ಅಥಣಿ: ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ ರೈತ ಸಂಘಟನೆ ನೇತೃತ್ವದಲ್ಲಿ ಸಾವಿರಾರು ರೈತರು ದರೂರ ಹಲ್ಯಾಳ ಬಳಿ ಕೃಷ್ಣಾ ನದಿ ಸೇತುವೆ ಮೇಲೆ ಸೋಮವಾರ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ತಡೆದು ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಐದು ದಿನಗಳಿಂದ ರೈತ ಸಂಘಟನೆ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ ನೇತೃತ್ವದಲ್ಲಿ ನಡೆದ ಅಹೋರಾತ್ರಿ ಧರಣಿಯನ್ನು ಚಿಕ್ಕೋಡಿ ಎ.ಸಿ. ಸೋಮಲಿಂಗ ಗೆಣ್ಣೂರ ಹಾಗೂ ಅಥಣಿ ತಹಶೀಲ್ದಾರ್ ಎಂ.ಎನ್. ಬಳಿಗಾರ ರೈತರ ಮನವೊಲಿಸಿದ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ಮನವೊಲಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಶೀಘ್ರ ಕೃಷ್ಣಾ ನದಿಗೆ ನೀರು ಹರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಆಶ್ವಾಸನೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.
ಎರಡು ತಿಂಗಳಿಂದ ಕೃಷ್ಣಾ ನದಿ ಬತ್ತಿ ಬರಿದಾಗಿದೆ. ಇದರಿಂದಾಗಿ ನದಿ ಪಾತ್ರದ ಜನ ಹಾಗೂ ತಾಲೂಕಿನ ಜನ ಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇನ್ನು ಕೇವಲ ನಾಲ್ಕು ದಿನಗಳ ಕಾಲಾವಕಾಶ ನೀಡುತ್ತೇವೆ. ಕೃಷ್ಣಾ ನದಿಗೆ ನೀರನ್ನು ಹರಿಸದೇ ಹೋದರೆ ರೈತ ಸಂಘದಿಂದ ಆಮರಣ ಉಪವಾಸ ಕೈಗೊಳ್ಳುವ ಮೂಲಕ ಅಥಣಿ ತಾಲೂಕು ಬಂದ್ ಕರೆ ನೀಡಲಾಗುವುದು ಎಂದು ರೈತ ಸಂಘಟನೆ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ ಎಚ್ಚರಿಸಿದರು.
ಈ ವೇಳೆ ಶಿವಬಸವ ಸ್ವಾಮೀಜಿ ಮಾತನಾಡಿ, ಹಸಿವನ್ನು ಬಲ್ಲವನೇ ಕಷ್ಟ ಏನೆಂದು ಅರಿತಿರುತ್ತಾನೆ. ಆದ್ದರಿಂದ ರಾಜಕಾರಣಿಗಳು ರೆಸಾರ್ಟ್ ರಾಜಕಾರಣ ಬಿಟ್ಟು ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು. ಚುನಾವಣೆ ಬಂದಾಗ ಮಾತ್ರ ರೈತ ಹಾಗೂ ಜನಪರ ಮಾತು ಆಡುವುದನ್ನು ಬಿಟ್ಟು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದರು.
ಇದೇ ವೇಳೆ ಚಿಕ್ಕೋಡಿ ಜಿಲ್ಲಾ ಎ.ಸಿ. ಸೋಮಲಿಂಗ ಗೆಣ್ಣೂರ ಮಾತನಾಡಿ, ಈಗಾಗಲೇ ಕೊಯ್ನಾದಿಂದ ನೀರು ಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮೂರು ಬಾರಿ ಸರ್ಕಾರದ ಮಟ್ಟದಲ್ಲಿ ಮನವಿ ಸಲ್ಲಿಸಲಾಗಿದೆ. ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರಕ್ಕಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಇದ್ದ ಕಡೆ ಮೂರು ತಾಲೂಕಿನಲ್ಲಿ ಸುಮಾರು 64 ಗ್ರಾಮಗಳಿಗೆ 88 ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮತ್ತು ದನಕರುಗಳಿಗೆ ಅಗತ್ಯಕ್ಕೆ ತಕ್ಕಂತೆ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದರು.
ನೀರಿಗಾಗಿ ರೈತರು ರಾಜ್ಯ ಹೆದ್ದಾರಿಯನ್ನು ನಾಲ್ಕು ಗಂಟೆಗಳ ಕಾಲ ತಡೆದು ಪ್ರತಿಭಟನೆ ನಡೆಸಿದ್ದರಿಂದ ಎರಡೂ ಬದಿಗೆ ಸುಮಾರು ನಾಲ್ಕು ಕಿ.ಮೀ. ವರೆಗೆ ವಾಹನಗಳು ನಿಂತು ಯಾತ್ರಿಕರು, ಗ್ರಾಮಸ್ಥರು ಹಾಗೂ ಮಹಿಳೆಯರು ತುಂಬ ಪರದಾಡುವಂತಾಯಿತು. ವಾಹನ ಚಾಲಕರು ಪ್ರಯಾಣಿಕರು ವಾಹನಗಳಿಂದ ಇಳಿದು ಬತ್ತಿದ ನದಿಯಲ್ಲಿ ಹಾಯ್ದು ಮುಂದಿನ ಪ್ರಯಾಣ ಬೆಳೆಸುವುದು ಸಾಮಾನ್ಯವಾಗಿತ್ತು.
ರೈತರು ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಗಚ್ಚಿನಮಠದ ಶಿವಬಸವ ಸ್ವಾಮೀಜಿ, ನದಿಇಂಗಳಗಾಂವ ಸಿದ್ದಲಿಂಗ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ಹಲ್ಲಾಳ ಶ್ರೀಗಳು ಬೆಂಬಲ ಸೂಚಿಸಿದರು. ನದಿ ಇಂಗಳಗಾಂವ ಹಾಗೂ ಹಲ್ಯಾಳ ಮಠದಿಂದ ಹೋರಾಟ ನಿರತ ರೈತರಿಗೆ ಅನ್ನ ದಾಸೋಹ ನೆರವೇರಿಸಲಾಯಿತು.
ಅಥಣಿ ತಹಶೀಲ್ದಾರ್ ಎಂ.ಎನ್. ಬಳಿಗಾರ, ಡಿವೈಎಸ್‌ಪಿ ಬಸರಗಿ, ಕುಮಾರ ಮಡಿವಾಳ, ಸತೀಶ ಕುಲಕರ್ಣಿ, ರವಿ ಗಾಣಗೇರ, ಜಗನಾಥ ಬಾಮನೆ, ಅಣ್ಣಾಸಾಬ ತೆಲಸಂಗ, ಮೋದಿನ ಮೋಳೆ ಇದ್ದರು.