ಕೊರಟಗೆರೆ: ಬರಪೀಡಿತ ಕ್ಷೇತ್ರವಾದ ಕೊರಟಗೆರೆಗೆ ಶಾಶ್ವತ ನೀರಾವರಿ ಯೋಜನೆ ರೂಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕೊರಟಗೆರೆ ಘಟಕ ಮಂಗಳವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಬಯಲುಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದ ರೈತರಿಗೆ ನೀರಾವರಿ ಯೋಜನೆ ಮರೀಚಿಕೆಯಾಗಿದೆ. ಚುನಾವಣೆ ವೇಳೆ ಪ್ರಚಾರಕ್ಕಾಗಿ ಮಾತ್ರ ರೈತರ ಸಮಸ್ಯೆ ಬಳಸಿಕೊಳ್ಳುವ ನಾಯಕರು ಗೆದ್ದ ನಂತರ ರೈತರ ಸಮಸ್ಯೆ ರಿಯುವ ಪ್ರಯತ್ನ ಮಾಡದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಪ್ರತತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪುರ್ನವಸತಿ ಕಲ್ಪಿಸಿ: ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಬಯಲುಸೀಮೆ ತುಮಕೂರು ಜಿಲ್ಲೆಗೆ ವರದಾನ ಆಗಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಕೊರಟಗೆರೆಯ 110 ಕೆರೆಗಳಿಗೆ ನೀರು ತುಂಬಿಸಬೇಕು. ಬಫರ್‌ಡ್ಯಾಂನಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಪುರ್ನವಸತಿ ಕಲ್ಪಿಸ ಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿ ಗ್ರಾಮಗಳಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಬೇಕು. ರೈತರ ಸಾಲ ಮನ್ನಾ ಮಾಡಿ ಬಡ್ಡಿ ರಹಿತ ಹೊಸ ಸಾಲ ರೈತರಿಗೆ ನೀಡಬೇಕು. ಸಾಗುವಳಿ ಪತ್ರ ನೀಡಿದವರಿಗೆ ಖಾತೆ ಮತ್ತು ಪಹಣಿ ತ್ವರಿತವಾಗಿ ನೀಡಬೇಕು ಎಂದು ರೈತ ಸಂಘದ ಗೌರವಾಧ್ಯಕ್ಷ ಧನಂಜಯಾರಾಧ್ಯ ಒತ್ತಾಯಿಸಿದರು.
ಪಟ್ಟಣಕ್ಕೆ ಹೇಮೆ ನೀರು ಸೀಮಿತ: ಹಸಿರು ಸೇನೆ ಕೊರಟಗೆರೆ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರದ 110 ಕೆರೆ ಮತ್ತು ಗೋಮಾಳ ಜಾಗಗಳು ಒತ್ತುವರಿಯಾಗಿವೆ. ಹೇಮಾವತಿ ನೀರು ಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದು ಗ್ರಾಮೀಣ ಪ್ರದೇಶಕ್ಕೆ ಮರೀಚಿಕೆಯಾಗಿದೆ. ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಕ್ಷಣ ಕಡಿವಾಣ ಹಾಕಬೇಕು. ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಸೌಲಭ್ಯ ರೈತರಿಗೆ ನೀಡಬೇಕು ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣದ ಸರಕಾರಿ ಬಸ್‌ನಿಲ್ದಾಣದಿಂದ ಮುಖ್ಯರಸ್ತೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಕಂದಾಯ ಇಲಾಖೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ, ಕಂದಾಯ, ಬೆಸ್ಕಾಂ ಸೇರಿದಂತೆ ಇನ್ನೀತರ ಇಲಾಖೆ ಅಧಿಕಾರಿ ವರ್ಗ ರೈತರ ಮನವಿ ಸ್ವೀಕರಿಸಿ ಸಮಸ್ಯೆ ತ್ವರಿತವಾಗಿ ಬಗೆಹರಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಲೋಕೇಶ್, ಪುಟ್ಟರಾಜು, ನರಸಿಂಹಮೂರ್ತಿ, ಮಂಜುನಾಥ, ಪುಟ್ಟರಾಜು, ವೀರಣ್ಣ, ನವೀನಕುಮಾರ್, ಚಂದ್ರಶೇಖರಯ್ಯ, ರಾಮಚಂದ್ರ, ಸಿದ್ದೇಗೌಡ, ರಮೇಶ್, ಹನುಮಂತರೆಡ್ಡಿ, ನಾಗರಾಜು, ಶಿವಣ್ಣ, ದಿನೇಶ್, ಹನುಮಂತರಾಯಪ್ಪ, ನಂಜುಂಡಯ್ಯ, ರಾಮಣ್ಣ ಇದ್ದರು.