Advertisement

201 ಮೂರ್ತಿಗಳ ಸಾಮೂಹಿಕ ಮೆರವಣಿಗೆ

11:44 AM Aug 28, 2017 | Team Udayavani |

ಬೆಂಗಳೂರು: ಭಾರತಿನಗರದಲ್ಲಿ 201 ಗಣೇಶನ ವಿಗ್ರಹಗಳನ್ನು ಅದ್ಧೂರಿ ಮೆರವಣಿಗೆಯೊಂದಿಗೆ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಭಾನುವಾರ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು. ಗಣೇಶ ವಿಸರ್ಜನಾ ಮೆರವಣಿಗೆಯುದ್ದಕಕೂ ಮುಗಿಲುಮುಟ್ಟುವ ಘೋಷಣೆಗಳು, ಆ ಮೆರವಣಿಗೆಗೆ ರಂಗುತುಂಬುವ ಜಾನಪದ ಕಲೆಗಳು, ಅದಕ್ಕೆ ತಕ್ಕಂತೆ ಹೆಜ್ಜೆಹಾಕಿ ಸಂಭ್ರಮಿಸಿದ ಜನಸ್ತೋಮದಲ್ಲಿ ಗಣೇಶನಿಗೆ ಅದ್ದೂರಿ ಬೀಳ್ಕೊಡಲಾಯಿತು.

Advertisement

ಆರ್‌ಬಿಎಎನ್‌ಎಂಎಸ್‌ ಆಟದ ಮೈದಾನ ಬಳಿಯಿಂದ ಹೊರಟ ಮೆರವಣಿಗೆಯು ಜ್ಯುವೆಲ್ಲರಿ ಸ್ಟ್ರೀಟ್‌, ಸ್ಟೇಪಿಂಗ್ಸ್‌ ರಸ್ತೆ, ತಿಮ್ಮಯ್ಯ ರಸ್ತೆ ,  ಕಾಮರಾಜ ರಸ್ತೆ ಮೂಲಕ ಅಂತಿಮವಾಗಿ ಹಲಸೂರು ಕೆರೆಗೆ ಸಮಾಪನಗೊಂಡಿತು. ಅಲ್ಲಿ 201 ಗಣೇಶನ ವಿಗ್ರಹಗಳನ್ನು ವಿಸರ್ಜಿಸಲಾಯಿತು.  ಇದಕ್ಕೂ ಮುನ್ನ ಭಾರತಿನಗರ, ಶಿವಾಜಿನಗರ, ಪುಲಕೇಶಿನಗರ ಕಾಕ್ಸ್‌ಟೌನ್‌ ಸೇರಿದಂತೆ ದಂಡುಪ್ರದೇಶ ಸುತ್ತಮುತ್ತಲಿನಲ್ಲಿ ಇಡಲಾಗಿದ್ದ ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಸಾಗಿಬಂದವು.

ಮಾರ್ಗದಲ್ಲೆಲ್ಲಾ ಡೊಳ್ಳುಕುಣಿತ, ತಮಟೆ, ಮಹಾರಾಷ್ಟ್ರದ ಬ್ಯಾಂಡ್ಸ್‌ ಸೇರಿದಂತೆ ವಿವಿಧ ಜಾನಪದ ಕಲೆಗಳ ಪ್ರದರ್ಶನದಿಂದ ಕಾಮರಾಜ ರಸ್ತೆಯು ಜಾತ್ರೆಯ ರಂಗುಪಡೆದಿತ್ತು.  ತುಂತುರು ಮಳೆ ಮೆರವಣಿಗೆಗೆ ಯಾವುದೇ ಅಡ್ಡಿಯಾಗಲಿಲ್ಲ. ಮಳೆಯಲ್ಲಿಯೇ ಛತ್ರಿ ಹಿಡಿದು ಕ್ಯೂನಲ್ಲಿ ನಿಂತು ಜನ ಪ್ರಸಾದ ಸ್ವೀಕರಿಸಿದರು. ಮಳೆಯಲ್ಲೇ ನಿಂತು ದೇವರ ಕುಣಿತ, ಡೊಳ್ಳುಕುಣಿತದ ಪ್ರದರ್ಶನ ವೀಕ್ಷಿಸಿ ಸಂಭ್ರಮಿಸಿದರು.

ಬಿಗಿ ಭದ್ರತೆ: ಕಾಮರಾಜ್‌ ರಸ್ತೆ ಸೂಕ್ಷ್ಮ ಪ್ರದೇಶವಾಗಿದ್ದರಿಂದ  ಸಾಮೂಹಿಕ ಗಣಪತಿ ಮೂರ್ತಿಯ ಮೆರವಣಿಗೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಕಮರ್ಷಿಯಲ್‌ ಸ್ಟ್ರೀಟ್‌, ಭಾರತಿನಗರ, ಹಲಸೂರು, ಪುಲಕೇಶಿನಗರ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿ ನೇಮಿಸಲಾಗಿತ್ತು. ಈ ಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌, ಎಸಿಪಿ ಹಾಗೂ ಡಿಸಿಪಿ ಅಜಯ್‌ ಹಿಲೋರಿ ಖುದ್ದು ಸ್ಥಳಕ್ಕಾಗಮಿಸಿ ಭದ್ರತೆ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next