ಬಾಗಲಕೋಟೆ: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ. ರಾಜ್ಯದಲ್ಲಿ ಆಪರೇಶನ್ ಕಾಂಗ್ರೆಸ್’ ಅಲ್ಲ, ಆಪರೇಶನ್ ಕಮಲ’ ನಡೆಯಲಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಕೆರಕಲಮಟ್ಟಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ದಲ್ಲಿನ ಸದ್ಯದ ಬೆಳವಣಿಗೆ, ಅವರ ಹೇಳಿಕೆಗಳನ್ನು ನೋಡಿದರೆ, ಈ ಸರಕಾರ ಯಾವುದೇ ಸಮಯದಲ್ಲಿ ಹೋಗಬಹುದು. ಲೋಕಸಭೆ ಚುನಾವಣೆ ಒಳಗೆ ಬಹಳಷ್ಟು ಬದಲಾವಣೆಯಾಗಲಿದೆ ಎಂದರು.
ರಾಜ್ಯದಲ್ಲಿ ಐದು ವರ್ಷದ ಸರಕಾರ ಇರಬೇಕು ಎಂಬುದು ನಮ್ಮ ಇಚ್ಛೆ. ಆದರೆ, ಅವರ ಹೇಳಿಕೆ, ಐವರು ಡಿಸಿಎಂ, ಇಬ್ಬರು ಸಿಎಂ ಎನ್ನುತ್ತಿದ್ದಾರೆ. ಮಹಾರಾಷ್ಟ್ರ ಮಾದರಿಯೋ, ಬೇರೆ ಏನು ಆಗುತ್ತದೋ ಕಾದು ನೋಡಿ ಎಂದು ಹೇಳಿದರು.
ಸಿದ್ದರಾಮಯ್ಯ ಕಳೆದ ಬಾರಿ ಸಿಎಂ ಆಗಿದ್ದಾಗ ಇದ್ದ ಶಕ್ತಿ ಈಗ ಶೇ.10ರಷ್ಟೂ ಉಳಿದಿಲ್ಲ. ಇದನ್ನು ಅವರದೇ ಪಕ್ಷದ ಶಾಸಕರು, ಸಚಿವರು ಹೇಳುತ್ತಿದ್ದಾರೆ. ಅವರಿಗೆ ರಾಜಕೀಯ ಮರುಜೀವ ಕೊಟ್ಟ ಬಾದಾಮಿಯ ಕೆಲಸ ತಗೆದುಕೊಂಡು ಹೋದರೆ, ನೀವೇಕೆ ಬರುತ್ತೀರಿ ಎನ್ನುತ್ತಿದ್ದಾರೆ. ಬಾದಾಮಿಯನ್ನು ಅವರು ಎಂದೂ ಮರೆಯಬಾರದು ಎಂದರು.
ಉಪ್ಪು ತಿಂದವರು ನೀರು ಕುಡಿ ಯಲೇಬೇಕು. ಸಿಬಿಐ ಡಿ.ಕೆ. ಶಿವಕುಮಾರ ನಿರಪರಾಧಿ ಎಂದಾದರೆ ಶಿಕ್ಷೆ ಆಗದು. ಅಪರಾಧಿ ಎಂದಾದರೆ ಶಿಕ್ಷೆ ಅನುಭವಿಸಲೇಬೇಕು ಎಂದರು.