ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿ ಐವರು ಯೋಧರ ದಾರುಣ ಅಂತ್ಯಕ್ಕೆ ಕಾರಣವಾದ ಭಯೋತ್ಪಾದಕರ ಪತ್ತೆಗಾಗಿ ಶುಕ್ರವಾರ ಬಟಾ-ಡೋರಿಯಾ ಪ್ರದೇಶದ ಅರಣ್ಯದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಪೂಂಚ್ ಜಿಲ್ಲೆಯಲ್ಲಿ ಗುರುವಾರ ಅಪರಿಚಿತ ಭಯೋತ್ಪಾದಕರು ಜಿಲ್ಲೆಯ ಭಿಂಬರ್ ಗಲಿಯಿಂದ ಸಾಂಗಿಯೋಟ್‌ಗೆ ತೆರಳುತ್ತಿದ್ದ ಸೇನಾ ವಾಹನದ ಮೇಲೆ ದಾಳಿ ನಡೆಸಿದಾಗ ಐವರು ಯೋಧರು ಹುತಾತ್ಮರಾಗಿದ್ದರು.
ಭಾರಿ ಸಂಖ್ಯೆಯ ಭದ್ರತಾ ಪಡೆಗಳು ಬಟಾ-ಡೋರಿಯಾ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರ ಪತ್ತೆಗೆ ಡ್ರೋನ್ ಮತ್ತು ಸ್ನಿಫರ್ ಡಾಗ್‌ಗಳನ್ನು ಬಳಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಕೂಡ ಸ್ಥಳದಲ್ಲಿದೆ.
ಮೂಲಗಳ ಪ್ರಕಾರ, ಮೂರು ಕಡೆಯಿಂದ ಗುಂಡಿನ ದಾಳಿ ನಡೆಸಿ ಗ್ರೆನೇಡ್ ದಾಳಿ ನಡೆಸಲಾಗಿತು, ಈ ವೇಳೆ ಇಂಧನ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕೃತ್ಯದಲ್ಲಿ ನಾಲ್ವರು ಉಗ್ರರು ಭಾಗಿಯಾಗಿರುವ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಜೈಶ್ ಬೆಂಬಲಿತ ಭಯೋತ್ಪಾದಕ ಗುಂಪು, ಪೀಪಲ್ಸ್ ಆಂಟಿ-ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್ಎಫ್), ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.