ಹುಬ್ಬಳ್ಳಿ: 8ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದ ವಿವಿಧ ಪ್ರದೇಶ, ಉದ್ಯಾನವನ, ಶಾಲೆ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ನಂತರ ಸಾಮೂಹಿಕ ಯೋಗ ಕಾರ್ಯಕ್ರಮಗಳು ನಡೆಯುತ್ತಿವೆ.
ಯೋಗಪಟು ಈರಣ್ಣ ಕಾಡಪ್ಪನವರ ಅವರು ಜೂ. 21ರಂದು ನಗರದ ವಿವಿಧ ಶಾಲೆ-ಕಾಲೇಜು, ಸಂಘಗಳಲ್ಲಿ ಸಾಮೂಹಿಕ ಯೋಗ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 6 ಗಂಟೆಗೆ ಅಶೋಕನಗರದ ಕ್ರಿಕೆಟ್ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದು, ಸುಮಾರು 150 ಜನರು ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 7 ಗಂಟೆಗೆ ಮಯೂರ ಎಸ್ಟೇಟ್‌ನ ಸಿಬಿಎಸ್‌ಸಿ ಚಿನ್ಮಯ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದು, ಅಂದಾಜು 400 ಜನರು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಎಸ್‌ಜೆಎಂವಿಎಸ್ ನಿಂದ ಮೂರುಸಾವಿರ ಮಠದ ಗಂಗಾಧರ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದು, ಅಂದಾಜು 500 ಜನರು ಭಾಗವಹಿಸಲಿದ್ದಾರೆ.
ಬೆಳಗ್ಗೆ 11:30 ಗಂಟೆಗೆ ಹೊಸೂರು ಗಾಳಿ ದುರ್ಗಮ್ಮ ದೇವಸ್ಥಾನ ಬಳಿಯ ಪಾಲಿಕೆ ವಲಯ ಕಚೇರಿ ಕಟ್ಟಡ ಮೇಲ್ಭಾಗದಲ್ಲಿರುವ ಹಿರಿಯ ನಾಗರಿಕರ ವೇದಿಕೆ ಕಚೇರಿಯಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದರಲ್ಲಿ 35-40 ಹಿರಿಯ ನಾಗರಿಕರು ಪಾಲ್ಗೊಳ್ಳಲಿದ್ದಾರೆ. ಕಾಡಪ್ಪನವರು ಕಳೆದ ಒಂದು ತಿಂಗಳಿನಿಂದ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೆ ಯೋಗ ತರಬೇತಿ ಶಿಬಿರಗಳನ್ನು ನಡೆಸುತ್ತ ಬಂದಿದ್ದಾರೆ. ಜಿಮಖಾನಾ ಮೈದಾನ: ಕ್ಷಮತಾ ಹಾಗೂ ಧನ್ಯೋಸ್ಮಿ ಯೋಗ ಕೇಂದ್ರದಿಂದ ಜೂ. 21ರಂದು ಬೆಳಗ್ಗೆ 7 ಗಂಟೆಗೆ ದೇಶಪಾಂಡೆನಗರ ಜಿಮಖಾನಾ ಮೈದಾನದಲ್ಲಿ ಯೋಗ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು 500ಕ್ಕಿಂತ ಹೆಚ್ಚು ಜನರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಧನ್ಯೋಸ್ಮಿ ಯೋಗ ಕೇಂದ್ರ ಸಂಸ್ಥಾಪಕ ವಿನಾಯಕ ತಲಗೇರಿ ಯೋಗಾಸನ ತಿಳಿಸಿಕೊಡಲಿದ್ದಾರೆ. ಯೋಗ ದಿನಾಚರಣೆ ಅಂಗವಾಗಿ ನಗರದ ವಿವಿಧ 10 ಪ್ರದೇಶಗಳಲ್ಲಿ ಯೋಗ ಉಚಿತ ಶಿಬಿರ ಆಯೋಜಿಸಲಾಗಿತ್ತು. ಮೊದಲು ಯೋಗಾಭ್ಯಾಸಕ್ಕೆ ಮಧ್ಯವಯಸ್ಕರು, ವಯೋವೃದ್ಧರು ಬರುತ್ತಿದ್ದರು. ಈ ಬಾರಿ ಯುವಕರು, ಸಾಫ್ಟ್‌ವೇರ್ ಎಂಜಿನಿಯರ್, ವಿದ್ಯಾರ್ಥಿಗಳು ಆಸಕ್ತಿ ತೋರಿ ಕಲಿಯುತ್ತಿರುವುದು ವಿಶೇಷವೆಂದು ಯೋಗಗುರು ವಿನಾಯಕ ಹೇಳುತ್ತಾರೆ.
ತುಮಕೂರಿನ ಪತಂಜಲಿ ಯೋಗ ಶಿಕ್ಷಣ ಸಮಿತಿ ಇಂದಿರಾ ಗಾಜಿನಮನೆಯಲ್ಲಿ ಬೆಳಗ್ಗೆ 6:15 ಗಂಟೆಗೆ ಸಾಮೂಹಿಕ ಯೋಗ ಕಾರ್ಯಕ್ರಮ ಆಯೋಜಿಸಿದ್ದು, ಅಂದಾಜು 1000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಪ್ರಸನ್ನ ದೀಕ್ಷಿತ ಹೇಳಿದರು.
ಬಿಜೆಪಿಯಿಂದ ಸಿದ್ಧಾರೂಢ ಮಠದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.