Advertisement

ಕಾಂಗ್ರೆಸ್‌ ಮುಳುಗುತ್ತಿರುವ ಹಡಗು

04:16 PM Aug 08, 2019 | Team Udayavani |

ಮಸ್ಕಿ: ಕಾಂಗ್ರೆಸ್‌ ಮುಳುಗುತ್ತಿರುವ ಹಡಗು, ಅದರಲ್ಲಿ ತಾವು ಮುಳುಗಲು ಸಿದ್ದರಿಲ್ಲ ಎಂದು ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

Advertisement

ಪಟ್ಟಣದ ಭ್ರಮರಾಂಬ ದೇವಸ್ಥಾನದ ಆವರಣದಲ್ಲಿ ಬುಧವಾರ ನಡೆದ ಅಭಿಮಾನಿ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್‌ ವಿಫಲವಾಯಿತು. ಹಿರಿಯ ಶಾಸಕರಾದ ಹಂಪನಗೌಡ ಬಾದರ್ಲಿ ಹಾಗೂ ಅಮರೇಗೌಡ ಬಯ್ನಾಪುರ ಅಂತಹವರ ಹಿರಿತನವೂ ಕೂಡ ಪರಿಗಣನೆಯಾಗಲಿಲ್ಲ. ನಮಗೆ ಸಿಗಬೇಕಾದ ಸ್ಥಾನಮಾನ ಕೂಡ ಸಿಗಲಿಲ್ಲ. ಈ ಎಲ್ಲ ಕಾರಣಗಳಿಗಾಗಿ ಅನಿವಾರ್ಯವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಯಿತು ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದುವರೆಗೆ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರನ್ನು ನೇಮಕ ಮಾಡಿಲ್ಲ. ದೇಶಾದ್ಯಂತ ಕಾಂಗ್ರೆಸ್‌ ಪಕ್ಷ ಹಿನ್ನಡೆ ಕಾಣುತ್ತಿದೆ. ರಾಜ್ಯ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ ಎಂದರು.

ಶಾಸಕ ಸ್ಥಾನಕ್ಕೆ ಅನರ್ಹಗೊಂಡಿದ್ದರೂ ಕೂಡ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡೆತಡೆಯಿಲ್ಲ. ಉಪ ಚುನಾವಣೆಯಲ್ಲಿ ನಾನೇ ಸ್ಪರ್ಧಿಸುವೆ. ಅಭಿಮಾನಿ, ಕಾರ್ಯಕರ್ತರು ಯಾವುದೇ ಉಹಾಪೋಹಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಿದರು.

ಕ್ಷೇತ್ರದ ಜನತೆ ಮೂರು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಆಶೀರ್ವದಿಸಿದ್ದಾರೆ. ಅವರ ಋಣವನ್ನು ಜೀವಿತದ ಕೊನೆವರೆಗೂ ಮರೆಯುವುದಿಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ಜನರ ಸೇವೆಯೇ ಮೊದಲ ಆದ್ಯತೆ ಎಂದು ಭಾವುಕರಾಗಿ ನುಡಿದರು.

Advertisement

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಿರುವ ಪ್ರಸಂಗದಲ್ಲಿ ಶಾಸಕ ಅಮರೇಗೌಡ ಬಯ್ನಾಪುರ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪನವರ ಕ್ಷಮೆಯಾಚಿಸುವುದಾಗಿ ಹೇಳಿದ ಅವರು, ಮುಂದಿನ ಉಪಚುನಾವಣೆಯಲ್ಲಿ ಕೂಡ ಕ್ಷೇತ್ರದ ಜನತೆ ಆಶೀರ್ವದಿಸುವ ವಿಶ್ವಾಸವಿದೆ ಎಂದರು.

ಮುಖಂಡ ಬಸವಂತರಾಯ ಕುರಿ ಮಾತನಾಡಿ, ರಾಜೀನಾಮೆ ನೀಡುವುದಕ್ಕೆ ಮೊದಲು ಪಾಟೀಲರು ಸುಮಾರು 3500 ಜನರೊಂದಿಗೆ ಅಭಿಪ್ರಾಯ ಸಂಗ್ರಹಿಸಿ ರಾಜೀನಾಮೆ ನೀಡಿದ್ದಾರೆ. ಸರಕಾರ ಕೆಲವೇ ವ್ಯಕ್ತಿಗಳ ಕೈಗೊಂಬೆಯಾದಾಗ ಪ್ರತಿಭಟಿಸುವುದು ಶಾಸಕರ ಕರ್ತವ್ಯ. ಪಾಟೀಲರು ಅದನ್ನೇ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಶಾಸಕರನ್ನು ಅವಮಾನಿಸುವಂತಹ ಕಾರ್ಯವೈಖರಿ ನಡೆಯಿತು. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಯಾರೂ ಸುಮ್ಮನಿರಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಪಾಟೀಲರು ರಾಜೀನಾಮೆ ಸಲ್ಲಿಸಿದ್ದಾರೆ ಎಂದರು. ಇಷ್ಟೊಂದು ಜನ ಕಾರ್ಯಕ್ರಮಕ್ಕೆ ಬಂದಿರುವುದು ಪಾಟೀಲರ ಹಿಂದೆ ಕ್ಷೇತ್ರದ ಜನತೆ ಇದ್ದಾರೆಂಬುದನ್ನು ತೋರಿಸುತ್ತದೆ ಎಂದರು.

ಕಾಂಗ್ರೇಸ್‌ ಮುಖಂಡರು ಮಾಡಿರುವ ಆರೋಪಗಳಿಗೆ ತಕ್ಕ ಉತ್ತರವನ್ನು ಉಪ ಚುನಾವಣೆಯಲ್ಲಿ ನೀಡುವುದಾಗಿ ಹೇಳಿದರು.

ಮುಖಂಡರಾದ ಅಂದಾನೆಪ್ಪ ಗುಂಡಳ್ಳಿ, ಡಾ| ಶಿವಶರಣಪ್ಪ ಇತ್ಲಿ, ಡಾ| ಬಿ.ಎಸ್‌. ದಿವಟರ, ಸೂಗಪ್ಪ ಮಾಲಿ ಪಾಟೀಲ, ಜಿಲಾನಿ ಖಾಜಿ, ಬಸವರಾಜ ಪಗಡದಿನ್ನಿ, ಬಸವರಾಜ ಬೆಲ್ಲದಮರಡಿ, ಯಲ್ಲೋಜಿರಾವ್‌ ಕೊರೇಕರ್‌, ಈರಣ್ಣ ವಕೀಲ, ಮಹಾಂತೇಶ ಕಡಾಮುಡಿಮಠ ಇತರರು ಮಾತನಾಡಿದರು.

ಮಹಾದೇವಪ್ಪಗೌಡ, ಅಜೇಯ ನಾಡಗೌಡ, ಲಿಂಗರಾಜ ನಾಡಗೌಡ, ಮಲ್ಲನಗೌಡ ಪೊಲೀಸ್‌ಪಾಟೀಲ, ಮಲ್ಲಯ್ಯ ಬಳ್ಳಾ, ಹನಮಂತಪ್ಪ ವೆಂಕಟಾಪುರ, ಬಸನಗೌಡ ಪೊಲೀಸ್‌ ಪಾಟೀಲ, ಪಂಪನಗೌಡ ತಿಡಿಗೋಳ, ಸೂಗಣ್ಣ ಬಾಳೇಕಾಯಿ, ಉಮಾಕಾಂತಪ್ಪ, ಶೇಖರಪ್ಪ ಕಾರಲಕುಂಟಿ, ಎರ್ರಿತಾತ ಜಂಗಮರಹಳ್ಳಿ ಇತರರು ಉಪಸ್ಥಿತರಿದ್ದರು. ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಬಲ ಪ್ರದರ್ಶನ: ಅಭಿಮಾನಿ ಕಾರ್ಯಕರ್ತರ ಸಭೆ ಯಶಸ್ವಿಯಾಗುವುದರೊಂದಿಗೆ ಪಾಟೀಲರ ಬಲ ಪ್ರದರ್ಶನವಾಯಿತು ಎಂದು ಹೇಳಬಹುದು.

ಮೌನಾಚರಣೆ: ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ನಿಧನರಾದ ಕೇಂದ್ರದ ಮಾಜಿ ಸಚಿವ ಸುಷ್ಮಾ ಸ್ವರಾಜ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next