Advertisement

“ಗೂಂಡಾಗಿರಿ’ ಪದ ಪ್ರಯೋಗ: ವಾಗ್ವಾದಕ್ಕೆ ಕಲಾಪ ಬಲಿ

12:17 AM Feb 16, 2024 | Team Udayavani |

ಬೆಂಗಳೂರು: ವಿಪಕ್ಷಗಳಿಗೆ ತಿರುಗೇಟು ನೀಡುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ “ಗೂಂಡಾಗಿರಿ’ ಶಬ್ದ ಪ್ರಯೋಗ ಗುರುವಾರ ಸದನದಲ್ಲಿ ಆಕ್ರೋಶದ ಅಲೆ ಎಬ್ಬಿಸಿತು. ಎರಡೂ ಪಕ್ಷಗಳ ಸದಸ್ಯರ ನಡುವಿನ ವಾಗ್ಯುದ್ಧಕ್ಕೆ ಬಹುತೇಕ ಅರ್ಧದಿನದ ಕಲಾಪ ಬಲಿಯಾಯಿತು.

Advertisement

ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಕೇಳಿದ ಪ್ರಶ್ನೆಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಆಗುತ್ತಿರುವ ತಾರತಮ್ಯಕ್ಕೆ ಸಂಬಂಧಿಸಿ ಅಂಕಿಅಂಶಗಳ ಸಹಿತ ಸಿಎಂ ಸುದೀರ್ಘ‌ ವಿವರಣೆ ನೀಡುತ್ತಿದ್ದರು. ಈ ವೇಳೆ ಬಿಜೆಪಿಯ ರುದ್ರೇಗೌಡ, ಸ್ಪಷ್ಟೀಕರಣಕ್ಕಾಗಿ ಕುಳಿತಲ್ಲಿಂದಲೇ ಕೈಸನ್ನೆ ಮಾಡಿದರು. ಆಗ ಮುಖ್ಯಮಂತ್ರಿ “ಇದು ಪ್ರಶ್ನೋತ್ತರ ಅವಧಿ. ಇನ್ನೂ ನನ್ನ ಉತ್ತರವನ್ನೇ ಪೂರ್ಣಗೊಳಿಸಿಲ್ಲ. ಕುಳಿತುಕೊಳ್ಳಿ ಎಂದು ಗದರಿದರು.

ಬೆನ್ನಲ್ಲೇ ಎದ್ದುನಿಂತ ಬಿಜೆಪಿ ಇತರ ಸದಸ್ಯರು, ಪ್ರಶ್ನೋತ್ತರ ಅವಧಿ ಎನ್ನುವುದು ನಮಗೂ ಗೊತ್ತು. ಆದರೆ ಪ್ರತಿ ಪ್ರಶ್ನೆಗೆ ಇರುವುದು ಗರಿಷ್ಠ 4-5 ನಿಮಿಷ. ಹಾಗಾಗಿ ಇಲ್ಲಿ ಭಾಷಣ ಬೇಡ ಎಂದು ತಿರುಗೇಟು ನೀಡಿದರು. ಇದು ಕೋಲಾಹಲದ ಕಿಡಿ ಹೊತ್ತಿಸಿತು. ಕೊನೆಗೆ ತೀವ್ರ ವಾಗ್ವಾದದ ನಡುವೆ ವಿಪಕ್ಷಗಳ ಸದಸ್ಯರು ಕಲಾಪ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪರಸ್ಪರ ವಾಗ್ವಾದದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, “ನೀವು ಏಳು ಕೋಟಿ ಕನ್ನಡಿಗರ ವಿರುದ್ಧ ವಾಗಿದ್ದೀರಾ? ನಾನು ನೀಡುತ್ತಿರುವ ಅಂಕಿಅಂಶ ಗಳಿಂದ ವಿಚಲಿತಗೊಂಡಿದ್ದೀರಿ. ಹಾಗಾಗಿ ಈ ರೀತಿ ವರ್ತಿಸುತ್ತಿದ್ದೀರಿ. ಗೂಂಡಾಗಿರಿ ಮಾಡುತ್ತೀರಾ ಇಲ್ಲಿ? ನಾನು ನಿಮ್ಮ ಈ ಗೂಂಡಾಗಿರಿಗೆ ಹೆದರುವುದಿಲ್ಲ. ಏಳು ಕೋಟಿ ಕನ್ನಡಿಗರು ನೋಡುತ್ತಿದ್ದಾರೆ ಎಂಬ ಅರಿವು ನಿಮಗಿಲ್ಲವೇ? ಛೀ… ಥೂ…’ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿ ಬಳಸಿದ “ಗೂಂಡಾಗಿರಿ’ ಪದ ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಆಗ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮೇಲ್ಮನೆ ಸದಸ್ಯರನ್ನು ಗೂಂಡಾಗಿರಿ ಎಂದು ಸ್ವತಃ ಮುಖ್ಯಮಂತ್ರಿ ಜರಿದಿದ್ದು ಎಷ್ಟು ಸರಿ? ಇಂಥ ಮಾತುಗಳು ಮುಖ್ಯಮಂತ್ರಿ ಬಾಯಿಂದ ಬರಬಾರದು. ಆ ಹುದ್ದೆಗೆ ಇದು ಶೋಭೆ ತರುವಂಥದ್ದಲ್ಲ. ಕೂಡಲೇ ಈ ಬಗ್ಗೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಇತರ ಸದಸ್ಯರು ದನಿಗೂಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ, “ಗೂಂಡಾಗಿರಿ’ ಪದವನ್ನು ಕಡತದಿಂದ ತೆಗೆಯಲು ಸೂಚಿಸಿದರು. ಕಲಾಪ ಮುಂದುವರಿಸಲು ಅಣಿಯಾದರು. ಮತ್ತೆ ಸಿಎಂ ಉತ್ತರ ನೀಡಲು ಮುಂದಾದರು. ಆದರೆ ಇದಕ್ಕೆ ಮಣಿಯದ ವಿಪಕ್ಷದ ಸದಸ್ಯರು, “ಬೇಡ ಬೇಡ… ಭಾಷಣ ಬೇಡ…’ ಎಂದು ಘೋಷಣೆ ಕೂಗಿದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು.

Advertisement

ಶಮನಗೊಳ್ಳದ ವಾಗ್ವಾದ
ಸುಮಾರು 40 ನಿಮಿಷಗಳ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ, ಮುಖ್ಯಮಂತ್ರಿಗಳು ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸಬೇಕು ಎಂದು ವಿಪಕ್ಷ ಸದಸ್ಯರು ಪಟ್ಟುಹಿಡಿದರು. ಇದಕ್ಕೆ ಸಮಜಾಯಿಷಿ ನೀಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌, “ಈಗಾಗಲೇ ಆ ಪದಗಳನ್ನೇ ಕಡತದಿಂದ ತೆಗೆದುಹಾಕಲಾಗಿದೆ. ಹಾಗಾಗಿ ಮತ್ತೆ ಅದನ್ನು ಕೆದಕುವುದು ಸರಿ ಅಲ್ಲ’ ಎಂದರು.

ಇದಕ್ಕೆ ವಿಪಕ್ಷ ಸದಸ್ಯರು, ಪದಗಳನ್ನು ಕಡತದಿಂದ ತೆಗೆದುಹಾಕಲು ಸೂಚಿಸಿದ್ದು ಸ್ವಾಗತಾರ್ಹ. ಆದರೆ ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಇದಕ್ಕೆ ಮಣಿಯದ ಮುಖ್ಯಮಂತ್ರಿ, ನಾನು ಗೂಂಡಾಗಳಂತೆ ವರ್ತಿಸಬೇಡಿ ಎಂದು ಹೇಳಿದ್ದೇನೆ. ಅಷ್ಟಕ್ಕೂ ಅದು ಅಸಂಸದೀಯ ಪದ ಅಲ್ಲದಿದ್ದರೂ ಕಡತದಿಂದ ತೆಗೆದುಹಾಕಲಾಗಿದೆ. ಹೀಗಿರುವಾಗ ಮತ್ತೆ ಅದನ್ನು ಕೆದಕುವುದರಲ್ಲಿ ಅರ್ಥವಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಸಚಿವ ಸಂತೋಷ್‌ ಲಾಡ್‌, ಸಂಸತ್ತಿನಲ್ಲೇ ನಿಮ್ಮ ಸದಸ್ಯರೊಬ್ಬರು ಭಡವ ಎಂದು ಜರಿದರು. ಆ ಬಗ್ಗೆ ಏನು ಹೇಳುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡರು. ಆಗ ಮತ್ತೆ ವಾಗ್ವಾದ ನಡೆಯಿತು.

ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ, ನಾನು ಸಲಹೆಗಳನ್ನು ನೀಡಬಹುದೆ ಹೊರತು, ಕ್ಷಮೆ ಕೇಳಿ ಅಂತ ಹೇಳಲು ಬರುವುದಿಲ್ಲ. ಈಗ ಕಡತದಿಂದ ಆ ಪದವನ್ನೇ ತೆಗೆದುಹಾಕಲು ಸೂಚಿಸಿ ಆಗಿದೆ ಎಂದು ಪ್ರಶ್ನೋತ್ತರ ಅವಧಿಯೊಂದಿಗೆ ವಿವಾದಕ್ಕೆ ತೆರೆಎಳೆದರು. ಅಲ್ಲದೆ, ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಅನುವು ಮಾಡಿಕೊಟ್ಟರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಪಕ್ಷಗಳ ಸದಸ್ಯರು ಸದನ ಬಹಿಷ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next