ವರದಿ: ಸಂತೋಷ ರಾ ಬಡಕಂಬಿ
ಅಥಣಿ: ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಹಾಗೂ ನಿರ್ಮಾಣಗೊಂಡ ನೂತನ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ ಸಾಕಷ್ಟು ಅವ್ಯವಹಾರ ನಡೆದ ಬಗ್ಗೆ ಸಾರ್ವಜನಿಕರಿಂದ ಚಿಕ್ಕೋಡಿಯ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಗೆ ದೂರು ಹೋಗಿದ್ದವು. ಆ ದೂರುಗಳನ್ನಾಧರಿಸಿ ಹೆಸ್ಕಾಂ ಜಾಗೃತದಳ ಪರಿಶೀಲನೆ ನಡೆಸಿ, ಮೇಲ್ನೋಟಕ್ಕೆ ಅವ್ಯವಹಾರ ಕಂಡು ಬಂದಿದ್ದರಿಂದ ಕೆಲವು ಅಂಶಗಳ ಮಾಹಿತಿ ಕೋರಿ ನೋಟಿಸ್ ನೀಡಿದೆ.
ಯಾವುದೇ ಪೂರ್ವಾನುಮತಿ ಇಲ್ಲದೆ ನೇರವಾಗಿ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದರಿಂದ ಸಂಸ್ಥೆಗೆ ಕೋಟ್ಯಾಂತರ ರೂ. ಹಾನಿ ಆಗಿದೆ ಎಂಬ ಅಂಶ ಇಲಾಖೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಏನಿದು ಪ್ರಕರಣ?: ಹೆಸ್ಕಾಂ ಜಾಗೃತ ದಳ ಏ.3ರಂದು ಅಥಣಿಯ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು(ವಿ)ಕಾ ಮತ್ತು ಪಾ ಉಪವಿಭಾಗ ಇವರಿಗೆ ಜಾರಿ ಮಾಡಿದ್ದು, ಹಲವು ವಿಷಯಗಳ ಮಾಹಿತಿ ಕೇಳಲಾಗಿದೆ.
ಅಥಣಿಯ ಹಲ್ಯಾಳ ರಸ್ತೆಯ ಹನುಮಾನ ನಗರದ ಡಾಂಗೆ ಲೇಔಟ್, 220 ಕೆ.ವಿ.ಎ. ಎದುರಿಗಿನ ಐಹೊಳೆ ಲೇಔಟ್, ಚಿಕ್ಕಮಕ್ಕಳ ಆಸ್ಪತ್ರೆ ಹತ್ತಿರದ ಜಾಧವ ಲೇಔಟ್, ಹಲ್ಯಾಳ ರಸ್ತೆಯ ಕರಾಳೆ ಲೇಔಟ್, ಐಹೊಳೆ ಲೇಔಟ್, ತಂಗಡಿ-ಶಿನ್ನಾಳ ರಸ್ತೆಯ ಡಾಲರ್ ಕಾಲೋನಿ ಲೇಔಟ್‌ಗಳು ಅಧಿಕೃತವೋ ಅಥವಾ ಅನಧಿಕೃತವಾಗಿಯೋ ಎಂದು ಹಾಗೂ ಇತರೆ ಮಾಹಿತಿ ಕೇಳಿದ್ದಾರೆ. ಇದಲ್ಲದೆ ಪಟ್ಟಣದ ಮಿರಜ್ ರಸ್ತೆಯ ಅಶೋಕ ಐಗಳಿ ಗ್ಯಾರೇಜ್ ಇಲ್ಲಿ ರ್ಯಾಬಿಟ್ ವೈರ್ ಅಳವಡಿಸುವ ಬದಲು ನಂ. 2 ಎ.ಸಿ.ಎಸ್.ಆರ್.(ವಿಸೇಲ್) ವೈರ್ ಉಪಯೋಗಿಸಲಾಗಿದ್ದು, ಸದರಿ ಕಾಮಗಾರಿಗಳ ಅಂದಾಜು ಪತ್ರಿಕೆ ಮತ್ತು ಶೇ. 10 ಸೂಪರ್‌ವೈಸರ್ ಶುಲ್ಕ ತುಂಬಿದ ಬಗ್ಗೆ ಮಾಹಿತಿ ನೀಡಬೇಕು.
ಡಾಂಗೆ ಲೇಔಟ್ ಜಾಧವ ಆಸ್ಪತ್ರೆ ಹತ್ತಿರದ 63 ಕೆ.ವಿ.ಎ. ಟಿಸಿಯನ್ನು ಇದ್ದ ಸ್ಥಳ ಬಿಟ್ಟು ಬೇರೆ ಕಡೆ ಸ್ಥಳಾಂತರ ಮಾಡಿದ್ದು. ಅದರ ಪರಿವರ್ತನೆ ಮಾನ್ಯತೆ ಪತ್ರ ಮತ್ತು ಅಂದಾಜು ಪತ್ರಿಕೆ, ಹೆಸ್ಕಾಂಗೆ ಕಟ್ಟಬೇಕಾದ ಶೇ.10 ಸೂಪರ್‌ವೈಸರ್ ಚಾರ್ಜ್ ತುಂಬಿದ ಬಗ್ಗೆ, ರಾಮು ಗಾಡಿವಡ್ಡರ ಇವರ ಹೆಸರಿನಲ್ಲಿರುವ ಎಲ್.ಟಿ ಸ್ಥಾವರ ಅಕೌಂಟ್ ಐಡಿ ನಂ. 6012381671 ವನ್ನು ಎಚ್.ಟಿಗೆ ಪರಿವರ್ತಿಸಲಾಗಿದ್ದು, ಮೊದಲಿನ ಪರಿವರ್ತಕಗಳನ್ನು ಹೆಸ್ಕಾಂ ಉಗ್ರಾಣಕ್ಕೆ ಜಮಾ ಮಾಡಿದ್ದ ಬಗ್ಗೆ ದಾಖಲೆ ಕೇಳಿದ್ದಾರೆ.
ಡಾಂಗೆ ಲೇಔಟ್ ಭಾಗಿರಥಿ ನಗರದಲ್ಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಕುರಿತು ಮಾಹಿತಿ ಕೇಳಿದ್ದಾರೆ. ಬೃಂದಾವನ ಹೊಟೇಲ್ ಹಿಂದಿನ ಲೇಔಟ್ ಸರ್ವೇ ನಂ 1246/ಎಚ್ ಅಧಿಕೃತತೆ ಬಗ್ಗೆ ನೋಟಿಸ್‌ನಲ್ಲಿ ವಿಚಾರಿಸಲಾಗಿದೆ. ಬೃಂದಾವನ ಹೋಟೆಲ್ ಪಕ್ಕದಲ್ಲಿರುವ ಗ್ಯಾರೇಜ್‌ಗೆ ಅಳವಡಿಸಿದ 100 ಕೆ.ವಿ.ಎ ಟಿಸಿ ಅಂದಾಜು ಪತ್ರಿಕೆ ಹಾಗೂ ಸೂಪರವೈಸಿಂಗ್ ಚಾರ್ಜ್ ಭರಿಸಿದ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ಎಲ್ಲಾ ಮಾಹಿತಿ ಗಮನಿಸಿದಾಗ ಅಥಣಿ ವಿಭಾಗದಲ್ಲಿ ಭಾರಿ ಗೋಲ್‌ಮಾಲ್ ನಡೆದಿರುವಂತೆ ಭಾಸವಾಗುತ್ತದೆ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ.