“ಕನ್ನಡ ಅಭಿಮಾನಿಗಳಿಗೆ ನಮಸ್ಕಾರ, ಡಾ.ರಾಜಕುಮಾರ್ ಅಭಿಮಾನಿಗಳಿಗೂ ನಮಸ್ಕಾರ…’ -ಹೀಗೆ ಹೇಳುತ್ತಿದ್ದಂತೆಯೇ ಅಂಬೇಡ್ಕರ್ ಭವನದೊಳಗೆ ಶಿಳ್ಳೆ, ಚಪ್ಪಾಳೆಗಳ ಸದ್ದು ಜೋರಾಗಿ ಕೇಳಿಬಂತು. ಅಷ್ಟಕ್ಕೂ ಚಪ್ಪಾಳೆಗಳ ಸುರಿಮಳೆಗೈದದ್ದು ತೆಲುಗಿನ ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಮಾತುಗಳಿಂದ.
ಹೌದು, ಬಾಲಕೃಷ್ಣ ಅವರು ಕನ್ನಡದಲ್ಲೇ ಅಭಿಮಾನಿಗಳಿಗೆ ನಮಸ್ಕಾರ ಎನ್ನುವ ಮೂಲಕ ಕನ್ನಡಾಭಿಮಾನ ಮೆರೆದರು. ಅವರು ಹೀಗೆ ಹೇಳ್ಳೋಕೆ ಕಾರಣವಾಗಿದ್ದು “ಮಾಸ್ ಲೀಡರ್’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ. ಬಾಲಕೃಷ್ಣ ಅವರು ಆಡಿಯೋ ಸಿಡಿ ಬಿಡುಗಡೆ ಮಾಡಿದ ಬಳಿಕ ಮಾತಿಗೆ ನಿಂತರು.
“ಡಾ. ರಾಜಕುಮಾರ್ ಅವರ ಮಕ್ಕಳು ನನಗೆ ಸಹೋದರರಂತೆ. ಕನ್ನಡ ಅಂದರೆ, ರಾಜ್‌ಕುಮಾರ್. ರಾಜಕುಮಾರ್ ಅಂದರೆ ಕನ್ನಡ ಎನ್ನುವ ಮೂಲಕ ಮತ್ತೆ ಜೋರಾದ ಚಪ್ಪಾಳೆಗಳಿಗೆ ಕಾರಣವಾದ ಅವರು ಚಿತ್ರದ ಹಾಡುಗಳು, ಟ್ರೇಲರ್ ತುಂಬಾ ಚೆನ್ನಾಗಿದೆ ಚಿತ್ರ ಕೂಡ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ.
ಚಿತ್ರ ಗೆಲ್ಲಲಿ ಎಂದು ಶುಭಹಾರೈಸಿದರಲ್ಲದೆ, ಇದೇ ವೇಳೆ ರಾಜಕುಮಾರ್ ಹಾಗೂ ಎನ್‌ಟಿಆರ್ ಸಂಬಂಧವನ್ನು ಮೆಲುಕು ಹಾಕಿ, ಅವರಿಬ್ಬರು ಚಿತ್ರರಂಗದ ಎರಡು ಮುತ್ತುಗಳು ಎನ್ನುತ್ತಿದ್ದಂತೆ ಮತ್ತೆ ಅದೇ ಜೋರಾದ ಚಪ್ಪಾಳೆ, ಶಿಳ್ಳೆಗಳ ಸದ್ದು ಮುಗಿಲು ಮುಟ್ಟಿತ್ತು.
ಪುನೀತ್‌ರಾಜಕುಮಾರ್ ಅವರಿಗೆ “ಮಾಸ್ ಲೀಡರ್’ ಟೀಸರ್ ನೋಡಿ ಖುಷಿಯಾಗಿದೆಯಂತೆ. ಶಿವಣ್ಣ, ಜಗ್ಗಣ್ಣ ಹಾಗೂ ಬಾಲಣ್ಣ ಅವರ ಮಾತು ಕೇಳ್ಳೋಕೆ ನಾನು ಉತ್ಸುಕನಾಗಿದ್ದೇನೆ. ಬಾಲಣ್ಣನಿಗೆ ನಮ್ಮ ಇಡೀ ಕುಟುಂಬದ ಪರಿಚಯವಿದೆ. ಶಿವಣ್ಣ ಅಭಿಮಾನಿಗಳಿಗೆ “ಮಾಸ್ ಲೀಡರ್’. ಆದರೆ, ಮನೆಯಲ್ಲಿ ನಮಗೆಲ್ಲರಿಗೂ ಸಿಂಪಲ್ ಲೀಡರ್ ಅಂದರು ಪುನೀತ್.
“ಚಿತ್ರೀಕರಣ ವೇಳೆ ನಿರ್ಮಾಪಕ, ನಿರ್ದೇಶಕರಿಗೆ ಬೈದಿದ್ದೇನೆ. ಆದರೆ, ಅದೆಲ್ಲವೂ ಪ್ರೀತಿಯಿಂದ ಅಷ್ಟೇ. ಸಿನಿಮಾದಲ್ಲಿ ಭಾವನೆಗಳನ್ನು ಚೆನ್ನಾಗಿ ಕಟ್ಟಿಕೊಡಲಾಗಿದೆ. ಇಲ್ಲಿ ಎಲ್ಲರ ಪಾತ್ರಗಳೂ ಅದ್ಭುತವಾಗಿವೆ. ಒಳ್ಳೆಯ ತಂಡದಿಂದ ಒಳ್ಳೆಯ ಸಿನಿಮಾ ಹೊರಬರುತ್ತಿದೆ’ ಎಂಬುದು ಶಿವರಾಜಕುಮಾರ್ ಮಾತು.
“ಒಳ್ಳೆಯ ಕುಟುಂಬದಿಂದ ಬಂದಿರುವ ಶಿವಣ್ಣ ರೀಲ್‌ನಲ್ಲಿ ಮಾತ್ರ ಲೀಡರ್ ಅಲ್ಲ, ರಿಯಲ್‌ನಲ್ಲೂ ಅವರು ಲೀಡರ್’ ಅಂದರು ಜಗ್ಗೇಶ್. ಇದಕ್ಕೂ ಮುನ್ನ ಯೋಗಿ, ಗುರುಜಗ್ಗೇಶ್, ನಾಯಕಿ ಪ್ರಣೀತಾ, ನಿರ್ದೇಶಕ ನರಸಿಂಹ, ನಿರ್ಮಾಪಕ ತರುಣ್ ಶಿವಪ್ಪ, ಸಹ ನಿರ್ಮಾಪಕ ಹಾರ್ಧಿಕ್ ಗೌಡ, ಶರ್ಮಿಳಾಮಾಂಡ್ರೆ, ಗೀತರಚನೆಕಾರರಾದ ಚೇತನ್‌ಕುಮಾರ್, ನಾಗೇಂದ್ರಪ್ರಸಾದ್, ಚಿತ್ರದ ಕವಿರಾಜ್, ಮೇಘನಾಗಾಂವ್ಕರ್ ಮತ್ತು ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅನುಭವ ಹಂಚಿಕೊಂಡರು.
ಇವರೆಲ್ಲರ ಮಾತುಗಳ ನಡುವೆ ಆಶಿಕಾ, ಶರ್ಮಿಳಾಮಾಂಡ್ರೆ ಹಾಗೂ ಪ್ರಣೀತಾ ಚಿತ್ರದ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ರಂಚಿಸಿದರು. ಈ ಕಾರ್ಯಕ್ರಮದಲ್ಲಿ ಗೀತಾ ಶಿವರಾಜಕುಮಾರ್, ರಾಗಿಣಿ, ಗಿರಿಜಾ ಲೋಕೇಶ್, ಗುರುನಂದನ್, ಪ್ರಕಾಶ್ ಬೆಳವಾಡಿ, ಲಹರಿವೇಲು, ಬೇಬಿ ಪರಿಣಿತ ಸೇರಿದಂತೆ ಹಲವರು ಇದ್ದರು.