ಬಳ್ಳಾರಿ: ಬುಡಾ ಅಧ್ಯಕ್ಷರಾಗಿ ದಮ್ಮೂರ್ ಶೇಖರ್ ಅವರನ್ನು ನೇಮಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾಧ್ಯಕ್ಷ ಸೇರಿ ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಟ್ಟು 48 ಬಿಜೆಪಿ ಸದಸ್ಯರು ಮಂಗಳವಾರ ಸಾಮೂಹಿಕವಾಗಿ ರಾಜೀನಾಮೆ ನೀಡಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಲ್ಲ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಜಿಲ್ಲಾಧ್ಯಕ್ಷ ಚನ್ನಬಸವನಗೌಡರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚನ್ನಬಸವನಗೌಡ ಪಾಟೀಲ್, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿಯವರು ನನ್ನ ಸಾಮರ್ಥ್ಯವೇನು ಎಂದು ಹೇಳಿದ್ದಾರೆ. ಕಳೆದ ಲೋಕಸಭೆ ಉಪಚುನಾವಣೆ, ಸಾರ್ವತ್ರಿಕ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಪಕ್ಷಕ್ಕೆ ಎಷ್ಟು ಲೀಡ್ ನೀಡಿದ್ದಾರೆ? ಎಂದು ಅಂದು ನಾನು ಪ್ರಶ್ನೆ ಮಾಡದಿದ್ದಕ್ಕೆ ಇಂದು ನನ್ನ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದೀರಾ ಎಂದು ಮರು ಪ್ರಶ್ನಿಸಿದರು.
ನಾನು ಹಿಂಭಾಗಿಲಿನಿಂದ ರಾಜಕಾರಣ ಮಾಡಿಲ್ಲ. 21ನೇ ವಯಸ್ಸಲ್ಲೇ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿದ್ದೇನೆ. ವಿಧಾನ ಪರಿಷತ್ ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನನ್ನ ಸಾಮರ್ಥ್ಯದ ಬಗ್ಗೆ ನನಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು.
ಪಕ್ಷ ಸಂಘಟನೆ ಗಟ್ಟಿಯಾಗಬೇಕು ಎಂದರೆ, ದಮ್ಮೂರು ಶೇಖರ್ ಅವರ ಬುಡಾ ನೇಮಕ ಪಕ್ಷದ ತತ್ವ ಸಿದ್ಧಾಂತಗಳ ವಿರೋಧವಾಗಿದ್ದು, ಅವರ ನೇಮಕಾತಿಯನ್ನು ಕೂಡಲೇ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎ.ರಾಮಲಿಂಗಪ್ಪ ಮಾತನಾಡಿ, ಶಾಸಕ ಜಿ.ಸೋಮಶೇಖರ ರೆಡ್ಡಿಯವರು ಬರೀ ಸುಳ್ಳು ಹೇಳುತ್ತಾರೆ. ಸಿಎಂ ಯಡಿಯೂರಪ್ಪರನ್ನು ಬೆದರಿಸಿ ದಮ್ಮೂರು ಶೇಖರ್ ಅವರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿದ್ದಾರೆ. ಕೂಡಲೇ ಅವರ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಜಿ.ವಿರೂಪಾಕ್ಷಗೌಡ, ಶಿವಾರೆಡ್ಡಿ, ಸುಗುಣಾ, ಮುರಾರಿಗೌಡ, ಗೋವಿಂದ ದಾಸರಿ ಸೇರಿದಂತೆ ಹಲವರು ಇದ್ದರು.