ಕೊಚ್ಚಿ: ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ದುಷ್ಕರ್ಮಿಗಳ ತಂಡದ ಮಾಸ್ಟರ್ ಮೈಂಡ್ ಪಲ್ಸರ್ ಸುನೀಲ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇರಳ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನು ಕೋರಿ, ತಲೆಮರೆಸಿಕೊಂಡಿದ್ದ ಸುನಿಯನ್ನು ಎರ್ನಾಕುಳಂನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ಗುರುವಾರ ಬಂಧಿಸಲಾಗಿದೆ.
ಸುನೀಲ್‌ಗಾಗಿ ಕೇರಳ ಪೊಲೀಸರು ಅಂಬಲಾಪುಝಾದಲ್ಲಿನ ಅವನ ಮನೆಯ ಬಳಿ 6 ದಿನಗಳಿಂದ ಕಾವಲಿದ್ದರು. ಕೇರಳದ ಆತನ ಸ್ನೇಹವಲಯದ ತಾಣಗಳಲ್ಲದೆ, ತಮಿಳುನಾಡಿನಲ್ಲೂ ತೀವ್ರ ಶೋಧ ನಡೆದಿತ್ತು. ಎರ್ನಾಕುಲಂನ ಹೆಚ್ಚುವರಿ ಮುಖ್ಯ ನ್ಯಾಯಾಧೀಶರ ಎದುರು ಶರಣಾಗಲು ಬಂದಿದ್ದ ಸುನೀಲ್ ಕೈಗೆ ಪೊಲೀಸರು ಕೋಳ ತೊಡಿಸಿದ್ದು, ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ವಿಜೀಶ್‌ನನ್ನೂ ಇದೇ ವೇಳೆ ಬಂಧಿಸಲಾಗಿದೆ.
ವಕೀಲರ ವಿರೋಧ!: ನ್ಯಾಯಾಧೀಶರ ಮುಂದೆ ಶರಣಾಗಲು ಬಂದ ಸುನೀಲ್‌ನನ್ನು ಬಂಧಿಸುವಾಗ, ನೂಕುನುಗ್ಗಲಿನಲ್ಲಿ ಸಣ್ಣ ಮಟ್ಟದ ಎಳೆದಾಟ ಆಗಿತ್ತು. ಈ ವೇಳೆ ಸುನೀಲ್ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದಿದ್ದರು. ಸುನೀಲ್ ಪರ ವಕೀಲರು, “ಆತ ಕೊಲೆಗಾರ ಅಥವಾ ರೇಪಿಸ್ಟ್ ಏನೇ ಆಗಿರಬಹುದು. ಆದರೆ, ಕೋರ್ಟ್ ಹೇಳುವ ತನಕ ಆತ ಅಪರಾಧಿ ಅಲ್ಲ. ಜಡ್ಜ್ ಮುಂದೆ ಶರಣಾಗಲು ಬಂದ ವ್ಯಕ್ತಿಯನ್ನು ಪೊಲೀಸರು ಏಕಾಏಕಿ ದಬ್ಟಾಳಿಕೆ ನಡೆಸಿ ಬಂಧಿಸಿರುವುದು ಕಾನೂನು ಉಲ್ಲಂಘನೆ’ ಎಂದು ಆಕ್ಷೇಪ ಎತ್ತಿದ್ದಾರೆ. ಕೇರಳ ಹೈಕೋರ್ಟಿನಲ್ಲಿ ಸುನೀಲ್ ಸಹಚರರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಮಾ.3ಕ್ಕೆ ಇದ್ದಿದ್ದರಿಂದ ಅದಕ್ಕೂ ಮೊದಲೇ ಸುನೀಲ್ ಕಾನೂನಿನ ರಕ್ಷಣೆ ಪಡೆಯಲೆತ್ನಿಸಿದ್ದರು. ಕೊಚ್ಚಿ ಸಮೀಪದ ಆಲುವಾ ಪೊಲೀಸ್ ಕ್ಲಬ್‌ನಲ್ಲಿ ಇಬ್ಬರ ಮೇಲೆ ವಿಚಾರಣೆ ಸಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ “ಸುನೀಲ್‌ಗೆ ಇಷ್ಟು ದಿನ ರಹಸ್ಯವಾಗಿ ರಕ್ಷಣೆ ಕೊಟ್ಟಿದ್ದು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ’ ಎಂದು ನೇರವಾಗಿ ಆರೋಪಿಸಿವೆ.
ಮಹಿಳೆಯ ಕೈವಾಡ?: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಿರ್ಮಾಪಕ, ರಾಜಕಾರಣಿಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ ಹೊಸ ಟ್ವಿಸ್ಟ್ ಸಿಕ್ಕಿದೆ. ಎರಡು ದಿನದ ಹಿಂದಷ್ಟೇ ಸೆರೆಸಿಕ್ಕಿದ್ದ ನಾಲ್ಕನೇ ಆರೋಪಿ ಮಣಿಕಂಠನ್ ಹೇಳುವಂತೆ, “ಈ ಪ್ರಕರಣ ಹಿಂದಿನ ರೂವಾರಿ ಒಬ್ಬರು ಪ್ರಭಾವಿ ಮಹಿಳೆ’! ಪಲ್ಸರ್ ಸುನೀಲ್ ಅವರಿಂದ ಸುಪಾರಿ ಪಡೆದಿದ್ದರು ಎಂಬ ಅಂಶ ಬಹಿರಂಗವಾಗಿದೆ.
ದೇಶದಲ್ಲೇ ಮೊದಲ ಲೈಂಗಿಕ ದೌರ್ಜನ್ಯ ನೋಂದಣಿ ಕಚೇರಿ!
ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ, ದೇಶದಲ್ಲೇ ಮೊದಲ ಬಾರಿಗೆ ಲೈಂಗಿಕ ಅಪರಾಧಗಳ ನೋಂದಣಿ ಕಚೇರಿ ತೆರೆಯಲು ಮುಂದಾಗಿದೆ. ಮಹಿಳೆಯರ ಮೇಲೆ ಸಣ್ಣಪುಟ್ಟ ಕಿರುಕುಳ ನೀಡುವ ಕಿಡಿಗೇಡಿಗಳ ವಿವರ ಸೇರಿದಂತೆ, ಅತ್ಯಾಚಾರ ಎಸಗಿದವರ ಸಕಲ ಮಾಹಿತಿಗಳನ್ನೂ ಈ ಕಚೇರಿ ದಾಖಲಿಸಿಕೊಂಡು, ಕಾನೂನಿನ ಕ್ರಮಕ್ಕೆ ಸಹಕರಿಸಲಿದೆ. ಅಲ್ಲದೆ, ಲೈಂಗಿಕ ದೌರ್ಜನ್ಯದಿಂದ ಸಂತ್ರಸ್ತೆಗೆ ಆದ ನಷ್ಟವನ್ನು ಅಪರಾಧಿ ಭರಿಸಲು ತಡಮಾಡಿದರೆ, ಅದನ್ನು ಶೀಘ್ರ ಕೊಡಿಸಲು ಈ ಲೈಂಗಿಕ ದೌರ್ಜನ್ಯ ನೋಂದಣಿ ಕಚೇರಿ ಒತ್ತಡ ಹೇರಲಿದೆ.