ಮೈಸೂರು: 73ನೇ ಸ್ವಾತಂತ್ರ್ಯ ದಿನ ಅಂಗವಾಗಿ ಮೈಸೂರು ರೈಲು ನಿಲ್ದಾಣದ ಆವರಣದಲ್ಲಿ ನೂರು ಅಡಿ ಎತ್ತರದ ಧ್ವಜಸ್ಥಂಭದಲ್ಲಿ 30 ಅಡಿ ಉದ್ದ ಹಾಗೂ 20 ಅಡಿ ಅಗಲದ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ನಡೆದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ನರೇಂದ್ರ ಮೋದಿ ಪ್ರಧಾನಿಯಾಗಿ ಆರನೇ ಭಾರಿಗೆ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರುವುದು ಹೆಮ್ಮೆಯ ಸಂಗತಿ. ದೇಶದಲ್ಲಿರುವ ರೈಲು ನಿಲ್ದಾಣಗಳನ್ನು ಆಧುನಿಕರಣಗೊಳಿಸುವ ಉದ್ದೇಶದಿಂದ ದೇಶದ 65 ರೈಲು ನಿಲ್ದಾಣಗಳನ್ನು ಆಯ್ಕೆ ಮಾಡಿದರು. ಅದರಲ್ಲಿ ಮೈಸೂರನ್ನು ಸೇರಿಸುವ ಮೂಲಕ ಮೈಸೂರು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು.
ಮೈಸೂರು ರೈಲು ನಿಲ್ದಾಣದಲ್ಲಿ ಆಧುನಿಕರಣ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 100 ಅಡಿ ಎತ್ತರದ ಧ್ವಜಸ್ಥಂಭದಲ್ಲಿ 20 ಅಡಿ ಅಗಲ ಮತ್ತು 30 ಉದ್ದದ ಬೃಹತ್ ರಾಷ್ಟ್ರ ಧ್ವಜ ಹಾರಿಸಲಾಗಿದೆ. ಇದು ನಮ್ಮ ದೇಶದ ಪ್ರತಿಯೊಬ್ಬರ ಆತ್ಮಗೌರವ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ ಎಂದು ಹೇಳಿದರು.
ಮೈಸೂರಿಗೆ ಮತ್ತೆ 2 ರೈಲು: ಪಿಯೂಷ್ ಘೋಯಲ್ ಅವರು ರೈಲ್ವೆ ಸಚಿವರಾದ ನಂತರ ಮೈಸೂರಿಗೆ ಈಗಾಗಲೆ ಹೊಸ 6 ರೈಲುಗಳನ್ನು ನೀಡಲಾಗಿದೆ. ಜೊತೆಗೆ ಮೈಸೂರಿನಿಂದ ತಿರುವನಂತಪುರಂಗೆ ತೆರಳುವ ಹಾಗೂ ವಾರಕ್ಕೊಮ್ಮೆ ಮೈಸೂರಿನಿಂದ ಮಂಗಳೂರಿಗೆ ತೆರಳುವ ಎರಡು ಹೊಸ ರೈಲು ಗಾಡಿಗಳನ್ನು ಶೀಘ್ರದಲ್ಲಿಯೇ ಬಿಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಮೈಸೂರು ರೈಲ್ವೆ ನಿಲ್ದಾಣದ ವೆಬ್‌ಸೈಟನ್ನು ಲೋಕಾರ್ಪಣೆಗೊಳಿಸಿದರು. ಜೊತೆಗೆ ರೈಲು ನಿಲ್ದಾಣದಲ್ಲಿ ನೂತನವಾಗಿ ಅಳವಡಿಸಿರುವ ಎಸ್ಕಲೇಟರ್ ಸೇವೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣ ಗರ್ಗ್, ಎಸ್‌ಡಬ್ಯೂಆರ್ ಅಜಯ್ ಕುಮಾರ್ ಸಿಂಗ್ ಸೇರಿದಂತೆ ಅಧಿಕಾರಿಗಳು ಮತ್ತಿತರರು ಭಾಗಿಯಾಗಿದ್ದರು.