ಬೈಲಹೊಂಗಲ: ಬೆಳಗಾವಿ ಎಪಿಎಂಸಿಯಲ್ಲಿ ಪಾರದರ್ಶಕ ವಹಿವಾಟಿಗೆ ಆಗ್ರಹಿಸಿ ಜು. 10 ರಂದು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಹೇಳಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ರೈತರು ಬೆಳೆದ ಬೆಳೆ ಮಾರಾಟ ಮಾಡಲು ನಿರ್ಮಿಸಿದ ಎಪಿಎಂಸಿಯಲ್ಲಿ ವಯವಾಟಿನ ತೂಕದಲ್ಲಿ ಮೋಸ, ಬೆಲೆಯಲ್ಲಿ ಇನ್ನಿತರ ಹಣ ವ್ಯವಹಾರದಲ್ಲಿ ಅವ್ಯವಹಾರ ನಡೆಯುತ್ತಿದೆ. ರೈತರ ಮೇಲಾಗುತ್ತಿರುವ ನಿರಂತರ ಶೋಷಣೆ ನಿಲ್ಲಬೇಕು. ಗುಣಮಟ್ಟದ ಉತ್ಪನ್ನಕ್ಕೆ ಸ್ಪರ್ಧಾತ್ಮಕ ಬೆಲೆ ನಿಗದಿಯಾಗಬೇಕು. ಬಿಳಿ ಚೀಟಿಯ ರದ್ದು ಪಡಿಸಬೇಕು. ಸರಕಾರದ ನಿಯಮಗಳನ್ನು ಅಳವಡಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಅನಧಿಕೃತ ಕಂಪನಿಗಳ ಹೆಸರಿನಲ್ಲಿ ನಿರಂತರ ಮೋಸ ನಡೆಯುತ್ತಿದೆ. ನಕಲಿ ಕಂಪನಿ ಮೂಲಕ ಅವ್ಯವಹಾರದಲ್ಲಿ ಭಾಗಿಯಾದವರನ್ನು ಕಾನೂನು ಕ್ರಮ ಕೈಗೊಳ್ಳಬೇಕು. ಎಪಿಎಂಸಿ ಮಾರಾಟದಲ್ಲಿ ಕಮೀಶನ್ ಪಡೆಯಲು ಅವಕಾಶ ಇಲ್ಲದಿದ್ದರೂ ಅನಧಿಕೃತವಾಗಿ ಕಮೀಶನ್ ಪಡೆಯಲಾಗುತ್ತಿದೆ. ಕೃಷಿ ಉತ್ಪನ್ನದ ಮಾರಾಟದ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕೆಂದು ಒತ್ತಾಯಿಸಿದರು.
10ರಂದು ನಡೆಯುವ ಪ್ರತಿಭಟನೆ ನೇತೃತ್ವವನ್ನು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಶಿವಾಜಿ ಕಾಗಣೀಕರ ವಹಿಸುವರು. ವಿವಿಧ ಸಂಘ, ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಅಂದು ಬೆಳಗ್ಗೆ 10:30ಕ್ಕೆ ಬೆಳಗಾವಿ ರಾಣಿ ಚನ್ನಮ್ಮ ವೃತ್ತದಿಂದ ಎಪಿಎಂಸಿವರೆಗೆ ಮೆರವಣಿಗೆ ಮೂಲಕ ಸಾಗಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಯಪ್ಪ ಬಸರಕೋಡ, ರುದ್ರಗೌಡ ಕೊಳದೂರ, ಶ್ರೀಕಾಂತ ಶಿರಹಟ್ಟಿ, ದುಂಡಯ್ಯ ಪೂಜಾರ, ಬಸವರಾಜ ದೊಡಗೌಡರ, ಲಕ್ಷ್ಮಣ ಕಟ್ಟೀಕರ ಇದ್ದರು.