Advertisement

ಸನ್ನಡತೆ ಕೈದಿಗಳಿಗೆ ಸಾಮೂಹಿಕ ಕ್ಷಮಾದಾನ

06:00 AM Aug 26, 2018 | |

ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮಶತಮಾನೋತ್ಸವದ ನಿಮಿತ್ತ ದೇಶದ ಹಲವು ಜೈಲುಗಳಲ್ಲಿನ ಕೈದಿಗಳಿಗೆ ವಿಮುಕ್ತಿ ಸಿಗಲಿದೆಯೇ? ಕೇಂದ್ರ ಗೃಹ ಸಚಿವಾಲಯದ ಮೂಲಗಳ ಪ್ರಕಾರ ಹೌದು.

Advertisement

ಅಕೋrಬರ್‌ 2ರ ಗಾಂಧಿ ಜಯಂತಿ ಸೇರಿ ಒಟ್ಟು ಮೂರು ಹಂತದಲ್ಲಿ ದೇಶದ ನಾನಾ ರಾಜ್ಯದ ಕೇಂದ್ರ ಕಾರಾಗೃಹಗಳಲ್ಲಿರುವ 55 ರಿಂದ 60 ವರ್ಷ ಮೇಲ್ಪಟ್ಟ ಪುರುಷ-ಮಹಿಳಾ ಕೈದಿಗಳನ್ನು ಸಾಮೂಹಿಕ ಕ್ಷಮಾದಾನ ಯೋಜನೆಯಡಿ ಜೈಲು ವಾಸದಿಂದ ವಿಮುಕ್ತಿಗೊಳಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.

ಕೆಲವೊಂದು ಆಯ್ದ ಪ್ರಕರಣಗಳಲ್ಲಿ ಬಂಧಿತರಾದ ಕೈದಿಗಳಿಗೆ 2018ರ ಗಾಂಧಿ ಜಯಂತಿ ಮತ್ತು 2019 ಏಪ್ರಿಲ್‌ 10 ಚಂಪಣ ಸತ್ಯಾಗ್ರಹ ದಿನ ಹಾಗೂ ಅ.2 ಗಾಂಧಿ ಜಯಂತಿ, ಈ ಮೂರು ವಿಶೇಷ ದಿನಗಳಂದು ಮಾತ್ರ ಬಿಡುಗಡೆ ಭಾಗ್ಯ ದೊರೆಯಲಿದೆ. ಈ ನಿರ್ಧಾರದಿಂದ ದೇಶಾದ್ಯಂತ ಸುಮಾರು 2 ಸಾವಿರಕ್ಕೂ ಹೆಚ್ಚು ಕೈದಿಗಳು ಜೈಲಿನಿಂದ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.

ಕಾರಾಗೃಹಗಳಿಗೆ ಆದೇಶ ಪತ್ರ:
2018, ಜುಲೈ 18ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದು, ಈಗಾಗಲೇ ರಾಜ್ಯದ ಎಲ್ಲ ಕಾರಾಗೃಹಗಳಿಗೂ ಆದೇಶದ ಪ್ರತಿ ಕಳುಹಿಸಿಕೊಡಲಾಗಿದೆ. ಕೈದಿಗಳ ಬಿಡುಗಡೆಗೂ ಕೆಲವೊಂದು ನಿಯಮಾವಳಿಗಳನ್ನು ವಿಧಿಸಿದ್ದು, ಆದೇಶ ಪ್ರತಿಯಲ್ಲಿ ಇವುಗಳನ್ನು ಉಲ್ಲೇಖೀಸಲಾಗಿದೆ. ಗಂಭೀರ ಸ್ವರೂಪದ ಪ್ರಕರಣಗಳಡಿ ಶಿಕ್ಷೆ ಅನುಭವಿಸುತ್ತಿರುವವರನ್ನು ಹೊರತುಪಡಿಸಿ, ಸಾಮಾನ್ಯ ಸಜೆ ಅನುಭವಿಸುತ್ತಿರುವವರನ್ನು ಮಾತ್ರ ಕ್ಷಮಾದಾನ ಯೋಜನೆಯಡಿ ಬಿಡುಗಡೆ ಮಾಡಬೇಕೆಂದು ಈಗಾಗಲೇ ಆಯಾ ರಾಜ್ಯದ ಕೇಂದ್ರ ಕಾರಾಗೃಹಗಳ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ.

ಕೈದಿಗಳ ಸಂಖ್ಯೆ ಸ್ಪಷ್ಟವಿಲ್ಲ:
ಸಾಮೂಹಿಕ ಕ್ಷಮಾದಾನ ಯೋಜನೆಯಡಿ ಈ ಕಾರಾಗೃಹದ ಎಷ್ಟು ಮಂದಿ ಕೈದಿಗಳು ಬಿಡುಗಡೆ ಆಗುತ್ತಾರೆ?. 55 ರಿಂದ 60 ವರ್ಷ ಮೇಲ್ಪಟ್ಟ ಮಹಿಳಾ ಮತ್ತು ಪುರುಷ ಕೈದಿಗಳು ಎಷ್ಟಿದ್ದಾರೆ? ಅವರೆಲ್ಲ ಯಾವ್ಯಾವ ಪ್ರಕರಣಗಳಲ್ಲಿ ಬಂಧಿಯಾಗಿದ್ದಾರೆ? ಸಾಮಾನ್ಯ ಸಜೆ ಅನುಭವಿಸುತ್ತಿರುವ ಕೈದಿಗಳೆಷ್ಟು? ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ಸನ್ನಡತೆ ಆಧಾರದ ಮೇಲೆ ದೇಶಾದ್ಯಂತ ಇರುವ ಎಲ್ಲ ಜೈಲುಗಳಲ್ಲಿ ಸಾಮಾನ್ಯ ಸಜೆ ಅನುಭವಿಸುತ್ತಿರುವ ಕೆಲ ಕೈದಿಗಳಿಗೆ ಸಾಮೂಹಿಕವಾಗಿ ಕ್ಷಮಾದಾನ ದೊರೆಯುವ ಸಾಧ್ಯತೆಯಿದೆ.

Advertisement

ಇವರಿಗಿಲ್ಲ ಕ್ಷಮಾದಾನ:
ವರದಕ್ಷಿಣೆ ಕಿರುಕುಳದಿಂದ ಸಾವು, ಮಹಿಳೆಯರ, ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಮಾನವ ಕಳ್ಳಸಾಗಣೆ, ಭಯೋತ್ಪಾದಕ ಚಟುವಟಿಕೆ, ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಕಾಯ್ದೆ ಹಾಗೂ ಮನಿ ಲಾಂಡರಿಂಗ್‌ ಕಾಯ್ದೆ ಉಲ್ಲಂಘನೆ, ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಸೇರಿದಂತೆ ಇತರೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಬಂಧಿತರಾಗಿರುವ ಕೈದಿಗಳನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೂರು ಹಂತದಲ್ಲಿ ಬಿಡುಗಡೆ:
ಮೂರು ಹಂತಗಳಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸುವ ನಿರ್ಧಾರ ಕೈಗೊಂಡಿದ್ದು, 2018ರ ಅ.2ರಂದು ಗಾಂಧೀಜಿಯವರ 150ನೇ ಜಯಂತಿ ನಿಮಿತ್ತ ಮೊದಲನೇ ಹಂತದಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲಾಗುವುದು. ಬಳಿಕ 2019ರ ಏಪ್ರಿಲ್‌ 10ರ ಚಂಪರಣ ಸತ್ಯಾಗ್ರಹದಂದು ಎರಡನೇ ಹಂತದಲ್ಲಿ ಕೈದಿಗಳನ್ನು ಬಿಡುಗಡೆ ಗೊಳಿಸಲಾಗುವುದು. ಹಾಗೂ 2019ರ ಅಕೋrಬರ್‌ 2 ಪುನಃ ಗಾಂಧಿ ಜಯಂತಿಯಂದು ಮೂರನೇ ಹಂತದಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ.

ಬಳ್ಳಾರಿ ಕೇಂದ್ರ ಕಾರಾಗೃಹದ ಕೈದಿಗಳಿಗೆ ಯಾವ ಹಂತದಲ್ಲಿ ಬಿಡುಗಡೆ ಭಾಗ್ಯ ದೊರೆಯುತ್ತದೆ ಎಂಬುದು ಕಾದು ನೋಡಬೇಕಿದೆ. ಆದೇಶದ ಪ್ರತಿಯಲ್ಲಿ ಕೆಲ ನಿಯಮಗಳು ಗೊಂದಲದಿಂದ ಕೂಡಿದ್ದು, ಅವು ಸ್ಪಷ್ಟವಾಗಬೇಕಾಗಿದೆ. ಈಗಾಗಲೇ ಕಾರಾಗೃಹದ ಅಧೀಕ್ಷಕರು ಬಿಡುಗಡೆಗೊಳಿಸಬೇಕಾದ ಕೈದಿಗಳ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next