್ಲೂರು: ಕೊಲ್ಲೂರು ದೇವಸ್ಥಾನವೂ ಸೇರಿದಂತೆ ರಾಜ್ಯದ 84 ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿ ರಚಿಸಲು ಅನುಮತಿ ನೀಡಲಾಗಿದೆ. ಕೊಲ್ಲೂರು ದೇಗುಲದ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದವರ ವಿವರ ಸಂಗ್ರಹಣೆ ನಡೆಯುತ್ತಿದೆ. ಕೊಲ್ಲೂರು ದೇಗುಲದ ಮೂಲಕ 33 ಕೋ.ರೂ. ವೆಚ್ಚದಲ್ಲಿ ದೇಗುಲ, ಕೊಲ್ಲೂರು ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಗ್ರಾ.ಪಂ.ಗೆ ಹಸ್ತಾಂತರ ಕಾರ್ಯ ಶೀಘ್ರ ನಡೆಯಲಿದೆ ಎಂದು ಮುಜರಾಯಿ, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸೆ. 18ರಂದು ಪ್ರಗತಿ ಪರಿಶೀಲನ ಸಭೆ ನಡೆಸಿ ಅವರು ಮಾತನಾಡಿದರು.
ಕೊಲ್ಲೂರಿನ ಒಳಚರಂಡಿ ಕಾಮ ಗಾರಿಯ ನ್ಯೂನತೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಅರೆಶಿರೂರು ಹೆಲಿಪ್ಯಾಡ್‌ನ್ನು ವ್ಯವಸ್ಥಿತಗೊಳಿಸುವ ಕಾಮಗಾರಿಗೆ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಕೊಲ್ಲೂರು ದೇವಸ್ಥಾನಕ್ಕೆ ಸೇರಿದ ತೊಪ್ಪಲುಕಟ್ಟೆಯಲ್ಲಿ ಗೋಶಾಲೆ ಇದೆ. 10 ಎಕ್ರೆ ಗೋಮಾಳ ಜಾಗವೂ ಇದ್ದು, ಇಲ್ಲಿ ಗೋವುಗಳಿಗೆ ಮೂಲ ಸೌಕರ್ಯಗಳ ಕಲ್ಪಿಸಲಾಗಿದೆ. ಅಲ್ಲಿ ಈಗಾಗಲೇ 100 ಜಾನುವಾರುಗಳಿವೆ. ಅನಾಥ ಗೋವುಗಳಿಗೆ ರಕ್ಷಣೆ ಕೊಡುವ ಕೆಲಸವೂ ಇಲ್ಲಿ ಆಗುತ್ತಿದೆ ಎಂದರು.
ಕೊಲ್ಲೂರು ರೋಪ್ ವೇ ಸಂಸದರ ಮುತುವರ್ಜಿಯ ಯೋಜನೆಯಾಗಿದ್ದು, ಇದಕ್ಕೆ ನಮ್ಮ ಸಹಕಾರ ಇದೆ. ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಯೋಜನೆಯನ್ನು ತಯಾರಿಸಲಾಗುತ್ತದೆ ಎಂದು ಹೇಳಿದ ಅವರು, ಕೊಲ್ಲೂರು ದೇಗುಲದಲ್ಲಿ ಮುಂದಿನ 50 ವರ್ಷಗಳ ಭವಿಷ್ಯದ ಯೋಜನೆಯ ಬಗ್ಗೆ ಮಾಸ್ಟರ್ ಪ್ಲ್ಯಾನ್ ತಯಾರಿಸಿ, ಮುಂದಿನ ಸಭೆ ಯಲ್ಲಿ ಇಡುವಂತೆ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು.
ಒಳ ಚರಂಡಿಯ ಮುಂದಿನ ನಿರ್ವಹಣೆ ಹೇಗೆ ನಿರ್ವಹಿಸುವುದು ಎನ್ನುವ ಕುರಿತು ಚರ್ಚೆ ನಡೆಯಿತು. ಶುಲ್ಕ ವಿಧಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು. ದೇವಸ್ಥಾನದ ಹಣ ಪೋಲಾಗಬಾರದು. ಕಾಮಗಾರಿಯಲ್ಲಿ ಲೋಪವಾಗಬಾರದು. ಗುಣಮಟ್ಟ ಖಚಿತಪಡಿಸಿಕೊಂಡ ಬಳಿಕವೇ ಹಣ ಮಂಜೂರು ಮಾಡಿ, ದೇವಸ್ಥಾನಕ್ಕೆ ನಷ್ಟವಾಗಬಾರದು. ದೇವಸ್ಥಾನಗಳ ದತ್ತು ಸ್ವೀಕಾರಕ್ಕೆ ಪೂರ್ಣ ಹಣ ನೀಡಿದರೆ ಅದು ಸಾರ್ವಜನಿಕ ದೇವಸ್ಥಾನ ಆಗುವುದಿಲ್ಲ. ಹಾಗಾಗಿ ದತ್ತು ಸ್ವೀಕರಿಸುವ ದೇವಸ್ಥಾನಕ್ಕೆ 50 ಲಕ್ಷ ಮಾತ್ರ ನೀಡಿ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು. ಯಕ್ಷಗಾನ ಕಲಾವಿದರು ಕೋಡಿ ವಿಶ್ವನಾಥ ಗಾಣಿಗರ ನೇತೃತ್ವದಲ್ಲಿ ಕೊಲ್ಲೂರಿನಲ್ಲಿ ಯಕ್ಷಗಾನ ಮೇಳ ಹೊರಡಿಸುವಂತೆ ಮನವಿ ಸಲ್ಲಿಸಿದರು.
ದೇವಸ್ಥಾನದ ಆಡಳಿತಾಧಿಕಾರಿ, ಕುಂದಾಪುರದ ಸಹಾಯಕ ಆಯುಕ್ತರಾದ ಕೆ.ರಾಜು, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಅಧಿಕಾರಿಗಳಾದ ಪ್ರದೀಪ್, ರಾಮಕೃಷ್ಣ ಅಡಿಗ ಉಪಸ್ಥಿತರಿದ್ದರು.
ಹೊಸ ಆಡಳಿತ ಮಂಡಳಿ ಬರುವುದರೊಳಗೆ ಹಸ್ತಾಂತರಿಸಿ
ಕೊಲ್ಲೂರು ದೇಗುಲ ಹಾಗೂ ಕೊಲ್ಲೂರು ಗ್ರಾಮಕ್ಕೆ ಕುಡಿಯುವ ನೀರು ನೀಡುವ ಯೋಜನೆಯನ್ನು ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುವ ಮುಂಚೆ ಪಂಚಾಯತ್‌ಗೆ ಹಸ್ತಾಂತರಿಸಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕಾಶಿ ಹೊಳೆಯಿಂದ ಕಿಂಡಿ ಅಣೆಕಟ್ಟು ಮೂಲಕ ಕಲ್ಯಾಣಗುಡ್ಡ ಪ್ರದೇಶಕ್ಕೆ ಪಂಪ್ ಮಾಡಿ, ಶುದ್ಧೀಕರಿಸಿ ಇಡೀ ಗ್ರಾಮಕ್ಕೆ ನೀರು ನೀಡಲಾಗುತ್ತದೆ. ಈಗಾಗಲೇ ಕಾಮಗಾರಿ ಮುಗಿದಿದ್ದು ನ್ಯೂನತೆಗಳ ಪರಿಶೀಲನೆ ನಡೆದಿದ್ದು 20 ದಿನಗಳ ಒಳಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯೋಜನೆಯ ಅನುಷ್ಠಾನದ ಸಂದರ್ಭ ಮೂಲ ಯೋಜನಾ ವರದಿಯ ಆಶಯಕ್ಕೆ ಧಕ್ಕೆಯಾಗಬಾರದು ಎಂದರು.