ಬೆಳ್ತಂಗಡಿ: ವೇಣೂರು ಫಲ್ಗುಣಿ ತಟದಲ್ಲಿ ನೆಲೆಸಿರುವ ವಿರಾಟ್ ವಿರಾಗಿ ಭಗವಾನ್ ಬಾಹುಬಲಿ ಸ್ವಾಮಿಗೆ ಫೆ. 22ರಿಂದ ಆರಂಭಗೊಂಡು ಮಾ. 1ರ ವರೆಗೆ ನೆರವೇರಿದ ಮಹಾ ಮಸ್ತಕಾಭಿಷೇಕದ ಬಳಿಕ ಒಂದು ಮಾಸ ಪ್ರಮುಖ ದಿನಗಳಲ್ಲಿ ನೆರವೇರುವ ಮಜ್ಜನಗಳಲ್ಲಿ ಕೊನೆ ಮಜ್ಜನವು ಶನಿವಾರ ರಾತ್ರಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಶನಿವಾರ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ, ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷ, ಅಳದಂಗಡಿ ಅರಮನೆಯ ತಿಮ್ಮಣರಸರಾದ ಡಾ| ಪದ್ಮಪ್ರಸಾದ್ ಅಜಿಲ ಹಾಗೂ ಪ್ರಮುಖರಾದ ಶಿವಪ್ರಸಾದ ಅಜಿಲ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ಉಪಸ್ಥಿತಿಯಲ್ಲಿ ನೆರವೇರಿತು.
ಎಳನೀರು, ಇಕ್ಷುರಸ, ಗಂಧ, ಚಂದನ, ಕೇಸರಿಯಾದಿ ಭವ್ಯ ದ್ರವ್ಯಗಳ ಮಹಾಮಜ್ಜನ ನೆರವೇರಿಸಲಾಯಿತು.
12 ವರ್ಷಗಳಿಗೊಮ್ಮೆ ನೆರವೇರುವ ಮಹಾ ಮಜ್ಜನ ಜಿನ ಭಕ್ತರಿಗೆ ಅತ್ಯಂತ ಪವಿತ್ರ ಕ್ಷಣಗಳಲ್ಲೊಂದಾಗಿದೆ. ಈ ಬಾರಿ ನಡೆದ ಮಹಾಮಜ್ಜನದಲ್ಲಿ ಕೂಡ ದೇಶಾದ್ಯಂತದ ಭಕ್ತರು ಪಾಲ್ಗೊಂಡಿದ್ದರು.
ರಾಜ್ಯದ 4 ಅತೀ ಎತ್ತರದ ಮೂರ್ತಿಗಳ ಪೈಕಿ ವೇಣೂರಿನಲ್ಲಿ ಸ್ಥಾಪಿಸಿರುವ ಬಾಹುಬಲಿ ಸ್ವಾಮಿಗೆ ಯುಗಳ ಮುನಿಗಳಾದ ಅಮೋಘಕೀರ್ತಿ ಮುನಿ ಮಹಾರಾಜರು ಮತ್ತು ಅಮರಕೀರ್ತಿ ಮುನಿ ಮಹಾರಾಜರ ಉಪಸ್ಥಿತಿಯಲ್ಲಿ ನಾಡಿನ ವಿವಿಧ ಜೈನ ಮಠದ ಮಹಾಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಮಾಪನಗೊಂಡಿತ್ತು.
2036ರಲ್ಲಿ ಮುಂದಿನ ಮಜ್ಜನ
ವೇಣೂರಿನಲ್ಲಿ 12 ವರ್ಷಗಳ ಬಳಿಕ ನಡೆದ ತ್ಯಾಗಿಯ ಮಹಾ ಮಜ್ಜನ ಸರ್ವಜನ ಶಾಂತಿಯ ಸಂದೇಶವಾಗಿ ಮೂಡಿಬಂದಿದೆ. 30 ಉಪಸಮಿತಿಗಳ ಅಚ್ಚುಕಟ್ಟಿನ ನಿರ್ವಹಣೆಯೊಂದಿಗೆ 9 ದಿನಗಳು ಇರುಳು ಬೆಳಕಲ್ಲಿ ನಡೆದ ಮಹಾಮಜ್ಜನ ಸ್ವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಬಳಿಕ ಪ್ರಮುಖ ದಿನಗಳಲ್ಲಿ ನೆರವೇರಿದ ಮಜ್ಜನದ ಕೊನೆಯ ಪ್ರಕ್ರಿಯೆ ಮೇ 4ರಂದು ಪೂರ್ಣಗೊಂಡಿತು. ಮುಂದೆ ವೇಣೂರಿನ ವಿರಾಟ್ ವಿರಾಗಿಗೆ 2036ರಲ್ಲಿ ಮಹಾಮಜ್ಜನ ನೆರವೇರಲಿದೆ.