ನವದೆಹಲಿ:ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಧರಿಸುವ ಮಾಸ್ಕ್ (ಮುಖಗವಸು) ಅನ್ನು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಧರಿಸುವಂತೆ ಶಿಫಾರಸು ಮಾಡುವುದಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ(ಡಿಜಿಎಚ್ ಎಸ್) ಗುರುವಾರ(ಜೂನ್ 10) ತಿಳಿಸಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಇನ್ನೊಂದು ವಾರ ಲಾಕ್ ಡೌನ್ ವಿಸ್ತರಿಸುವುದು ಸೂಕ್ತ: ಕಾರಜೋಳ
6ರಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬಹುದು, ಆದರೆ ಇದನ್ನು ಪೋಷಕರ ಮೇಲ್ವಿಚಾರಣೆ ಮತ್ತು ವೈದ್ಯರ ಸಲಹೆಯ ನಂತರ ಮಾತ್ರ ಎಂದು ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೋವಿಡ್ 19 ಸೋಂಕು ತಗುಲಿದೆ ಎಂಬ ಹಿನ್ನೆಲೆಯಲ್ಲಿ ಇತ್ತೀಚೆಗೆ ಡಿಜಿಎಚ್ ಎಸ್ ಈ ಶಿಫಾರಸನ್ನು ಮಾಡಿದೆ ಎಂದು ವರದಿ ವಿವರಿಸಿದೆ.
ವರದಿಯ ಪ್ರಕಾರ, ಮಕ್ಕಳ ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಮಗ್ರ ಮಾರ್ಗಸೂಚಿಯನ್ನು ಹೊರತಂದಿದೆ. ಇದರಲ್ಲಿ ರೆಮ್ ಡೆಸಿವಿರ್ ಅನ್ನು ಶಿಫಾರಸು ಮಾಡಲಾಗಿಲ್ಲ ಮತ್ತು ಎಚ್ ಆರ್ ಸಿಟಿ ಇಮೇಜಿಂಗ್ ಅನ್ನು ತಾರ್ಕಿಕವಾಗಿ ಬಳಸುವಂತೆ ಸೂಚಿಸಿದೆ.
ಲಕ್ಷಣ ರಹಿತ ಸೋಂಕು ಮತ್ತು ಕಡಿಮೆ ಪ್ರಮಾಣದ ಸೋಂಕು ಪ್ರಕರಣಗಳಲ್ಲಿ ಸ್ಟಿರಾಯ್ಡ್ ಬಳಕೆ ಹಾನಿಕಾರಕ ಎಂದು ಡಿಜಿಎಚ್ ಎಸ್ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆಸ್ಪತ್ರೆಗೆ ದಾಖಲಾದ ಕೋವಿಡ್ 19 ಸೋಂಕಿತರು ತೀವ್ರವಾಗಿ ಹಾಗೂ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಲ್ಲಿ ಮಾತ್ರ ವೈದ್ಯರ ತೀವ್ರ ನಿಗಾದಲ್ಲಿ ಸ್ಟಿರಾಯ್ಡ್ ಬಳಕೆ ಮಾಡಬಹುದು ಎಂದು ಡಿಜಿಎಚ್ ಎಸ್ ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.