Advertisement

ಹಿಂಸೆಗೆ ವ್ಯಾಪಕ ಖಂಡನೆ ; ಜೆ.ಎ.ನ್‌ಯು. ಹಿಂಸಾಚಾರದ ವಿರುದ್ಧ ದೇಶ, ವಿದೇಶಗಳಲ್ಲೂ ಕಿಡಿ

09:44 AM Jan 08, 2020 | Hari Prasad |

ಹೊಸದಿಲ್ಲಿ: ದಿಲ್ಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು), ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಮೇಲೆ ರವಿವಾರ ಸಂಜೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣ, ಸೋಮವಾರ ಮತ್ತಷ್ಟು ಕಾವು ಪಡೆದುಕೊಂಡಿತು. ಒಂದೆಡೆ, ಜೆಎನ್‌ಯು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ವಿವಿಯ ಕುಲಪತಿಯವರ ಪದಚ್ಯುತಿಗೆ ಆಗ್ರಹಿಸಿದರೆ, ಮತ್ತೂಂದೆಡೆ, ಘಟನೆ ಖಂಡಿಸಿ ದೇಶದ ನಾನಾ ವಿವಿಗಳು ಹಾಗೂ ಹೊರದೇಶಗಳ ಪ್ರತಿಷ್ಠಿತ ಆಕ್ಸ್‌ಫ‌ರ್ಡ್‌, ಕೊಲಂಬಿಯಾ ವಿವಿಗಳಲ್ಲೂ ಪ್ರತಿಭಟನೆಗಳು ನಡೆದವು. ಈ ನಡುವೆ ಪ್ರಕರಣದ ತನಿಖೆಯನ್ನು ದಿಲ್ಲಿ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ. ಇನ್ನು, ಈ ಪ್ರಕರಣ ವನ್ನಿಟ್ಟುಕೊಂಡು ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರ ಚಾಟ ಮುಂದುವರಿಸಿವೆ.

Advertisement

ಕುಲಪತಿಯೇ ಚಕ್ಕರ್‌!: ಹಿಂಸಾಚಾರಕ್ಕೆ ಸಂಬಂಧಿಸಿ
ಜೆಎನ್‌ಯು ಆಡಳಿತಾಧಿಕಾರಿಗಳ ಜತೆಗೆ ಕೇಂದ್ರ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ನಡೆಸಿದ ಸಭೆಗೆ ಜೆಎನ್‌ಯು ಕುಲಪತಿ ಜಗದೇಶ್‌ ಕುಮಾರ್‌ ಅವರೇ ಗೈರಾಗಿದ್ದರು! ಜೆಎನ್‌ಯು ರಿಜಿಸ್ಟ್ರಾರ್‌, ಪ್ರಾಕ್ಟರ್‌ ಹಾಗೂ ಇನ್ನಿತರ ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.

ಪದಚ್ಯುತಿಗೆ ಆಗ್ರಹ: ಹಿಂಸಾಚಾರಕ್ಕೆ ಪ್ರತಿಯಾಗಿ ಯಾವುದೇ ಕ್ರಮ ಕೈಗೊಳ್ಳದ ಕುಲಪತಿ ಜಗದೇಶ್‌ ಕುಮಾರ್‌ ಅವರನ್ನು ಆ ಸ್ಥಾನದಿಂದ ತೆಗೆದುಹಾಕಬೇಕು, ಪ್ರಕರಣದ ತನಿಖೆಯಾಗಬೇಕು ಎಂದು ವಿವಿಯ ಪ್ರಾಧ್ಯಾಪಕರ ಸಂಘ ಆಗ್ರಹಿಸಿದೆ. ಇನ್ನು, ರವಿವಾರದ ಹಿಂಸಾಚಾರಕ್ಕೆ ಕುಲಪತಿ ಜಗದೇಶ್‌ ಕುಮಾರ್‌ ಅವರೇ ಹೊಣೆ ಎಂದು ವಿವಿಯ ವಿದ್ಯಾರ್ಥಿಗಳ ಒಕ್ಕೂಟ ಆರೋಪಿಸಿದೆ.

ಕ್ರೈಂ ಬ್ರಾಂಚ್‌ಗೆ ವರ್ಗಾವಣೆ: ಹಿಂಸಾಚಾರ ಪ್ರಕರಣವನ್ನು ದಿಲ್ಲಿ ಪೊಲೀಸ್‌ನ ಕ್ರೈಂ ಬ್ರಾಂಚ್‌ ವಿಭಾಗಕ್ಕೆ ವರ್ಗಾಯಿಸಿರುವುದಾಗಿ ಕೇಂದ್ರ ಗೃಹ ಇಲಾಖೆ ಪ್ರಕಟಿಸಿದೆ.

ಕಾಂಗ್ರೆಸ್‌ ಟೀಕೆ: ಕೇಂದ್ರ ಸರಕಾರ ದೇಶದ ಯುವಕರ ನಡುವೆ ದ್ವೇಷ ಹುಟ್ಟುಹಾಕುತ್ತಿದೆ. ಜೆಎನ್‌ಯುನಲ್ಲಿ ನಡೆದಿರುವ ದಾಳಿ ಹಿಟ್ಲರ ಅವಧಿಯ ನಾಜಿ ಆಡಳಿತವನ್ನು ನೆನಪಿಗೆ ತರುತ್ತದೆ ಎಂದು ಕಾಂಗ್ರೆಸ್‌ ವಾಗ್ಧಾಳಿ ನಡೆಸಿದೆ.

Advertisement

ವಾರ್ಡನ್‌ಗಳ ರಾಜೀನಾಮೆ: ರವಿವಾರ ನಡೆದ ಹಿಂಸಾಚಾರದ ನೈತಿಕ ಹೊಣೆ ಹೊತ್ತು ಜೆಎನ್‌ಯು ಕ್ಯಾಂಪಸ್‌ನ ಸಬರ್‌ಮತಿ ಹಾಸ್ಟೆಲ್‌ನ ಇಬ್ಬರು ವಾರ್ಡನ್‌ಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಾನಾ ವಿವಿಗಳಲ್ಲಿ ಪ್ರತಿಭಟನೆ: ಜೆಎನ್‌ಯು ಘಟನೆಯನ್ನು ಖಂಡಿಸಿ ಬೆಂಗಳೂರು ವಿವಿ, ಪಾಂಡಿಚೇರಿ, ಹೈದರಾಬಾದ್‌, ಅಲಿಗಢ ವಿವಿ ಸಹಿತ ದೇಶದ ನಾನಾ ವಿವಿಗಳಲ್ಲಿನ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ಇಂಗ್ಲೆಂಡ್‌ನ‌ ಆಕ್ಸ್‌ಫ‌ರ್ಡ್‌ ಹಾಗೂ ಅಮೆರಿಕದ ಕೊಲಂಬಿಯಾ ವಿವಿಗಳಲ್ಲಿನ ವಿದ್ಯಾರ್ಥಿಗಳು ಪ್ರತಿಭಟನಾ ಸೂಚಕ ಫ‌ಲಕಗಳನ್ನು ಹಿಡಿದು ಪಥಸಂಚಲನ ನಡೆಸಿ ಜೆಎನ್‌ಯು ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು.

ಎಬಿವಿಪಿ ಪ್ರತಿಭಟನೆ: ಜೆಎನ್‌ಯುನಲ್ಲಿ ಆಗಿರುವ ಹಿಂಸಾಚಾರ ಖಂಡಿಸಿರುವ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ), ದಿಲ್ಲಿಯ ಮಾತುಂಗದಲ್ಲಿ ಇರುವ ರುಯಿಯಾ ಕಾಲೇಜಿನ ಎದುರುಗಡೆ ಸೋಮವಾರ ಪ್ರತಿಭಟನೆ ನಡೆಸಿತು. ಅಲ್ಲದೆ ಹಿಂಸಾಚಾರಕ್ಕೆ ಎಡಪಕ್ಷಗಳು ಮತ್ತು ಕಾಲೇಜಿನ ವಿದ್ಯಾರ್ಥಿ ಒಕ್ಕೂಟವೇ ಕಾರಣ ಎಂದು ಆರೋಪಿಸಿತು. ಜೆಎನ್‌ಯು ಕ್ಯಾಂಪಸ್‌ ಮುಂಭಾಗದಲ್ಲಿ ಹಾಗೂ ಪುಣೆಯಲ್ಲೂ ಎಬಿವಿಪಿ ಪ್ರತಿಭಟನೆ ನಡೆಸಿದೆ.

ಕೋಲ್ಕತಾದಲ್ಲಿ ಲಾಠಿ ಪ್ರಹಾರ: ಜೆಎನ್‌ಯು ಘಟನೆ ಖಂಡಿಸಿ ಪ.ಬಂಗಾಲದ ಜಾಧವ್‌ಪುರದಲ್ಲಿ ಒಂದೆಡೆ ಎಡಪಕ್ಷಗಳ ಬೆಂಬಲಿಗರು ಪ್ರತಿಭಟನೆ ನಡೆಸಿದರೆ, ಎಬಿವಿಪಿ ಸದಸ್ಯರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಬೆಂಬಲಿಗರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆಯವರು ಮುಖಾಮುಖೀಯಾಗಿ, ಪರಸ್ಪರರ ವಿರುದ್ಧ ಘೋಷಣೆ ಕೂಗಿದ್ದಾರೆ. ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆ
ಹಿಂಸಾಚಾರದಲ್ಲಿ ಗಾಯಗೊಂಡು ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ಜೆಎನ್‌ಯುನ 32 ವಿದ್ಯಾರ್ಥಿಗಳು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇವರಲ್ಲೊಬ್ಬರಾದ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್‌ ಅವರ ತಲೆಗೆ ಜೋರಾಗಿ ಹೊಡೆತ ಬಿದ್ದಿದ್ದರಿಂದ, 18 ಹೊಲಿಗೆ ಹಾಕಲಾಗಿದೆ ಎಂದು ಏಮ್ಸ್‌ ಮೂಲಗಳು ತಿಳಿಸಿವೆ. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಐಶೆ, ‘ಹಲ್ಲೆಯ ವೇಳೆ ಗೂಂಡಾಗಳು ನನ್ನನ್ನು ವಿಶೇಷವಾಗಿ ಟಾರ್ಗೆಟ್‌ ಮಾಡಿದ್ದರು’ ಎಂದಿದ್ದಾರೆ.

ಸುಪ್ರೀಂಗೆ ಅರ್ಜಿ

ಸುಪ್ರೀಂ ಕೋರ್ಟ್‌ ಆದೇಶದ ಹೊರತಾಗಿಯೂ, ಜೆಎನ್‌ಯುನಲ್ಲಿ ಹಿಂಸಾಚಾರ ತಡೆಯಲು ವಿಫ‌ಲವಾದ ದಿಲ್ಲಿ ಪೊಲೀಸರು ಮತ್ತು ಕೇಂದ್ರ ಸರಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂಗೆ ಸಲ್ಲಿಕೆಯಾಗಿದೆ. ಇವರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳುವಂತೆ ಅರ್ಜಿಯಲ್ಲಿ ಕೋರಲಾಗಿದೆ.

ದೇಶದ ಧ್ವನಿಯಾದ ಯುವಕರ ಮೇಲೆ ಹಿಂದೆಂದೂ ನಡೆದಿರದಂಥ ಹಲ್ಲೆ ಖಂಡನೀಯ. ಇಂದಿನ ಯುವಕರು, ವಿದ್ಯಾರ್ಥಿಗಳು ದಿನವೂ ಇಂಥದ್ದೇ ಸವಾಲು ಎದುರಿಸುತ್ತಿದ್ದು, ಇದು ಕೇಂದ್ರದ ಶೋಚನೀಯ ಆಡಳಿತಕ್ಕೆ ಸಾಕ್ಷಿ.
– ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ರಾಜಕೀಯ ಅಡ್ಡಾಗಳಾಗಿ ಪರಿವರ್ತಿತಗೊಳ್ಳಲು ಬಿಡುವುದಿಲ್ಲ. ಜೆಎನ್‌ಯುನಲ್ಲಿ ರವಿವಾರ ಹಿಂಸಾ ಚಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
– ರಮೇಶ್‌ ಪೊಖ್ರಿಯಾಲ್‌, ಕೇಂದ್ರ ಸಚಿವ

ವಿದ್ಯಾರ್ಥಿಗಳ ಮೇಲಿನ ದಾಳಿ ನನಗೆ ಮುಂಬಯಿನ 26/11ರ ಉಗ್ರರ ದಾಳಿ ನೆನಪಿಸಿತು. ದಿಲ್ಲಿ ಪೊಲೀಸರು ತಪ್ಪಿ ತಸ್ಥರನ್ನು ಪತ್ತೆ ಹಚ್ಚುವಲ್ಲಿ ವಿಫ‌ಲರಾದರೆ, ಅವರೂ ಈ ಘಟನೆಯ ನೈತಿಕತೆ ಹೊರಬೇಕಾಗುತ್ತದೆ.
– ಉದ್ಧವ್‌ ಠಾಕ್ರೆ, ಮಹಾರಾಷ್ಟ್ರ ಸಿಎಂ

ಜೆಎನ್‌ಯು ಘಟನೆಯನ್ನು ನಾವೂ ಖಂಡಿ ಸುತ್ತೇವೆ. ಆದರೆ, ಇದನ್ನು ಬಳಸಿಕೊಂಡು ಕಾಂಗ್ರೆಸ್‌, ಆಪ್‌, ಎಡ ಪಕ್ಷಗಳು ದೇಶಾದ್ಯಂತ ಗಲಭೆಯ ವಾತಾವರಣ ಸೃಷ್ಟಿಸುತ್ತಿವೆ.
– ಪ್ರಕಾಶ್‌ ಜಾಬ್ಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next