Advertisement
ಹಲವು ದಿನಗಳಿಂದ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ(85) ಅವರು ಏ.29ರಂದು ಕೆಂಗೇರಿಯ ಬಿಜಿಎಸ್ ಗ್ಲೇನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದರು. ಆಸ್ಪತ್ರೆ ಸೇರಿದಾಗಿನಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದು, ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ 8.45ಕ್ಕೆ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಐವರು ಮಕ್ಕಳನ್ನು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ತಮ್ಮ ಅಭಿನಯದ ಮೂಲಕ ಕಲ್ಚರ್ಡ್ ಕಾಮಿಡಿಯನ್ ಎಂದು ಪ್ರಖ್ಯಾತರಾಗಿದ್ದ ಮಾಸ್ಟರ್ ಹಿರಣ್ಣಯ್ಯ ಅವರ ‘ಲಂಚಾವತಾರ’ ಭ್ರಷ್ಟಾಚಾರ’, ಅತ್ಯಾಚಾರ’, ಕಪಿಮುಷ್ಟಿ’, ನಡುಬೀದಿ ನಾರಾಯಣ’ ನಾಟಕಗಳು ಇಂದಿಗೂ ಜನಪ್ರಿಯ. ಮುಖ್ಯವಾಗಿ ಇವರ ‘ಲಂಚಾವತಾರ’ ನಾಟಕ 10 ಸಾವಿರಕ್ಕೂ ಹೆಚ್ಚು ಪ್ರದರ್ಶನ ಜತೆಗೆ ಅನೇಕ ರಾಜಕಾರಣಿಗಳಿಂದ ಪ್ರಶಂಸೆ, ಟೀಕೆಗೆ ಗುರಿಯಾಗಿತ್ತು. ಈ ಮೂಲಕ ರಂಗಭೂಮಿಯಲ್ಲಿಯೇ ದೊಡ್ಡ ಯಶಸ್ಸು ಸಾಧಿಸಿದರು. ಇದರ ಜತೆಗೆ 30 ಸಿನಿಮಾ, ಕೆಲ ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಇವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನವರತ್ನ ರಾಂ ಪ್ರಶಸ್ತಿ ದೊರೆ ತಿದ್ದು, ಕಲಾಗಜ ಸಿಂಹ ಹಾಗೂ ನಟ ರತ್ನಾಕರ ಎಂಬ ಬಿರುದುಗಳಿದ್ದವು