ಮೈಸೂರು: ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಜೂ.21ರಂದು ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲರೂ ತಮ್ಮ ಮನೆ ತಾರಸಿಯಲ್ಲೇ ಯೋಗ ಮಾಡುವಂತೆ ಶಾಸಕ ರಾಮದಾಸ್ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ ಆರು ವರ್ಷಗಳಿಂದ ಮೈಸೂರು ನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಸಂಘ- ಸಂಸ್ಥೆಗಳ ಮೂಲಕ ಸಾಮೂಹಿಕ ಯೋಗ ಪ್ರದರ್ಶನ ಮಾಡಿ ದಾಖಲೆ ಬರೆಯಲಾಗಿತ್ತು.ಈಗ ಕೋವಿಡ್ 19 ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಒಂದೆಡೆ ಸೇರುವುದರಿಂದ ಕೋವಿಡ್ 19 ಸೋಂಕು ಹರಡುವ ಸಾಧ್ಯತೆಗಳಿವೆ. ಕೋವಿಡ್ 19 ನಿಯಂತ್ರಣಕ್ಕಾಗಿ ಮುಂಜಾಗ್ರತೆ ದೃಷ್ಟಿಯಿಂದ ಅವರವರ ಮನೆಯಲ್ಲಿಯೇ ಕುಟುಂಬ ಸದಸ್ಯ ರೊಂದಿಗೆ ಯೋಗಾಸನ ಮಾಡುವ ಮೂಲಕ ಯೋಗ ದಿನಾಚರಣೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಹೇಳಿದರು.
ಮಾರ್ಗಸೂಚಿ ಅನ್ವಯ: ಅಂದು ಬೆಳಗ್ಗೆ 7ರಿಂದ 7.45 ರವರೆಗೆ 45 ನಿಮಿಷಗಳ ಕಾಲ ಪ್ರತಿಯೊಬ್ಬರು ತಮ್ಮ ಕುಟುಂಬದವರೊಂದಿಗೆ ಮನೆಯ ತಾರಸಿಯಲ್ಲಿ ಮಾರ್ಗಸೂಚಿ ಅನ್ವಯ ಯೋಗಾಸನಗಳನ್ನು ಮಾಡುವ ಮೂಲಕ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಮೊಬೈಲ್‌ಗೇ ರವಾನೆ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನೋತ್ಸವ ಸಮಿತಿಯಿಂದ ಯೋಗಾಸನಗಳ ವಿಧಾನಗಳ ಬ್ರೋಚರ್ ಮತ್ತು ವಿಡಿಯೋಗಳ ಮೂಲಕ ಎಲ್ಲರ ಮೊಬೈಲ್‌ಗಳಿಗೆ ಕಳುಹಿಸಲಾಗುವುದು. ಫೇಸ್‌ಬುಕ್, ಯೂಟ್ಯೂಬ್ ಮತ್ತು ಸುದ್ದಿ ವಾಹಿನಿಗಳಲ್ಲಿಯೂ ನೀಡಲಾಗುವುದು ಎಂದು ಹೇಳಿದರು.
ಎಲ್ಲರೂ ಯೋಗ ಮಾಡಿ: ಮಕ್ಕಳು, ಮಹಿಳೆಯರು, ವೃದ್ಧರು ಯೋಗಮಾಡಬಹುದಾಗಿದೆ. ಇವರೊಂದಿಗೆ ಯೋಗ ಮಾಡುವಾಗ ಬಿಳಿ ಟಿ-ಶರ್ಟ್ ಮತ್ತು ಬ್ಲಾಕ್ ಕಾಟನ್ ಪ್ಯಾಂಟ್ ಧರಿಸಬೇಕು. ಯೋಗ ಮಾಡುವ ಸಂದರ್ಭದಲ್ಲಿ ತೆಗೆದ ಪೋಟೋಗಳನ್ನು //yoga. ayush.gov.ÿ/yoga/ ಪೋಸ್ಟ್ ಮಾಡಬಹುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಬಾಬಾ ರಾಮ್‌ದೇವ್ ಪತಂಜಲಿ ಯೋಗ ಶಿಕ್ಷಣ ಸಮಿತಿ ಶಶಿಕುಮಾರ್, ಮೈಸೂರು ಯೋಗ ಸ್ಫೋಟ್ಸ್ ಫೌಂಡೇಷನ್ ಗಣೇಶ್ ಕುಮಾರ್ ಇತರರಿದ್ದರು.
ಹೆಲಿಕಾಪ್ಟರ್ ಮೂಲಕ ಶೂಟಿಂಗ್: ಮೈಸೂರು ನಗರ ಸೇರಿದಂತೆ ಜಿಲ್ಲೆ ವ್ಯಾಪ್ತಿ ಯಲ್ಲಿ ಏಕ ಕಾಲದಲ್ಲಿ ನಡೆಯಲಿರುವ ಈ ಯೋಗ ದೃಶ್ಯವನ್ನು ಚಿತ್ರಿಕರಿಸಲು ಹೆಲಿಕಾಪ್ಟರ್ ಬಳಕೆ ಮಾಡಲು ಉದ್ದೇಶಿಸಿ, ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂದು ಜಿಎಸ್‌ಎಸ್ ಯೋಗ ಸಂಸ್ಥೆಯ ಶ್ರೀಹರಿ ತಿಳಿಸಿದರು.
ಮಾರ್ಗ ಸೂಚಿ: 1 ನಿಮಿಷ ಪ್ರಾರ್ಥನೆ, 4 ನಿಮಿಷ ಚಲನ ಕ್ರಿಯೆ, 25 ನಿಮಿಷ 19 ಆಸನ, 14 ನಿಮಿಷ, ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ, 1 ನಿಮಿಷ ಶಾಂತಿ ಮಂತ್ರ.