Advertisement

ಲುಕ್ಕಲ್ಲೇ ಕಿಕ್ಕು! ಮಾಸ್‌ ಹಾಡಿನಲ್ಲಿ ಕ್ಲಾಸ್‌ ಲೀಡರ್‌

02:40 PM Jun 23, 2017 | |

ಸುತ್ತಲೂ ನೂರಾರು ಜನ. ಅವರ ನಡುವೆ ಖದರ್‌ ಲುಕ್‌ನಲ್ಲಿ ನಿಂತಿದ್ದ ಪವರ್‌ಮ್ಯಾನ್‌. ಕ್ಯಾಮೆರಾ ಹಿಡಿದು ಟ್ರಾಲಿ ಸುತ್ತುತ್ತಿದ್ದ ಕ್ಯಾಮೆರಾಮೆನ್‌. ಹಿನ್ನೆಲೆಯಲ್ಲಿ, “ಮುಂದೆ ನಿಂತ್ರು ನೂರು ಗನ್ನು, ಜಗ್ಗೊದಿಲ್ಲ ಯುವರಾಜನು …’ ಎಂಬ ಹಾಡು. ಆ ಹಾಡಿಗೆ ತಕ್ಕಂತೆ ಲುಕ್ಕು, ಬಿಲ್ಡಪ್‌ ಕೊಡುತ್ತಿದ್ದ ಶಿವರಾಜಕುಮಾರ್‌ …

Advertisement

ಇದು ಕಂಡು ಬಂದದ್ದು ಮಿನರ್ವ ಮಿಲ್‌ನಲ್ಲಿ ಇತ್ತೀಚೆಗೆ ನಡೆದ “ಮಾಸ್‌ ಲೀಡರ್‌’ ಚಿತ್ರದ ಚಿತ್ರೀಕರಣ ಸಂದರ್ಭ.
ಸಮಯ ನಾಲ್ಕರ ಆಸುಪಾಸು. ಅಲ್ಲಿಗೆ ಪತ್ರಕರ್ತರು ಭೇಟಿ ನೀಡುತ್ತಿದ್ದಂತೆಯೇ, ನೃತ್ಯ ನಿರ್ದೇಶಕ ಹರ್ಷ ಹಾಡಿಗೆ ಬ್ರೇಕ್‌ ಕೊಟ್ಟರು. ಇಡೀ ಚಿತ್ರತಂಡ ಮಾತಿಗೆ ಕುಳಿತುಕೊಂಡಿತು. ಎಲ್ಲರೂ ಮಾತಾಡಿ ಮುಗಿಸಿದ ಬಳಿಕ ಶಿವರಾಜಕುಮಾರ್‌ ಮಾತು ಶುರುವಿಟ್ಟುಕೊಂಡರು.

“ಸುಮಾರು 60 ದಿನ ಚಿತ್ರೀಕರಣದಲ್ಲಿ ಒಳ್ಳೆಯ ಅನುಭವ ಆಗಿದೆ. ಎಲ್ಲರೂ ಇಲ್ಲಿ ಒಂದು ಟೀಮ್‌ ಆಗಿ ಕೆಲಸ
ಮಾಡಿದ್ದೇವೆ. ಕಾಶ್ಮೀರದಲ್ಲಿ ಸಾಕಷ್ಟು ಸಮಸ್ಯೆ ಎದುರಾದರೂ, ಯಾರೂ ಕೂಡ ಹುಮ್ಮಸ್ಸು ಕಳೆದುಕೊಳ್ಳಲಿಲ್ಲ. ಕೊರೆಯೋ ಚಳಿ ನಡುವೆ ಕೆಲಸ ಮಾಡಿದ್ದೇವೆ. ಆ ಸ್ಥಳದಲ್ಲಿ ನಡೆದ ಚೇಸಿಂಗ್‌ ಮರೆಯದ ಅನುಭವ ಕೊಟ್ಟಿದೆ. ಇಲ್ಲಿ “ಮಾಸ್‌ ಲೀಡರ್‌’ ಅಂದರೆ ನಾನೊಬ್ಬನೇ ಅಲ್ಲ. ಎಲ್ಲರೂ ಲೀಡರ್‌ಗಳೇ. ರಿಯಾಲಿಟಿಗೆ ಹತ್ತಿರವಾಗುವಂತಹ ಸನ್ನಿವೇಶಗಳಿವೆ. ಪಂಚಿಂಗ್‌ ಡೈಲಾಗ್‌ಗಳಿವೆ. ಗುಣಮಟ್ಟಕ್ಕೆ ಯಾವ ಕೊರತೆಯೂ ಇಲ್ಲದಂತೆ ಚಿತ್ರ ಮೂಡಿಬಂದಿದೆ. ಕಲಾವಿದರ ಬಳಗ ದೊಡ್ಡದಿರುವುದರಿಂದ ಪ್ರೊಡಕ್ಷನ್‌ ಆಗುತ್ತಾ ಎಂಬ ಅನುಮಾನ ಆರಂಭದಲ್ಲಿತ್ತು. ಆದರೆ, ತರುಣ್‌ ಉತ್ಸಾಹ ನಿಜಕ್ಕೂ ಖುಷಿಕೊಟ್ಟಿದೆ. ಹಂಡ್ರೆಡ್‌ ಪರ್ಸೆಂಟ್‌ ಚಿತ್ರ ಯಶಸ್ಸು ಪಡೆಯಲಿದೆ. ಇಲ್ಲಿ ಸಂದೇಶಗಳಿಗೆ ಬರವಿಲ್ಲ’ ಎಂದರು  ಶಿವರಾಜಕುಮಾರ್‌.

ನಿರ್ದೇಶಕ ನರಸಿಂಹಮೂರ್ತಿ ಅವರಿಗೆ ಇಡೀ ತಂಡ ಕೊಟ್ಟ ಸಹಕಾರದಿಂದ ಒಳ್ಳೆಯ ಸಿನಿಮಾ ಮಾಡೋಕೆ ಸಾಧ್ಯವಾಗಿದೆಯಂತೆ. ಅದರಲ್ಲೂ ಶಿವರಾಜಕುಮಾರ್‌ ಅವರ ಪ್ರೋತ್ಸಾಹದಿಂದಲೇ ಸಿನಿಮಾವನ್ನು ಅಂದುಕೊಂಡಂತೆ ಮಾಡಲು ಸಾಧ್ಯವಾಗಿದೆ ಅನ್ನುತ್ತಾರೆ ನಿರ್ದೇಶಕರು.ಸಂಗೀತ ನಿರ್ದೇಶಕ ವೀರ್‌ ಸಮರ್ಥ್ ಅವರ ಕೆರಿಯರ್‌ನಲ್ಲೇ ಇದು ದೊಡ್ಡ ಸಿನಿಮಾವಂತೆ.

“ಸೂಪರ್‌ಸ್ಟಾರ್‌ ಚಿತ್ರ ಮಾಡಿದ್ದು ನನಗೆ ಸಿಕ್ಕ ಬಹುದೊಡ್ಡ ಅವಕಾಶ. ಈ ಚಿತ್ರದ ಐದು ಹಾಡುಗಳೂ ಸೊಗಸಾಗಿವೆ. ನಾಗೇಂದ್ರಪ್ರಸಾದ್‌, ಚೇತನ್‌ಕುಮಾರ್‌ ಗೀತೆ ಬರೆದಿದ್ದು, ಅರೇಬಿಕ್‌ ಶೈಲಿಯಲ್ಲೊಂದು ಹಾಡು ವಿಶೇಷವಾಗಿದೆ.
ಪ್ರತಿಯೊಬ್ಬರಿಗೂ ಹಾಡು ರೀಚ್‌ ಆಗುತ್ತೆ ಎಂಬ ವಿಶ್ವಾಸ ನನ್ನದು’ ಎಂದರು ವೀರ್‌ ಸಮರ್ಥ್. ಗುರು ಜಗ್ಗೇಶ್‌ಗೆ, “ಶಿವರಾಜಕುಮಾರ್‌ ಜತೆ ಮೊದಲ ಅನುಭವ. ಅವರ ಎನರ್ಜಿ ನೋಡಿ, ನಮಗೂ ಅಷ್ಟೇ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಯ್ತು. ಡಬ್ಬಿಂಗ್‌ ಮಾಡುವಾಗ, ಈ ಚಿತ್ರ ಗೆಲ್ಲುತ್ತೆ ಎಂಬ ವಿಶ್ವಾಸ ಬಂತು. ಇದೊಂದು
ಸಂದೇಶವುಳ್ಳ ಚಿತ್ರ ಅಂದರು ಗುರು ಜಗ್ಗೇಶ್‌. ವಿಜಯ್‌ ರಾಘವೇಂದ್ರ ಅವರಿಗಿಲ್ಲಿ ಮರೆಯದ ಅನುಭವ ಆಗಿದೆಯಂತೆ. ಒಳ್ಳೆಯ ತಂತ್ರಜ್ಞರು ಇಲ್ಲಿ ಕೆಲಸ ಮಾಡಿದ್ದಾರೆ.

Advertisement

ಶಿವಣ್ಣನ ಜತೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಇದು ವಾಸ್ತವತೆಗೆ ಹತ್ತಿರ ಎನಿಸುವ ಸಿನಿಮಾ ಅಂದರು ವಿಜಯ್‌ ರಾಘವೇಂದ್ರ. ನೃತ್ಯ ನಿರ್ದೇಶಕ ಹರ್ಷ, “ಶಿವಣ್ಣ ಅವರಿಗೆ ಇಲ್ಲಿ ಸ್ಟೆಪ್‌ ಇಲ್ಲದೆಯೇ ಸಾಂಗ್‌ ವೊಂದನ್ನು ಚಿತ್ರೀಕರಿಸಿದ್ದೇನೆ. ಇಲ್ಲಿ ಬಿಲ್ಡಪ್ಸ್‌ ಬಿಟ್ಟು ಬೇರೇನೂ ಇಲ್ಲ. ಶಿವಣ್ಣ ಅದ್ಭುತ ಡ್ಯಾನ್ಸರ್‌. ಆದರೆ, ಸ್ವಲ್ಪ ಚೇಂಜ್‌ ಇರಲಿ ಎಂಬ ಕಾರಣಕ್ಕೆ, ಇಲ್ಲಿ ಲುಕ್ಸ್‌ನಲ್ಲೇ ಹಾಡು ಮಾಡಿದ್ದಾಗಿ ಹೇಳಿಕೊಂಡರು ಅವರು. ನಿರ್ಮಾಪಕ ತರುಣ್‌, ಸಿನಿಮಾ ಯಶಸ್ವಿಯಾಗಿ ಮುಗಿದಿದ್ದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಆಶಿಕಾ ಕೂಡ ಈ ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಬಿಚ್ಚಿಟ್ಟರು. ಕ್ಯಾಮೆರಾಮೆನ್‌ ಗುರುಪ್ರಶಾಂತ್‌ ರೈ ನಗುವ ಮೂಲಕ ಮಾತುಕತೆಗೂ ಬ್ರೇಕ್‌ ಬಿತ್ತು. 

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next