ಪಾಟ್ನಾ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರುದ್ಧ ಬಿಹಾರದಲ್ಲಿ ಸಾವಿರಾರು ಯುವಕರು ಗುರುವಾರ(ಜೂನ್ 16)ವೂ ಪ್ರತಿಭಟನೆಯನ್ನು ಮುಂದುವರಿಸಿದ್ದು, ರೈಲ್ವೆ ಹಳಿಯನ್ನು ಬಂದ್ ಮಾಡಿದ್ದಾರೆ. ಮತ್ತೊಂದೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಡುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಾಶ್ಮೀರವನ್ನು100% ಇಸ್ಲಾಮಿಕ್ ರಾಜ್ಯ ಮಾಡಲು ಪ್ರಯತ್ನ : ರಾಹುಲ್ ಕೌಲ್ ಕಳವಳ
ನಾಲ್ಕು ವರ್ಷದ ಅವಧಿಗೆ ಯೋಧರನ್ನು ನೇಮಕ ಮಾಡಿಕೊಳ್ಳುವ ಅಗ್ನಿಪಥ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಆಗ್ರಹಿಸಿ ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ವರದಿ ವಿವರಿಸಿದೆ.
ಭಾಭುವಾ ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನ ಕಿಟಕಿ ಗ್ಲಾಸ್ ಗಳನ್ನು ಒಡೆದು ಹಾಕಲಾಗಿದೆ. ಅಷ್ಟೇ ಅಲ್ಲ ಒಂದು ಕೋಚ್ ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಭಾರತೀಯ ಸೇನಾ ಪ್ರೇಮಿಗಳು ಎಂಬ ಬ್ಯಾನರ್ ಹಿಡಿದು ಪ್ರತಿಭಟಿಸುವತ್ತಿರುವ ಯುವಕರು, ನೂತನ ನೇಮಕಾತಿ ಯೋಜನೆಯನ್ನು ರದ್ದುಗೊಳಿಸುವಂತೆ ಘೋಷಣೆ ಕೂಗಿರುವುದಾಗಿ ವರದಿ ಹೇಳಿದೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಜಹಾನಾಬಾದ್ ರೈಲ್ವೆ ನಿಲ್ದಾಣದಲ್ಲಿ ಪಾಟ್ನಾ-ಗಯಾ ಪ್ರಯಾಣಿಕರ ರೈಲು ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಪೊಲೀಸರತ್ತ ಕಲ್ಲು ತೂರಾಟ ನಡೆಸಿರುವ ಘಟನೆಯೂ ನಡೆದಿದೆ. ರೈಲ್ವೆ ಹಳಿಯನ್ನು ಬಿಟ್ಟು, ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪೊಲೀಸರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪಾಟ್ನಾ- ಗಯಾ ಮುಖ್ಯರಸ್ತೆಯಲ್ಲಿ ಟಯರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಯುವಕರ ಭವಿಷ್ಯಕ್ಕೆ ಮಾರಕವಾಗಲಿದೆ. ಉತ್ತಮ ಪ್ಯಾಕೇಜ್ ಹೊಂದಿದ್ದರು ಕೂಡಾ ಇದರಲ್ಲಿ ಯಾವುದೇ ಪಿಂಚಣಿ ಸೌಲಭ್ಯ ಇಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಅಗ್ನಿಪಥ ಯೋಜನೆಗೆ ವಿರೋಧವೇಕೆ?
ಕೇಂದ್ರ ಸರ್ಕಾರ ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳುತ್ತಿಲ್ಲ, ಇದು ಬಲಿಪಶು ಮಾಡುವ ತಂತ್ರಗಾರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಎಎನ್ ಐ ನ್ಯೂಸ್ ಏಜೆನ್ಸಿ ಜೊತೆ ಮಾತನಾಡಿರುವ ಪ್ರತಿಭಟನಾಕಾರರು, ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆದರೆ ನಾಲ್ಕು ವರ್ಷಗಳ ನಂತರ ಇದರಲ್ಲಿ ಕೇವಲ ಶೇ.25ರಷ್ಟು ಸೈನಿಕರನ್ನು ಮಾತ್ರ ಸಾಮಾನ್ಯ ಕೇಡರ್ ಗೆ ದಾಖಲು ಮಾಡಿಕೊಳ್ಳುತ್ತಾರೆ. ಅಗ್ನಿಪಥ ಯೋಜನೆಯಡಿ ನೇಮಕವಾದವರಿಗೆ ಗ್ರ್ಯಾಚ್ಯುಟಿ ಮತ್ತು ಪಿಂಚಣಿ ಸೌಲಭ್ಯ ಇಲ್ಲ. ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ನಾವು ಎಲ್ಲಿ ಕೆಲಸ ಮಾಡಬೇಕು? ನಾಲ್ಕು ವರ್ಷಗಳ ಬಳಿಕ ನಾವು ನಿರಾಶ್ರಿತರಾಗುತ್ತೇವೆ. ಇದಕ್ಕಾಗಿಯೇ ನಾವು ರಸ್ತೆ ತಡೆದು ಪ್ರತಿಭಟನೆ ನಡೆಸುವ ಮೂಲಕ ಜನರಿಗೂ ತಿಳಿವಳಿಕೆ ಇದೆ ಎಂಬುದನ್ನು ದೇಶದ ನಾಯಕರಿಗೆ ತಿಳಿಯಲಿ ಎಂಬುದಾಗಿ ಜೇಹಾನಾಬಾದ್ ಪ್ರತಿಭಟನಾಕಾರರೊಬ್ಬರು ತಿಳಿಸಿದ್ದಾರೆ.