Advertisement

ಪುಲ್ವಾಮಾ ದಾಳಿ ರೂವಾರಿ ಹತ್ಯೆ

01:25 AM Jun 04, 2020 | Sriram |

ಶ್ರೀನಗರ: ದೇಶವನ್ನೇ ಬೆಚ್ಚಿಬೀಳಿಸಿದ್ದ 2019ರ ಪುಲ್ವಾಮಾ ದಾಳಿಗೆ ಕೊನೆಗೂ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ದುರಂತ ಹಿಂದಿನ “ಮಾಸ್ಟರ್‌ ಮೈಂಡ್‌’ ಜೈಶ್‌ ಉಗ್ರ ಫೌಜಿ ಭಾಯ್‌ನನ್ನು ಭದ್ರತಾ ಪಡೆಗಳು ಬುಧವಾರ ಹೊಡೆದುರುಳಿಸಿವೆ.

Advertisement

ಪುಲ್ವಾಮಾ ಜಿಲ್ಲೆಯ ಕಂಗಾನ್‌ ಹಳ್ಳಿಯ ಸಮೀಪ ನಡೆದ ಗುಂಡಿನ ಚಕಮಕಿಯಲ್ಲಿ ಫೌಜಿ ಭಾಯ್‌ ಜತೆಗೆ ಆತನ ಇಬ್ಬರು ಅಂಗರಕ್ಷಕರೂ ಹತರಾಗಿದ್ದಾರೆ. ಮಿಕ್ಕ ಇಬ್ಬರು ಉಗ್ರರನ್ನು ಕಾಶ್ಮೀರದ ಜಹೀದ್‌ ಮಂಜೂರ್‌ವಾನಿ ಮತ್ತು ಮಂಜೂದ್‌ ಅಹ್ಮದ್‌ಕರ್‌ ಎಂದು ಗುರುತಿಸಲಾಗಿದೆ.

ಮಹಾನ್‌ ಪಾತಕಿ
ಕಣಿವೆಯಲ್ಲಿನ ಪ್ರಮುಖ ದಾಳಿಗಳ ಹಿಂದೆ ಫೌಜಿ ಭಾಯ್‌ ಕೈವಾಡವಿತ್ತು. ಆತ ಮೊಬೈಲ್‌, ಇಂಟರ್ನೆಟ್‌ ಬಳಸುತ್ತಿರಲಿಲ್ಲ. ನಂಬಿಕಸ್ಥ ಕೊರಿಯರ್‌ ಜಾಲದ ಮೂಲಕ ಇತರೆಡೆ ಇದ್ದ ಉಗ್ರರ ಜತೆ ವ್ಯವಹರಿಸುತ್ತಿದ್ದ. ಜೈಶ್‌ ಸಂಘಟನೆಯ ಮುಖ್ಯ ಕಚೇರಿ ಸಂಪರ್ಕಿಸಲು ಗೂಢ ಲಿಪಿಕರಣದ ಸ್ಯಾಟಲೈಟ್‌ ಫೋನ್‌ಗಳನ್ನು ಮಾತ್ರವೇ ಬಳಸುತ್ತಿದ್ದ ಎಂದು ಉನ್ನತ ಮೂಲಗಳು ತಿಳಿಸಿವೆ.

ಐಇಡಿ ಸ್ಫೋಟಕ ತಯಾರಿಯಲ್ಲಿ ಈತ ನಿಸ್ಸೀಮ. ಅಸ್ತಾನ್‌ ಮೊಹಲ್ಲಾದ ಸುರಕ್ಷಿತ ಮನೆಯಲ್ಲಿ ಕುಳಿತು ಅಮೋನಿಯಂ ನೈಟ್ರೇಟ್‌ ಸಂಗ್ರಹಿಸಿದ್ದ. ಭಾರತದ ವಿರುದ್ಧ ಮುನಿಸಿಕೊಂಡ ಯುವಕರನ್ನು ಬೇಗನೆ ಜೆಹಾದಿ ಜಾಲ ದೊಳಗೆ ಬೀಳಿಸಿ, ಆತ್ಮಹತ್ಯಾ ದಾಳಿ ಕೋರರನ್ನಾಗಿ ಪರಿವರ್ತಿಸುತ್ತಿದ್ದ. 2019ರಲ್ಲಿ ಪುಲ್ವಾಮಾ ಸೇನಾ ವಾಹನದ ಮೇಲೆ ದಾಳಿಗೈದ ಅದಿಲ್‌ ಅಹ್ಮದ್‌ ದಾರ್‌ ನನ್ನು ಆತ ಹೀಗೆಯೇ ಛೂ ಬಿಟ್ಟಿದ್ದ.

ಕಾರ್‌ಬಾಂಬ್‌ ಸ್ಫೋಟ ರೂವಾರಿ
ಪುಲ್ವಾಮಾ ಕುಕೃತ್ಯದ ಯಶಸ್ಸಿನ ಬಳಿಕ ಫೌಜಿ ಕಾರ್‌ಬಾಂಬ್‌ ಸ್ಫೋಟಗಳಿಗೆ ಹೆಚ್ಚು ಆದ್ಯತೆ ನೀಡಿದ್ದ ಎನ್ನಲಾಗಿದೆ. ಕಳೆದ ವಾರವಷ್ಟೇ ಪುಲ್ವಾಮಾದಲ್ಲಿ ಸ್ಫೋಟಕ ತುಂಬಿಕೊಂಡ ಕಾರನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದವು. ಅನಂತರ ನಿರ್ಜನ ಪ್ರದೇಶದಲ್ಲಿ ಕಾರ್‌ ಸ್ಫೋಟಿಸಿ ಫೌಜಿಯ ಈ ಸಂಚನ್ನು ವಿಫ‌ಲಗೊಳಿಸಲಾಗಿತ್ತು. ಪುಲ್ವಾಮಾದಲ್ಲಿ ಸ್ಫೋಟಕ ತುಂಬಿಕೊಂಡ ಕಾರು ನಿಲ್ಲಿಸಿ ಪರಾರಿ ಆಗಿದ್ದ ಚಾಲಕ, ಫೌಜಿಯ ಆಪ್ತನೂ ಆಗಿರುವ ಆದಿಲ್‌ ಅಹ್ಮದ್‌ ಹಫೀಜ್‌ಗೆ ತೀವ್ರ ಶೋಧ ನಡೆದಿದೆ.

Advertisement

ಜಂಟಿ ಯಶಸ್ಸು
ಜಮ್ಮು ಮತ್ತು ಕಾಶ್ಮೀರ ಪೊಲೀಸ್‌, 53 ರಾಷ್ಟ್ರೀಯ ರೈಫ‌ಲ್ಸ್‌ ಪಡೆ, ಸಿಆರ್‌ಪಿಎಫ್ 183ನೇ ಬೆಟಾಲಿಯನ್‌ ಯೋಧರ ಜಂಟಿ ಕಾರ್ಯಾಚರಣೆ ಇದಾಗಿದೆ.

ಯಾರು ಫೌಜಿ ಭಾಯ್‌?
ಫೌಜಿಯು ಜೈಶ್‌-ಎ-ಮೊಹಮ್ಮದ್‌ (ಜೆಇಎಂ) ರೂವಾರಿ ಮಸೂದ್‌ ಅಜರ್‌ನ ನಿಕಟ ಸಂಬಂಧಿ ಎಂದು ಕಾಶ್ಮೀರ ಐಜಿಪಿ ವಿಜಯ ಕುಮಾರ್‌ ಖಚಿತ ಪಡಿಸಿದ್ದಾರೆ. ಇದ್ರಿಸ್‌, ಹೈದರ್‌, ಲಂಬು ಎಂಬೆಲ್ಲ ಹೆಸರುಗಳಿಂದ ಕಣಿವೆ ಯಲ್ಲಿ ಅಟ್ಟಹಾಸ ಮೆರೆಯು  ತ್ತಿದ್ದ ಫೌಜಿ ಅಸಲಿಗೆ ಕಾಶ್ಮೀರ ದವನೇ ಅಲ್ಲ. ಪಾಕಿ ಸ್ಥಾನದ ಮುಲ್ತಾನ್‌ ನಿಂದ ಬಂದಿದ್ದ ಈತ 2017ರಿಂದ ಕಾಶ್ಮೀರದ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿ ವಿಷಬೀಜ ಬಿತ್ತುತ್ತಿದ್ದ.

Advertisement

Udayavani is now on Telegram. Click here to join our channel and stay updated with the latest news.

Next