Advertisement

ಮಾನವ ಸರಪಳಿ ನಿರ್ಮಿಸಿ ವಿದ್ಯಾರ್ಥಿಗಳ ಬೃಹತ್‌ ಪ್ರತಿಭಟನೆ

01:56 PM Jul 07, 2018 | |

ಸುರಪುರ: ಬಜೆಟ್‌ ಮಂಡನೆಯಲ್ಲಿ ಉಚಿತ ಬಸ್‌ ಪಾಸ್‌ ವಿತರಣೆ ಕೈ ಬಿಡಲಾಗಿದೆ ಎಂದು ಆರೋಪಿಸಿ ಅಖೀಲ
ಭಾರತೀಯ ವಿದ್ಯಾರ್ಥಿ ಪರಿಷತ್‌ ತಾಲೂಕು ಘಟಕದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ
ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ನಗರದ ವೇಣುಗೋಪಾಲಸ್ವಾಮಿ
ದೇವಸ್ಥಾನದಿಂದ ಅರಮನೆ ಮಾರ್ಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆ ಕೂಗಿ ತಕ್ಷಣ ಬಸ್‌ ಪಾಸ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Advertisement

ಈ ವೇಳೆ ಎಬಿವಿಪಿ ವಿಭಾಗೀಯ ಸಹ ಸಂಚಾಲಕ ನಾಗರಾಜ ಮಕಾಶಿ ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆ ಪೂರ್ವದಲ್ಲಿ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌
ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಆದರೆ ಗುರುವಾರ ಅವರು ಮಂಡಿಸಿದ ಬಜೆಟ್‌ ನಲ್ಲಿ ಬಸ್‌ ಪಾಸ್‌ ವಿತರಣೆಯನ್ನು ಕೈ ಬಿಡುವ ಮೂಲಕ ವಿದ್ಯಾರ್ಥಿಗಳಿಗೆ ದ್ರೋಹ ಮಾಡಿದ್ದಾರೆ ಎಂದು ದೂರಿದರು.

ರಾಜ್ಯ ಕಾರ್ಯಾಕಾರಿಣಿ ಸಮಿತಿ ಸದಸ್ಯ ಬಾಗಣ್ಣ ಹೂಗಾರ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಸತಿ ನಿಲಯಗಳ ಉನ್ನತಿಕರಣಕ್ಕೆ ಪ್ರಾಶಸ್ತ್ಯ ಕೊಟ್ಟಿಲ್ಲ. ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿ ಸೇರಿದಂತೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲ್ಲ. ಸಂಘಟನೆ ಇದನ್ನು ಖಂಡಿಸುತ್ತದೆ ಎಂದು ತಿಳಿಸಿದರು. 

ಜಿಲ್ಲಾಧಿಕಾರಿಗೆ ಬರೆದ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ ಸುರೇಶ ಅಂಕಲಗಿ ಅವರಿಗೆ ಸಲ್ಲಿಸಿದರು. ತಾಲೂಕು ಘಟಕದ ಅಧ್ಯಕ್ಷ ರಾಜಪ್ಪ ಅಜ್ಜಿಕೊಲ್ಲಿ, ರಮೇಶ ಯಾದವ, ಅಜ್ಮಿರಅಲಿ, ಅಕ್ಷತಾ, ಗಂಗಮ್ಮ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next