ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ತಾಲೂಕಿನ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಶುಕ್ರವಾರ ಶಾಸ್ತೋಕ್ತವಾಗಿ ನೆರವೇರಿತು.
32 ಜೋಡಿ ವಿವಾಹ : ಶುಕ್ರವಾರ ಮಧ್ಯಾಹ್ನ 12.15ರಿಂದ 1 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ನಡೆದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಈ ಮೊದಲೇ ನೋಂದಣಿಯಾಗಿದ್ದ 32 ಜೋಡಿಗಳು, ಹಿಂದು ಸಂಪ್ರದಾಯದಂತೆ, ಪೌರೋಹಿತರ ವೇದ ಮಂತ್ರ ಘೋಷ ದೊಂದಿಗೆ ವಿವಾಹವಾಗಿ ಹೊಸ ಬಾಳಿಗೆ ಕಾಲಿರಿಸಿದರು.
ವಿವಾಹದಲ್ಲಿ ಪಾಲ್ಗೊಂಡಿದ್ದ ವರನಿಗೆ 5ಸಾವಿರ ರೂ ಹಾಗೂ ವಧುವಿಗೆ 10 ಸಾವಿರ ರೂ ಮತ್ತು ಚಿನ್ನದ ತಾಳಿ ಹಾಗೂ ಎರಡು ಚಿನ್ನದ ಗುಂಡು (ಒಟ್ಟು 40 ಸಾವಿರ ರೂ ಮೌಲ್ಯ) ಒಟ್ಟು 55 ಸಾವಿರ ರೂ ಗಳನ್ನು ನೀಡಲಾಯಿತು. ಹಾಗೂ ಸಾಮೂಹಿಕ ವಿವಾಹಕ್ಕೆ ಆಗಮಿಸುವ ವಧು-ವರ ಮತ್ತು ಅವರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಆಯೋಜಿಸಲಾಗಿತ್ತು.
32 ಜೋಡಿಗಳಲ್ಲಿ ಅಂಧ ಜೋಡಿಯೂ ದಾಂಪತ್ಯಕ್ಕೆ ಕಾಲಿರಿಸಿದ್ದು ಗಮನ ಸೆಳೆಯಿತು. ಆಂಧ್ರಪ್ರದೇಶದ ಮಡಕಶಿರಾ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆಯಿಂದ ನೋಂದಣಿ ಮಾಡಿಕೊಂಡಿದ್ದ ವಧು-ವರರು ದಾಂಪತ್ಯಕ್ಕೆ ಕಾಲಿರಿಸಿದರು. ದೇವಾಲಯದ ಪ್ರಧಾನ ಅರ್ಚಕ ಸುಬ್ಬುಕೃಷ್ಣ ಶಾಸ್ತ್ರಿ ನೇತೃತ್ವದ ಆಗಮಿಕರ ತಂಡ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮಾತನಾಡಿ, ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ. ನವ ದಂಪತಿಗಳು ಸುಖ, ಶಾಂತಿ, ನೆಮ್ಮದಿ ಹಾಗೂ ಒಗ್ಗಟ್ಟಿನಿಂದ ಬಾಳ್ವೆ ನಡೆಸಬೇಕು ಎಂದು ಸಲಹೆ ನೀಡಿದರು.
ದೇವನಹಳ್ಳಿ ಮಾಜಿ ಶಾಸಕ ಚಂದ್ರಣ್ಣ ಜಿಪಂ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ, ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಲಿ ಅಧ್ಯಕ್ಷ ವೆಂಕಟೇಶಬಾಬು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಮಹರ್ಷಿ ಆನಂದ ಗುರೂಜಿ ಸೇರಿದಂತೆ ಗಣ್ಯರು ಹಾಗೂ ಅಧಿಕಾರಿಗಳು ನವ ಜೋಡಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು.