ಕಟೀಲು: ಕಟೀಲು ದೇವಿಯ ಪುಣ್ಯ ಸನ್ನಿಧಿಯಲ್ಲಿ ರವಿವಾರ 71 ಜೋಡಿಗಳು ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಬೆಳಗ್ಗೆ 8.45ರಿಂದ ಆರಂಭವಾದ ವಿವಾಹ ಮುಹೂರ್ತ ಗಳು ಮಧ್ಯಾಹ್ನ 1ರ ತನಕವೂ ಇದ್ದವು. ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಸುಮಾರು 10 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.
ಮದುವೆಗೆ ಎರಡು ಕೌಂಟರ್ ಸಾಮೂಹಿಕ ವಿವಾಹಗಳನ್ನು ಸುವ್ಯವಸ್ಥಿತವಾಗಿ ನಡೆಸುವುದಕ್ಕಾಗಿ 4 ಮಂದಿ ಅರ್ಚಕ ಪುರೋಹಿತರು, 2ಕೌಂಟರ್ ಮತ್ತು ನೋಂದಣಿಗೆ ಪ್ರತ್ಯೇಕ ಸಿಬಂದಿ ನೇಮಕ ಮಾಡಲಾಗಿದೆ ಎಂದು ಆನುವಂಶಿಕ ಅರ್ಚಕ ಶ್ರೀಹರಿ ನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ಉತ್ತಮ ಟ್ರಾಫಿಕ್ ವ್ಯವಸ್ಥೆ ಮದುವೆಗಳಿಗೆ ಬಂದ ದಿಬ್ಬಣಗಳು, ಜನರ ಜತೆಗೆ ರವಿವಾರ ರಜಾದಿನವೂ ಆದುದರಿಂದ ಕಟೀಲು ಪೇಟೆ ಮತ್ತು ರಥಬೀದಿಯ ಪರಿಸರದಲ್ಲಿ ಸಾಕಷ್ಟು ಜನ ಮತ್ತು ವಾಹನ ಸಂದಣಿ ಇತ್ತು. ಸುಗಮ ಸಂಚಾರಕ್ಕಾಗಿ ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳಿಗೆ ಕಾಲೇಜು ಮೈದಾನ ಮತ್ತು ಬಜಪೆ ಕಡೆಯಿಂದ ಬರುವ ವಾಹನಗಳಿಗೆ ಪ್ರೌಢ ಶಾಲೆ, ಹಳೆ ಪ್ರಾಥಮಿಕ ಶಾಲೆಯ ವಠಾರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ವತಿಯಿಂದ ಖಾಸಗಿ ಟ್ರಾಫಿಕ್ ಸಿಬಂದಿ ನೇಮಕ ಮಾಡಲಾಗಿತ್ತು ಎಂದು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ತಿಳಿಸಿದ್ದಾರೆ.