Advertisement

ದೇಶ ವಿಭಜಿಸುವ ಕಾನೂನಿಗೆ ಸಹಮತವಿಲ್ಲ: ಹರ್ಷ ಮಂದರ್‌

10:00 AM Jan 17, 2020 | sudhir |

ಮಂಗಳೂರು: ಕೇಂದ್ರ ಸರಕಾರವು ಜಾರಿಗೆ ತಂದಿರುವ ಎನ್‌ಪಿಆರ್‌, ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಅಡ್ಯಾರ್‌ ಕಣ್ಣೂರಿನ “ಶಹಾ ಗಾರ್ಡನ್‌’ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನ ಸಮಾವೇಶವು ಕೇಂದ್ರ ಸರಕಾರದ ವಿರುದ್ಧದ ಆಕ್ರೋಶ ಹಾಗೂ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

Advertisement

ದ.ಕ., ಉಡುಪಿ ಜಿಲ್ಲೆ ಸೇರಿದಂತೆ ಹಲವು ಕಡೆಗಳಿಂದ ಸಹಸ್ರಾರು ಜನರು ರಾಷ್ಟ್ರಧ್ವಜ ಸಹಿತ ಭಾಗವಹಿಸಿದ್ದರು. ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಅಬ್ದುಲ್‌ ಜಲೀಲ್‌ ಕಂದಕ್‌ ಹಾಗೂ ನೌಶೀನ್‌ ಕುದ್ರೋಳಿ ಅವರ ಹೆಸರನ್ನು ವೇದಿಕೆಗೆ ಇಡಲಾಗಿತ್ತು.

“ನಾವು ಭಾರತೀಯರು ತಂಡ’ದ ವಿಶ್ರಾಂತ ಐಎಎಸ್‌ ಅಧಿಕಾರಿ ಹರ್ಷ
ಮಂದರ್‌ ಮಾತನಾಡಿ, “ಭಾರತೀಯ ರಾದ ನಮ್ಮನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸಿದಂತೆಯೇ ನಾವು ಇನ್ನಷ್ಟು ಒಟ್ಟಾಗುತ್ತೇವೆ. ದ್ವೇಷದ ರಾಜನೀತಿ ನಮಗೆ ಬೇಕಾಗಿಲ್ಲ ಹಾಗೂ ನಮ್ಮನ್ನು ವಿಭಜಿಸುವ ಕಾನೂನಿಗೆ ನಮ್ಮ ಸಹಮತವಿಲ್ಲ’ ಎಂದು ಸಾರಿದರು.

“ದಾಖಲೆ ನೀಡುವುದಿಲ್ಲ’
ಕೇಂದ್ರ ಸರಕಾರಕ್ಕೆ ರಾಮ ಮಂದಿವಾಯಿತು, ಕಾಶ್ಮೀರ ವಿಚಾರವಾಯಿತು. ಈಗ ಹಿಂದೂಸ್ಥಾನವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಆಯುಧ ವಾಗಿ ಇಂಥ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ. ಪೌರತ್ವ ಕಾಯ್ದೆ
ವಿರುದ್ಧದ ಹೋರಾಟ ಎಷ್ಟು ದಿನ ನಡೆಯಲಿದೆಯೋ ಗೊತ್ತಿಲ್ಲ; ಆದರೆ ನಾವು ದಾಖಲೆ ನೀಡೆವು ಎಂದರು.

ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್‌ ಮಾತನಾಡಿ, ಪ್ರಧಾನಿ ಮೋದಿ ಸುಳ್ಳನ್ನೇ ಹೇಳುತ್ತಿದ್ದಾರೆ. ಆದರೆ ಕೇಂದ್ರ ಸಚಿವ ಅಮಿತ್‌ ಶಾ ಚುನಾವಣಾ ಭಾಷಣದಲ್ಲಿ ಪೌರತ್ವ ಕಾಯ್ದೆಯ ಹಿಂದಿನ ಮರ್ಮವನ್ನು ಬಹಿರಂಗಪಡಿಸಿದ್ದಾರೆ ಎಂದರು.

Advertisement

ನ್ಯಾಯವಾದಿ ಸುಧೀರ್‌ ಕುಮಾರ್‌ ಮಾತನಾಡಿದರು.
ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್‌. ಮುಹಮ್ಮದ್‌ ಮಸೂದ್‌ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಖಾಝಿ ಅಲ್‌ಹಾಜ್‌ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್‌ ಬೇಕಲ ಇಬ್ರಾಹಿಂ ಮುಸ್ಲಿಯಾರ್‌ ಉದ್ಘಾಟಿಸಿದರು. ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌, ವಿವಿಧ ಸಂಘಟನೆಗಳ ಪ್ರಮುಖರಾದ ಡಾ| ಅಬ್ದುಲ್‌ ರಶೀದ್‌ ಝೈನಿ, ಯು.ಕೆ. ಅಬ್ದುಲ್‌ ಅಝೀಝ್ ದಾರಿಮಿ, ಮುಹಮ್ಮದ್‌ ಶಾಕಿಬ್‌, ಮುಹಮ್ಮದ್‌ ಕುಂಞಿ, ಎಂ.ಜಿ. ಮುಹಮ್ಮದ್‌, ರಫೀಯುದ್ದೀನ್‌ ಕುದ್ರೋಳಿ, ಬಿ.ಕೆ. ಇಮಿ¤ಯಾಝ್, ಶಾಸಕ ಯು.ಟಿ. ಖಾದರ್‌, ವಿ.ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಮಾತನಾಡಿದರು.

ಬಿ. ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಹರೀಶ್‌ ಕುಮಾರ್‌, ಮೊದಿನ್‌ ಬಾವಾ, ಜೆ.ಆರ್‌.

ಲೋಬೋ, ವೈ. ಅಬ್ದುಲ್ಲ ಕುಂಞಿ, ಯು.ಕೆ. ಮೋನು, ಎಸ್‌.ಎಂ ರಶೀದ್‌, ಮುಹಮ್ಮದ್‌ ಹನೀಫ್‌, ಸೈಯದ್‌ ಅಹ್ಮದ್‌ ಭಾಷಾ ತಂšಳ್‌, ಮನ್ಸೂರ್‌ ಅಹ್ಮದ್‌ ಆಝಾದ್‌, ಮುಹಮ್ಮದ್‌ ಇಲ್ಯಾಸ್‌ ತುಂಬೆ, ಸಿ. ಮಹಮ್ಮದ್‌ ಭಾಷಾ ಸಾಹೇಬ್‌ ಕುಂದಾಪುರ, ಇಮಿ¤ಯಾಝ್ ಕಾರ್ಕಳ, ಕೆ.ಎಸ್‌. ಅಬ್ದುಲ್‌ ಹಮೀದ್‌ ಉಪಸ್ಥಿತರಿದ್ದರು.

ಮುಸ್ಲಿಂ ಸೆಂಟ್ರಲ್‌ ಕಮಿಟಿ ಉಪಾ ಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌ ಸ್ವಾಗತಿಸಿ, ಉಪಾಧ್ಯಕ್ಷ ಬಿ.ಎಂ. ಮುಮ್ತಾಜ್‌ ಆಲಿ ವಂದಿಸಿದರು. ಹ್ಯುಮ್ಯಾನಿಟಿ ಫೋರಂ ಮಾಧ್ಯಮ ವಿಭಾಗದ ಸಂಚಾಲಕ ಉಮರ್‌ ಯು.ಎಚ್‌. ಹಕ್ಕೊತ್ತಾಯ ಮಂಡಿಸಿದರು. ಬಿ.ಎ. ಮುಹಮ್ಮದ್‌ ಆಲಿ ನಿರ್ವಹಿಸಿದರು.

ಚಿಂತನೆ ಇಲ್ಲದ ಕೇಂದ್ರ: ಕಣ್ಣನ್‌ ಗೋಪಿನಾಥನ್‌
ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್‌ ಮಾತನಾಡಿ, ಕೇಂದ್ರ ಸರಕಾರ ಚಿಂತನೆಯೇ ಇಲ್ಲದ ಕಾಯ್ದೆಯನ್ನು ಜನರ ಮೇಲೆ ಹೇರುತ್ತಿದೆ.ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಅವಸರಿಸುತ್ತಿದೆ. ಒಂದು ವೇಳೆ ಕೋಟ್ಯಂತರ ಜನರು ಈ ದೇಶದವರು ಅಲ್ಲವಾದರೆ ಅವರಿಗೆ ಮುಂದೇನು ಎಂಬುದಕ್ಕೂ ಉತ್ತರವಿಲ್ಲ ಎಂದರು.

ಸಮಾವೇಶದ ಹಕ್ಕೊತ್ತಾಯ
-  ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ರದ್ದಾಗಬೇಕು, ಎನ್‌ಆರ್‌ಸಿಯ ಭಾಗವಾಗಿಯೇ ನಡೆಯುತ್ತಿರುವ ಎನ್‌ಪಿಆರ್‌ ಪ್ರಕ್ರಿಯೆಯನ್ನು ಕರ್ನಾಟಕ ಸರಕಾರ ರದ್ದುಗೊಳಿಸಬೇಕು

-  ಎಲ್ಲ ಬಗೆಯ ಧಾರ್ಮಿಕ ಹಾಗೂ ಇತರ ದಮನಗಳಿಗೆ ತುತ್ತಾಗಿರುವ ಎಲ್ಲ ನಿರಾಶ್ರಿತರಿಗೂ ತಾರತಮ್ಯವಿಲ್ಲದೆ ಆಶ್ರಯ ಕೊಡುವ ವಲಸೆ ನೀತಿ ಜಾರಿಯಾಗಬೇಕು.

-  ಗೋಲಿಬಾರ್‌ ನಡೆಸಿದ ಪೊಲೀಸ್‌ ಅಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

-  ಮೃತರಾದವರಿಗೆ ರಾಜ್ಯ ಸರಕಾರ ಘೋಷಿಸಿದ್ದ ಪರಿಹಾರ ಬಿಡುಗಡೆ ಮಾಡಬೇಕು ಹಾಗೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕು. ಅಮಾಯಕರ ಮೇಲಿನ ಕೇಸುಗಳನ್ನು ಹಿಂಪಡೆಯಬೇಕು.

ರಾರಾಜಿಸಿದ ತ್ರಿವರ್ಣ ಧ್ವಜ
ಮಂಗಳೂರು, ಜ. 15: ಸಮಾವೇಶ ನಡೆದ ಮೈದಾನವು ಜನರಿಂದ ತುಂಬಿ ತುಳುಕಿದ್ದು ಮಾತ್ರವಲ್ಲದೆ ಮೈದಾನದ ಎದುರು ಹಾದು ಹೋಗಿರುವ ಮಂಗಳೂರು-ಬಿ.ಸಿ.ರೋಡ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ. ದೂರದವರೆಗೂ ಜನರು ಜಮಾವಣೆಗೊಂಡು ಗಮನಸೆಳೆದರು.

ಪರಿಸರದಲ್ಲೆಲ್ಲ ರಾಷ್ಟ್ರಧ್ವಜ ರಾರಾಜಿಸುತ್ತಿತ್ತು. ಬೃಹತ್‌ ಗಾತ್ರದ ರಾಷ್ಟ್ರಧ್ವಜವನ್ನು ಹೆದ್ದಾರಿಯಲ್ಲಿ ಜನಸಾಗರದ ನಡುವೆ ಎತ್ತಿಕೊಂಡು ಹೋಗಲಾಯಿತು. “ಆಜಾದಿ’ ಘೋಷಣೆ ನಿರಂತರ ಮೊಳಗುತ್ತಿತ್ತು. ಬೆಳಗ್ಗೆ 10 ಗಂಟೆಯಿಂದಲೇ ವಿವಿಧೆಡೆಗಳಿಂದ ಬಸ್‌, ಕಾರು ಮತ್ತಿತರ ವಾಹನಗಳಲ್ಲಿ ಮೈದಾನದತ್ತ ಜನಸಾಗರ ಹರಿದುಬರತೊಡಗಿತ್ತು.

ದೋಣಿಯಲ್ಲಿ ಬಂದ ಪ್ರತಿಭಟನಕಾರರು
ಉಳ್ಳಾಲ ಮತ್ತು ಪರಿಸರದ ಕೆಲವು ಮಂದಿ ದೋಣಿ ಹಾಗೂ ಬೋಟ್‌ಗಳ ಮೂಲಕ ನೇತ್ರಾವತಿ ನದಿಯನ್ನು ದಾಟಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದು ವಿಶೇಷವಾಗಿತ್ತು.

ಸ್ವಯಂ ಸೇವಕರ ಸಹಕಾರ
ಮೈದಾನದ ಪರಿಸರದಲ್ಲಿ ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್‌ಆರ್‌ಪಿಯನ್ನೊಳಗೊಂಡ ಭದ್ರತೆ ಏರ್ಪಡಿಸಲಾಗಿತ್ತು. ವಿವಿಧ ಜಿಲ್ಲೆಗಳ ಹಿರಿಯ ಪೊಲೀಸ್‌ ಅಧಿಕಾರಿಗಳು, ರ್ಯಾಪಿಡ್‌ ಇಂಟರ್‌ವೆನ್ಶನ್‌ ವೆಹಿಕಲ್‌, ಜಲ ಫಿರಂಗಿ ವಾಹನಗಳನ್ನು ನಿಯೋಜಿಸಲಾಗಿತ್ತು. ವಾಹನ ಮತ್ತು ಜನರ ಸಂಚಾರ ನಿಯಂತ್ರಣಕ್ಕೆ ಆಯೋಜಕರು ನೇಮಿಸಿದ್ದ ಸ್ವಯಂ ಸೇವಕರು ಸಹಕರಿಸಿದರು. ಮಂಗಳೂರು ನಗರದಲ್ಲಿಯೂ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next