Advertisement

ದೊಡ್ಡಣ್ಣ ಟ್ರಂಪ್‌ ಕಾರ್ಡ್‌: ಭಾರತದೊಂದಿಗಿನ ಸಹಕಾರಕ್ಕೆ ಅಸ್ತು

04:00 AM Jul 16, 2017 | Team Udayavani |

ವಾಷಿಂಗ್ಟನ್‌: ಈವರೆಗೆ ಪಾಕಿಸ್ತಾನಕ್ಕೆ ಭರ್ಜರಿ ಹಣಕಾಸು ನೆರವು ನೀಡುತ್ತಾ ಬಂದಿದ್ದ ಅಮೆರಿಕ, ಇದೀಗ ಆ ದೇಶಕ್ಕೆ ನೀಡಲಾಗುವ ನಿಧಿಗೆ ಖಡಕ್‌ ಷರತ್ತುಗಳನ್ನು ವಿಧಿಸಿದೆ. ಅತ್ತ ಪಾಕಿಸ್ತಾನಕ್ಕೆ ಷರತ್ತುಗಳ ಮೂಲಕ ಎಚ್ಚರಿಕೆ ನೀಡಿದ್ದರೆ, ಇತ್ತ ಭಾರತದೊಂದಿಗೆ ಬೇಷರತ್‌ ಸ್ನೇಹ ಹಸ್ತ ಚಾಚಿದೆ. ಈ ಬೆಳವಣಿಗೆಯು ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತಂದಿದೆ.

Advertisement

ಭಯೋತ್ಪಾದನೆ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿಕೊಂಡು ಬಂದಿರುವ ಪಾಕಿಸ್ತಾನಕ್ಕೆ ರಕ್ಷಣಾ ನಿಧಿ ಪೂರೈಕೆ ಇನ್ನು ಮುಂದೆ ಕಠಿಣ ಎನ್ನುವ ಸಂದೇಶವನ್ನು ಶನಿವಾರ ಅಮೆರಿಕ ರವಾನಿಸಿದೆ. ಭಯೋತ್ಪಾದಕರ ವಿರುದ್ಧ ಕೈಗೊಳ್ಳುತ್ತಿರುವ ಕ್ರಮ ತೃಪ್ತಿದಾಯಕವಾಗಿದ್ದರೆ ಮಾತ್ರವೇ ಹಣಕಾಸು ನೆರವು ನೀಡುತ್ತೇವೆ. ಇಲ್ಲದಿದ್ದರೆ ಎಲ್ಲವೂ ಬಂದ್‌ ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಸಿದೆ.

651 ಶತಕೋಟಿ ಡಾಲರ್‌ ಬಜೆಟ್‌:
ಅಮೆರಿಕ ಸಂಸತ್‌ ಸದಸ್ಯರು (ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌) ಶನಿವಾರ ಮಹತ್ವದ 3 ತಿದ್ದುಪಡಿ ವಿಧೇಯಕಗಳನ್ನು ಅಂಗೀಕರಿಸಿದ್ದಾರೆ. ಭಾರತದೊಂದಿಗಿನ ರಕ್ಷಣಾ ಸಹಕಾರ ವೃದ್ಧಿ ಸೇರಿ, ಇನ್ನುಳಿದ ಉದ್ದೇಶಗಳನ್ನೊಳಗೊಂಡ ಬರೋಬ್ಬರಿ 651 ಬಿಲಿಯನ್‌ ಡಾಲರ್‌ (ಅಂದಾಜು 41,84,500 ಕೋಟಿ) ಮೊತ್ತದ ಬಜೆಟ್‌ ಮಂಡಿಸುವುದರ ಜತೆಗೆ, ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯಿದೆ (ಎನ್‌ಡಿಎಎ)ಯನ್ನೂ ಅಂಗೀಕರಿಸಲಾಗಿದೆ. ಇಷ್ಟು ದಿನ ಪಾಕಿಸ್ತಾನದ ಜತೆಗಿನ ರಕ್ಷಣಾ ಸಹಕಾರ ಮುಂದುವರಿಸಿಕೊಂಡು ಬಂದಿದ್ದ ಅಮೆರಿಕ, ಇದೀಗ ಒಂದಿಷ್ಟು ಷರತ್ತುಗಳನ್ನು ವಿಧಿಸಿದೆ. ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಯಾವುದೇ ಕಾರಣಕ್ಕೂ ರಕ್ಷಣಾ ನಿಧಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಉಲ್ಲೇಖೀಸಲಾಗಿದ್ದು, ಈ ಬಗ್ಗೆ ದಾಖಲೆ ಸಹಿತ ವರದಿ ಅಪೇಕ್ಷಿಸಿದೆ.

ಮೂರು ವಿಧೇಯಕಗಳ ಪೈಕಿ ಎರಡನ್ನು ಕಾಂಗ್ರೆಸ್‌ ಸದಸ್ಯರುಗಳಾದ ದನಾ ರೊಹ್ರಬಾಚರ್‌ ಹಾಗೂ ಟೆಡ್‌ ಪೊಯೆ ಮಂಡಿಸಿದ್ದರು. ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯ ಹಾಗೂ ಉಗ್ರ ನಿಗ್ರಹ ಉಪಘಟಕದ ಚೇರ¾ನ್‌ ಟೆಡ್‌ ಪೊಯೆ, “”ಅಮೆರಿಕದೊಂದಿಗಿನ ದ್ವಿಪಕ್ಷೀಯ ಮಾತುಕತೆಗೆ ಸಂಬಂಧಿಸಿ ಪಾಕಿಸ್ತಾನ ಈಗ ಮತ್ತೂಮ್ಮೆ ಪ್ರಮಾಣಿಕರಿಸಬೇಕಿದೆ. ಈ ನಿಟ್ಟಿನಲ್ಲಿ ಅಮೆರಿಕ ಮಹತ್ವದ ಹಜ್ಜೆ ಇಟ್ಟಿದೆ” ಎಂದಿದ್ದಾರೆ.

ಅಮೆರಿಕದಿಂದ ಹೆಚ್ಚಾಕಡಿಮೆ 2500 ಕೋಟಿ ರೂ.ಗಳಷ್ಟು ರಕ್ಷಣಾ ನಿಧಿ ಪಡೆದುಕೊಳ್ಳುವ ಪಾಕಿಸ್ತಾನಕ್ಕೆ ಈ ನಿಧಿ ಇನ್ನು ಗಗನಕುಸುಮ ಆಗಲಿದೆ. ಪ್ರಸಕ್ತ ಸಾಲಿನ ರಕ್ಷಣಾ ನಿಧಿಯನ್ನು ಪಾಕ್‌ ಅಕ್ಟೋಬರ್‌ 1ರಿಂದ -2018, ಡಿಸೆಂಬರ್‌ 31ರ ಅವಧಿಯಲ್ಲಿ ಪಡೆದುಕೊಳ್ಳಬೇಕಿದ್ದು, ಇದಕ್ಕೆ ಸಾಕಷ್ಟು ಷರತ್ತು ವಿಧಿಸಿರುವುದು ಪಾಕ್‌ಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಭಾರತದೊಂದಿಗೆ ರಕ್ಷಣಾ ಸಹಕಾರಕ್ಕೆ ಒಪ್ಪಿಗೆ
ಇದೇ ವೇಳೆ, ಭಾರತದೊಂದಿಗಿನ ರಕ್ಷಣಾ ಸಹಕಾರ ವೃದ್ಧಿ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ಭಾರತ-ಅಮೆರಿಕನ್‌ ಕಾಂಗ್ರೆಸ್‌ ಸದಸ್ಯ ಆಮಿ ಬೇರಾ ಅವರು ಎನ್‌ಡಿಎಎ-2018 ತಿದ್ದುಪಡಿ ಮಸೂದೆ ಮಂಡಿಸಿದ್ದು, ಧ್ವನಿ ಮತ ಮುಖೇನ ವಿಧೇಯಕವನ್ನು ಅಂಗೀಕರಿಸಲಾಗಿದೆ. ಮುಂಬರುವ ದಿನಗಳಲ್ಲಿ ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಹಕಾರ ಇನ್ನಷ್ಟು ಭದ್ರಗೊಳ್ಳುವುದರ ಜೊತೆಗೆ ಉಭಯ ದೇಶಗಳು ಸಹಕಾರ ಹಾಗೂ ರಕ್ಷಣಾ ತಂತ್ರಜ್ಞಾನ ವಿನಿಮಯ ನಿರೀಕ್ಷಿಸಬಹುದಾಗಿದೆ. ಅಂಗೀಕಾರಗೊಂಡು 180 ದಿನಗಳ ಅವಧಿಯಲ್ಲಿ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಹಾಗೂ ಪ್ರಾಂತ್ಯ ಕಾರ್ಯದರ್ಶಿಗಳು ಮುಂದುವರಿಯಲಿರುವ ಅಮರಿಕ ಮತ್ತು ಭಾರತ ನಡುವಿನ ರಕ್ಷಣಾ ಸಹಕಾರಗಳ ತಂತ್ರಗಳನ್ನು ಅಭಿವೃದ್ಧಿಪಡಿಸಲಿದ್ದಾರೆ. ಇದೀಗ ಅಂಗೀಕಾರಗೊಂಡಿರುವ ತಿದ್ದುಪಡಿ ವಿಧೇಯಕಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಹಿ ಮಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ವೈಟ್‌ ಹೌಸ್‌ಗೆ ಕಳುಹಿಸಲಾಗಿದೆ.

ಉಭಯ ದೇಶಗಳಿಗೂ ಮಹತ್ವದ್ದು: ಬೇರಾ
ವಿಧೇಯಕ ಅಂಗೀಕಾರಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆಮಿ ಬೇರಾ, “”ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅಮೆರಿಕ ವಿಶ್ವದಲ್ಲಿಯೇ ಹಳೆಯದಾಗಿದ್ದರೆ, ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರ ಒಪ್ಪಂದ ಬಹಳ ಮಹತ್ವ ಪಡೆದುಕೊಳ್ಳಲಿದೆ” ಎಂದಿದ್ದಾರೆ.

“”ವಿಧೇಯಕ ಅಂಗೀಕಾರಗೊಂಡಿರುವುದು ಹೆಮ್ಮೆಯ ಸಂಗತಿ. ಇನ್ನೂ ಉತ್ತಮ ಮಟ್ಟದಲ್ಲಿ ರಕ್ಷಣಾ ಸಹಕಾರ ನಿರೀಕ್ಷಿಸಬಹುದಾಗಿದೆ. ಯಾವುದೇ ಕ್ಲಿಷ್ಟ ಸವಾಲುಗಳನ್ನು ಎದುರಿಸುವಲ್ಲಿ ನೆರವಾಗಲಿದೆ. ಅಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಹಕಾರಕ್ಕೂ ಅನುಕೂಲ ಆಗಲಿದೆ. 21ನೇ ಶತಮಾನದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ರಕ್ಷಣಾ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ಮಹತ್ವದ್ದಾಗಿದೆ” ಎಂದಿದ್ದಾರೆ.

ಶುಕ್ರವಾರವಷ್ಟೇ ಭಾರತೀಯ ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, “ಭಾರತ ಹಾಗೂ ಅಮೆರಿಕ ನಡುವಿನ ರಕ್ಷಣಾ ಸಂಬಂಧ ಸಕಾರಾತ್ಮಕವಾಗಿದೆ’ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next