ಕೆ.ಆರ್.ಪುರ: ವಿಜಿನಾಪುರ ವಾರ್ಡ್‌ನ ರೈಲು ನಿಲ್ದಾಣದ ಸಮೀಪ ವಿಜಿನಾಪುರ ಇಕೋ ಸಿವಿಕ್ ಟೀಮ್ ಸರ್ಕಾರೇತರ ಸಂಸ್ಥೆ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಮಹಾತ್ಮ ಗಾಂಧಿ ಜನ್ಮದಿನದ ಅಂಗವಾಗಿ ಮೆಗಾ ಕ್ಲೀನಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ 10 ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ತೆರವುಗೊಳಿಸಿದ ಸ್ವಯಂಸೇವಕರು, ಸ್ವಚ್ಛತೆ ಕಾಪಾಡುವಂತೆ ನಾಗರಿಕರಿಗೆ ತಿಳಿಹೇಳಿದರು. ಜತೆಗೆ ಗೊಡೆಗಳಿಗೆ ಚಿತ್ರ ಬಿಡಿಸಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಬಿಬಿಎಂಪಿಯ ಪೌರಕಾರ್ಮಿಕರಿಗೆ ಕೈಗವಸುಗಳನ್ನು ವಿತರಿಸಲಾಯಿತು.
ವಿಜಿನಾಪುರದ ಬಿಬಿಎಂಪಿ ಸದಸ್ಯ ಬಂಡೆ ರಾಜಣ್ಣ ಮಾತನಾಡಿ, “ಪ್ರತಿಯೊಬ್ಬರೂ ಮನೆಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ರಸ್ತೆ ಬದಿಯ ನಿವೇಶನಗಳಲ್ಲಿ ಎಸೆದು ಹೋಗುತ್ತಾರೆ. ವಾಣಿಜ್ಯ ಸಂಸ್ಥೆಗಳು, ಆಸ್ಪತ್ರೆಗಳ ಕಸ ಕೂಡ ನಿವೇಶನಗಳಲ್ಲಿ ಬಿದ್ದಿರುತ್ತದೆ. ಹಸಿ ಮತ್ತು ಒಣ ತ್ಯಾಜ್ಯಗಳೆರೆಡೂ ಒಂದೆಡೆ ಕೊಳೆತು ಆಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿರುತ್ತದೆ.
ಇದರಿಂದ ಪರಿಸರ ಮಾಲಿನ್ಯವಾಗುಇವ ಜತೆಗೆ, ಸಾರ್ವಜನಿಕರು ಹಲವು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಜನ ಜಾಗೃತರಾಗಬೇಕಿದೆ,’ ಎಂದು ಹೇಳಿದರು. ವೆಕ್ಟ್ ಸಂಸ್ಥೆಯ ಪ್ರತಿನಿಧಿ ಶಿಲ್ಪಾ ನಾರಾಯಣನ್ ಮಾತನಾಡಿ, ನಗರಗಳಲ್ಲಿ ಕಸದ ಪ್ರಮಾಣ ನಿತ್ಯವೂ ಏರುತ್ತಾ ಸಾಗಿದ್ದು, ಈ ಕಸವನ್ನು ನಗರದ ಹೊರವಲಯದಲ್ಲಿನ ಗ್ರಾಮಗಳ ಬಳಿ ತಂದು ಸುರಿಯುತ್ತಿರುವುದು ಅಪಾಯಕಾರಿ ಬೆಳವಣಿಗೆ.
ಕಸದ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ವೈಜ್ಞಾನಿಕ ಕಸ ವಿಲೇವಾರಿ ಪದ್ಧತಿ ರೂಢಿಸಿಕೊಂಡು ಕಸ ವಿಂಗಡಣೆಯ ಮಹತ್ವದ ಅರಿವು ಮೂಡಿಸಿ ಸುಸಜ್ಜಿತ ಸಮಾಜ ನಿರ್ಮಿಸಬೇಕು ಎಂಧರು.