ಶಿರಸಿ: ಮಾನವ ಹಾಗೂ ವನ್ಯಜೀವಿ ಸಂಘರ್ಷ ಇಂದು ನಿನ್ನೆಯದಲ್ಲ. ಕಾಡು ಪ್ರಾಣಿಗಳ ಹಾವಳಿಗೆ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ನಿರ್ದಿಷ್ಟ ಆರ್ಥಿಕ ನೆರವು ನೀಡುವ ಜೊತೆಗೆ ಮಾಸಾಶನ ನೀಡಲು ಸರ್ಕಾರ ಆದೇಶಿಸಿದೆ.
ಈವರೆಗೆ ಇದ್ದ ಶಾಶ್ವತ ಅಂಗವೈಕಲ್ಯ ಹಾಗೂ ಮೃತಪಟ್ಟ ಕುಟುಂಬಕ್ಕೆ ನೀಡಲಾಗುವ ಮೊತ್ತದ ಜೊತೆಗೆ ಮಾಸಿಕ 2 ಸಾವಿರ ರೂ.ಗಳನ್ನು ಫಲಾನುಭವಿ ಖಾತೆಗೆ ನೇರ ವರ್ಗಾವಣೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಇದರಿಂದ ಕಾಡು ಮೃಗಗಳಿಗೆ ಬಲಿಯಾದ ಕುಟುಂಬ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.
ಕಳೆದ ಆಯವ್ಯಯ ಭಾಷಣದಲ್ಲಿ ಸಿಎಂ ಕುಮಾರಸ್ವಾಮಿ, ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರಸ್ತುತ ನೀಡುವ 5 ಲಕ್ಷ ರೂ. ಪರಿಹಾರದ ಜೊತೆಗೆ ಮಾಸಿಕ 2 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದರು. ಅ.16ಕ್ಕೆ ಸರ್ಕಾರದ ಉಪ ಕಾರ್ಯದರ್ಶಿ ಎಚ್.ಎಸ್. ಭಾಗ್ಯಲಕ್ಷಿ¾àಯವರು ರಾಜ್ಯಪಾಲರ ನಿರ್ದೇಶಾನುಸಾರ ಆದೇಶ ಮಾಡಿದ್ದಾರೆ. ಹೀಗಾಗಿ ಶಾಶ್ವತ ಅಂಗವೈಕಲ್ಯತೆ ಉಂಟಾದವರಿಗೆ ಹಾಗೂ ಪ್ರಾಣ ಹಾನಿಯಾದ ಕುಟುಂಬಕ್ಕೆ 5 ವರ್ಷ ನಿರಂತರವಾಗಿ ಮಾಸಿಕ ಪರಿಹಾರ ಸಿಗಲಿದೆ.
ಎಷ್ಟಿದೆ ಪ್ರಕರಣ?: ರಾಜ್ಯದಲ್ಲಿ ಹುಲಿ, ಆನೆ ದಾಳಿಗೆ ಬಲಿಯಾದ ವ್ಯಕ್ತಿಗಳೇ ಅಧಿ ಕ. 2015-16ರಲ್ಲಿ ಮೂವರು ಶಾಶ್ವತ ಅಂಗವೈಕಲ್ಯರಾಗಿದ್ದರೆ, 47 ಜನ ಮೃತಪಟ್ಟಿದ್ದರು. 2016-17 ರಲ್ಲಿ ಐವರು ಶಾಶ್ವತ ಅಂಗವಿಕಲರಾಗಿದ್ದರೆ, 49 ಜನರು ಮೃತಪಟ್ಟಿದ್ದರು. 2017-18ರಲ್ಲಿ ಈವರೆಗೆ 6 ಮಂದಿ ಶಾಶ್ವತ ಅಂಗವಿಕಲರಾಗಿದ್ದರೆ, 36 ಜನ ಮೃತಪಟ್ಟಿದ್ದಾರೆ. ಕಳೆದ 3 ವರ್ಷದಲ್ಲಿ ಘಟಿಸಿದ ಪ್ರಕರಣ ಆಧರಿಸಿ ವರ್ಷಕ್ಕೆ ಗರಿಷ್ಠ 55 ಜನರ ಕುಟುಂಬಕ್ಕೆ ಮಾಸಿಕ 2 ಸಾವಿರ ರೂ.ನಂತೆ ಆಯಾ ಆರ್ಥಿಕ ವರ್ಷದಲ್ಲಿ 13 ಲಕ್ಷ ರೂ. ಅನುದಾನ ಅಗತ್ಯವಿರುತ್ತದೆ ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಅಂದಾಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದಕ್ಕೀಗ ಆರ್ಥಿಕ ಇಲಾಖೆಯ ಹಸಿರು ನಿಶಾನೆ ಸಿಕ್ಕಿದೆ.
ಮೊದಲು ಏನಿತ್ತು?: ಈಗಿರುವ ಬೆಳೆ ಹಾನಿ, ಪ್ರಾಣ ಹಾನಿ, ಅಂಗವೈಕಲ್ಯ ಪ್ರಕರಣಗಳಿಗೆ ಸೆ.19, 2016ರ ಸಭೆಯ ಮಾನದಂಡದಲ್ಲಿ ಪರಿಹಾರದ ಅನುಮತಿ ನೀಡಲಾಗುತ್ತದೆ. 2009ರಿಂದ 57 ಬೆಳೆಗಳಿಗೆ ಇದ್ದ ಪರಿಹಾರದ ಮೊತ್ತವನ್ನು 7 ವರ್ಷಗಳ ಬಳಿಕ ದ್ವಿಗುಣಗೊಳಿಸಲಾಗಿತ್ತು. ಆಕಳು ಸತ್ತರೆ 10, ಕುರಿ, ಆಡಿಗೆ ತಲಾ 5 ಸಾವಿರ ರೂ.ಪರಿಹಾರ ನೀಡಲು ಅನುಮತಿ ಸಿಕ್ಕಿತ್ತು. ಶಾಶ್ವತ ಅಂಗವೈಕಲ್ಯಕ್ಕೆ 50 ಸಾವಿರದಿಂದ 5 ಲಕ್ಷ, ಭಾಗಶ: ಶಾಶ್ವತ ಅಂಗವೈಕಲ್ಯಕ್ಕೆ 20 ಸಾವಿರದಿಂದ 2.50 ಲಕ್ಷ, ಗಾಯಾಳುವಿಗೆ 20ರಿಂದ 30 ಸಾವಿರಕ್ಕೆ, ಹಾನಿಯಿಂದ ಮೃತಪಟ್ಟರೆ 5 ಲಕ್ಷಕ್ಕೆ ಏರಿಸಿ ಪರಿಹಾರ ನೀಡಲು ಸೂಚಿಸಲಾಗಿತ್ತು.
ಕಾಡು ಪ್ರಾಣಿಯಿಂದ ಬಲಿಯಾದವರ ಕುಟುಂಬಕ್ಕೆ ಹೆಚ್ಚುವರಿಯಾಗಿ ಮಾಸಿಕ 2 ಸಾವಿರ ರೂ.ಪರಿಹಾರಕ್ಕೆ ಸರ್ಕಾರ ಅನುಮತಿ ನೀಡಿದೆ.
– ಜಯರಾಂ, ಪಿಸಿಸಿಎಫ್ ವನ್ಯಜೀವಿ ವಿಭಾಗ.
ವೈದ್ಯರು ನೀಡುವ ಶಿಫಾರಸಿನಂತೆ ಪರಿಹಾರ ಕೊಡಬೇಕು. ರೈತರಿಗೆ ಇನ್ನಷ್ಟು ಬೆಳೆ, ಪ್ರಾಣ ರಕ್ಷಣೆಗೂ ನೆರವಾಗಬೇಕು.
– ನಾರಾಯಣ ಹೆಗಡೆ, ಮತ್ತಿಘಟ್ಟ ರೈತ.
– ರಾಘವೇಂದ್ರ ಬೆಟ್ಟಕೊಪ್ಪ