Advertisement

ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ವಿಳಂಬ

08:34 AM May 12, 2020 | Sriram |

ಉಡುಪಿ: ಕೋವಿಡ್ -19 ಲಾಕ್‌ಡೌನ್‌ ಸಂಕಟದ ಜತೆಗೆ ಕಳೆದ ಮೂರು ತಿಂಗಳುಗಳಿಂದ ಮಾಸಾಶನವೂ ಸ್ಥಗಿತಗೊಂಡಿರುವುದರಿಂದ ಅಶಕ್ತರ ಬದುಕು ಇನ್ನಷ್ಟು ದುರ್ಭರವಾಗಿದೆ.

Advertisement

ಸಾಮಾಜಿಕ ಭದ್ರತಾ ಯೋಜನೆಯ ಅನ್ವಯ ಅಂಗವಿಕಲರ, ವೃದ್ಧರ, ವಿಧವೆಯರ ವೇತನ,ಸಂಧ್ಯಾ ಸುರಕ್ಷಾ ಸಹಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಬಹುತೇಕ ಎಲ್ಲ ಮಾಸಾ ಶನಗಳು ಹಲವು ಫ‌ಲಾನು ಭವಿಗಳಿಗೆ ಫೆಬ್ರವರಿಯಿಂದೀಚೆಗೆ ವಿತರಣೆಯಾಗಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,76,500ಕ್ಕೂ ಅಧಿಕ ಮಂದಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ 1,29,479ಕ್ಕೂ ಹೆಚ್ಚು ಮತ್ತು ದ.ಕ. ಜಿಲ್ಲೆಯಲ್ಲಿ 1,47,950ಕ್ಕೂ ಅಧಿಕ ಮಂದಿ ಇದ್ದಾರೆ.

ಈ ಫ‌ಲಾನುಭವಿಗಳ ಖಾತೆಗೆ ಪ್ರತೀ ತಿಂಗಳ 10ನೇತಾರೀಕಿನೊಳಗೆ ಪಿಂಚಣಿ ಜಮೆಯಾಗುತ್ತಿತ್ತು. ಆರಂಭದಲ್ಲಿ ಕಂದಾಯ ಇಲಾಖೆಯಲ್ಲಿ ಸಾಫ್ಟ್ವೇರ್‌ ಅಪ್‌ಡೇಟ್‌ ವೇಳೆ ಉಂಟಾದ ತಾಂತ್ರಿಕ ತೊಂದರೆಗಳು ಇದಕ್ಕೆ ಕಾರಣ, ಬಳಿಕ ಲಾಕ್‌ಡೌನ್‌ನಿಂದಲೂ ಅಡಚಣೆಯಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

ತುರ್ತು ಸಂದರ್ಭಕ್ಕೂ ಹಣವಿಲ್ಲ
ಪ್ರತೀ ತಿಂಗಳು ಮಾಸಾಶನದಿಂದ ಔಷಧ, ಇನ್ನಿತರ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದೇವೆ. 2-3 ತಿಂಗಳಿಂದ ಮಾಸಾಶನ ಬಾರದೆ ಇರುವುದರಿಂದ ತೊಂದರೆ ಆಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ಫ‌ಲಾನುಭವಿಗಳು.

“ಫೋನ್‌ ಇನ್‌’ನಲ್ಲಿ ಪ್ರಸ್ತಾವ
“ಉದಯವಾಣಿ’ಯು ಉಡುಪಿ ಜಿಲ್ಲಾಧಿಕಾರಿಗಳ ಜತೆ ಎ. 21ರಂದು ಲಾಕ್‌ಡೌನ್‌ ಫೋನ್‌ಇನ್‌ ಕಾರ್ಯಕ್ರಮ ನಡೆಸಿತ್ತು. ಅಂದು ಬಂದ
ಕರೆಗಳಲ್ಲಿ ಅಂಗವಿಕಲ ಫ‌ಲಾನುಭವಿಗಳಿಗೆ ಮಾಸಾಶನ ಬಾರದೆ ಇರುವ ದೂರು ಕೂಡ ಸೇರಿತ್ತು. ಜಿಲ್ಲಾಧಿಕಾರಿಗಳು ಅಹವಾಲು ಆಲಿಸಿ, ಸ್ಪಂದಿಸುವ ಭರವಸೆ ನೀಡಿದ್ದರು. ಬಳಿಕ ದೂರುದಾರ ಫ‌ಲಾನುಭವಿಗಳನ್ನು ವಿಕಲಚೇತನರ ಸಶಕ್ತೀಕರಣ ಅಧಿಕಾರಿಗಳು ಸಂಪರ್ಕಿಸಿ ಸಮಸ್ಯೆ ಇತ್ಯರ್ಥಪಡಿಸುವ ಪ್ರಯತ್ನ ನಡೆಸಿದ್ದಾರೆ.

Advertisement

ವಿತರಣೆಗೆ ಕ್ರಮ ಕೈಗೊಳ್ಳುವಂತೆ ಪತ್ರ
ಯೋಜನೆಯ ಫ‌ಲಾನುಭವಿಗಳು ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವವರಾಗಿದ್ದು, ಕೋವಿಡ್‌-19 ಸೋಂಕಿಗೆ ಬೇಗನೆ ತುತ್ತಾಗುವ ಸಾಧ್ಯತೆಗಳಿವೆ. ಅವರ ಕ್ಷೇಮ ಕಾಪಾಡಲು ಬಾಕಿ ಮಾಸಾಶನವನ್ನು ಸಕಾಲಿಕವಾಗಿ ನೀಡಬೇಕು; ಪಡಿತರ, ಉಚಿತ ವೈದ್ಯಕೀಯ ಕಿಟ್‌, ಅಗತ್ಯ ವೈದ್ಯಕೀಯ ಸೇವೆಗೆ ಪಾಸ್‌, ಇತರ ಸೌಲಭ್ಯಗಳನ್ನು ನೀಡಬೇಕು ಎಂದು ರಾಜ್ಯ ಆಯುಕ್ತರು ಮತ್ತು ಕೋವಿಡ್‌-19 ನೋಡಲ್‌ ಅಧಿಕಾರಿ ಎ. 24ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಮಾಸಾಶನ ವಿಳಂಬದ ಕುರಿತು ಇಲಾಖೆಗೂ ದೂರುಗಳು ಬರುತ್ತಿವೆ. ಮಾಸಾಶನ ಜಮಾವಣೆಗೆ ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
– ಚಂದ್ರ ನಾಯ್ಕ, ವಿಕಲಚೇತನರ ಸಶಕ್ತೀಕರಣ ಅಧಿಕಾರಿ, ಉಡುಪಿ

ಅಂಗವಿಕಲ ಒಕ್ಕೂಟ ಮತ್ತು ಪೀಸ್‌ ಆಫ್ ಫೌಂಡೇಶನ್‌ ಮೂಲಕ ಸಾರ್ವಜನಿಕರಿಂದ ನೆರವು ಸಂಗ್ರಹಿಸಿ ಅಂಗವಿಕಲರಿಗೆ ನೆರವು ನೀಡುತ್ತಿದ್ದೇವೆ. ವಿವಿಧ ಸಂಘಟನೆಗಳ ಸಹಕಾರದಿಂದ ಇದುವರೆಗೆ 6,500 ಮಂದಿಗೆ ಅಗತ್ಯ ನೆರವು ನೀಡಿದ್ದೇವೆ. ಸಂಸದೆ ಶೋಭಾ ಕರಂದ್ಲಾಜೆ 1 ಕ್ವಿಂಟಾಲ್‌ ಅಕ್ಕಿ ನೀಡಿದ್ದಾರೆ.
– ಜಗದೀಶ್‌ ಭಟ್‌, ಉಪಾಧ್ಯಕ್ಷ
ಅಂಗವಿಕಲರ ಒಕ್ಕೂಟ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next