ಕಲಬುರಗಿ: ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿ ರದ್ದುಪಡಿಸುವಂತೆ ಆಗ್ರಹಿಸಿ ಬಂಜಾರಾ ಸಮುದಾಯದವರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ ಒಳ ಮೀಸಲಾತಿ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವುದನ್ನು ತಡೆ ಹಿಡಿಯಬೇಕೆಂದು ಆಗ್ರಹಿಸಿದರು.
ನಗರದ ಬಂಜಾರಾ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಯಾವುದೇ ಕಾರಣಕ್ಕೂ ಒಳಮೀಸಲಾತಿ ಒಪ್ಪುವುದಿಲ್ಲ. ಅದಲ್ಲದೇ ಒಳಮೀಸಲಾತಿಯೇ ಅಸಂವಿಧಾನಿಕವಾಗಿರುವಾಗ ಬಂಜಾರಾ, ಭೋವಿ, ಕೊರಮ, ಕೊರಚ ಸಮುದಾಯಗಳಿಗೆ ಶೇ. 4.5 ರಷ್ಟು ಮೀಸಲಾತಿ ಮಾಡಿರುವುದು ಅವೈಜ್ಞಾನಿಕ ವಾಗಿದ್ದು, ಸಮುದಾಯಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಜಾರಾ ಶಕ್ತಿ ಪೀಠದ ಬಳಿರಾಮ ಮಹಾರಾಜ, ಮುಗಳನಾಗಾಂವದ ಜೇಮಸಿಂಗ್ ಮಹಾರಾಜ್, ಚೌಡಾಪೂರದ ಮುರಹರಿ ಮಹಾರಾಜರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇವಾಲಾಲ ಜಯಂತ್ಯುತ್ಸವ ಸಮಿತಿ ಶಾಮ ಪವಾರ, ಪ್ರಮುಖರಾದ ವಿನೋದ ಚವ್ಹಾಣ, ಚಂದು ಜಾಧವ, ಬಿ.ಬಿ.ನಾಯಕ ಸೇರಿದಂತೆ ನೂರಾರು ಜನ ಲಂಬಾಣಿ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವ್ಯಾಪಕ ಬಂದೋಬಸ್ತ್: ಬಂಜಾರಾ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.