ಕೆಂಗೇರಿ: “ಆರ್ಥಿಕ ದುರ್ಬಲರಿಗೆ ಸಾಮೂಹಿಕ ವಿವಾಹಗಳು ಸಹಕಾರಿಯಾಗುತ್ತವೆ. ಅಲ್ಲದೆ, ಸಾಮಾಜಿಕ ಬದಲಾವಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ,’ ಎಂದು ಸಿದ್ದಗಂಗಾ ಕ್ಷೇತ್ರದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಮಹಾಸ್ವಾಮಿ ತಿಳಿಸಿದರು.
ಕೆಂಗೇರಿಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಆವರಣದಲ್ಲಿ ಸಮಾನ ಮನಸ್ಕರ ಒಕ್ಕೂಟ ಟ್ರಸ್ಟ್ ಆಯೋಜಿಸಿದ್ದ 21 ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು “ಇನ್ನೊಬ್ಬರ ಬದುಕಿನ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮನೋಭಾವವನ್ನು ರೂಢಿಸಿಕೊಂಡಾಗ ಮಾತ್ರ ಬದುಕು ಸಾರ್ಥಕತೆ ಪಡೆಯುತ್ತದೆ. ಆಡಂಭರದ ಮದುವೆ ಮಹೋತ್ಸವಗಳು ಸಮಾಜದ ಪ್ರಗತಿಗೆ ಮಾರಕ.
ಜನತೆ ಯಾವುದೇ ಕಾರಣಕ್ಕೂ ಆಡಂಭರದ ಮದುವೆಯ ವ್ಯಾಮೋಹ ಬೆಳೆಸಿಕೊಳ್ಳಬಾರದು,’ ಎಂದು ಕಿವಿಮಾತು ಹೇಳಿದರು. ಟ್ರಸ್ಟ್‌ನ ಅಧ್ಯಕ್ಷ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, “ಸಮಾನ ಮನಸ್ಕರ ಒಕ್ಕೂಟದಿಂದ 21 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿ ವಿವಾಹವಾದ 2340 ಮಂದಿ ಉತ್ತಮ ಜೀವನ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ,’ ಎಂದು ತಿಳಿಸಿದರು.
76 ಜೋಡಿ ವಧು-ವರರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅವರಿಗೆ ಸಸಿಯನ್ನು ಕಾಣಿಕೆಯಾಗಿ ನೀಡಿ, ಉತ್ತಮ ರೀತಿಯಲ್ಲಿ ಪೋಷಿಸುವಂತೆ ಸಲಹೆ ನೀಡಲಾಯಿತು. ವ್ಯಕ್ತಿಯೊಬ್ಬರು ಅಂದ ವಧುವನ್ನು ಇದೇ ಸಮಾರಂಭದಲ್ಲಿ ವಿವಾಹವಾಗುವ ಮೂಲಕ ಆದರ್ಶ ಮೆರೆದರು.
ಕನಕಪುರ ಮರಳೇಗವಿ ಮಠದ ಡಾ.ಮುಮ್ಮಡಿ ಶಿವರುದ್ರಮಹಾಸ್ವಾಮಿ, ಏಕದಳಬಿಲ್ವ ಬಂಡೇಮಠ ಕಿರಿಯ ಶ್ರೀ ಶಿವಾನಂದಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ಬಿಬಿಎಂಪಿ ಸದಸ್ಯ ರಾಜಣ್ಣ, ಆರ್ಯ ಶ್ರೀನಿವಾಸ್, ವಾಸುದೇವ್, ನಾಮನಿರ್ದೇಶಿತ ಸದಸ್ಯ ಜಿ.ವಿ.ಸುರೇಶ್, ಟ್ರಸ್ಟ್‌ನ ಡಾ.ಬೈರಮಂಗಲ ರಾಮೇಗೌಡ, ತ್ಯಾಗರಾಜು, ಮರಿಮಲ್ಲಯ್ಯ, ಮಹದೇವಮ್ಮ, ಎಚ್.ಎಸ್.ನರಸಿಂಹೇಗೌಡ ಇದ್ದರು.