Advertisement

50ಕ್ಕೂ ಹೆಚ್ಚು ಗ್ರಾಮಗ‌ಳಲ್ಲಿ ನೀರಿಗೆ ತತ್ವಾರ

10:51 AM May 03, 2019 | Naveen |

ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ಅರ್ಧ ಭಾಗ ಒಳಪಡುತ್ತದೆ ಎಂಬ ಹೆಗ್ಗಳಿಕೆ ಇರುವ ಮಸ್ಕಿ ತಾಲೂಕಿನಲ್ಲಿ ಅಂತರ್ಜಲ ಕುಸಿದಿದ್ದರಿಂದ ಮತ್ತು ನಾಲೆಯಲ್ಲಿ ನೀರಿಲ್ಲದ್ದರಿಂದ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಆರಂಭವಾಗಿದೆ.

Advertisement

ತುಂಗಭದ್ರಾ ಎಡದಂಡೆ ಮುಖ್ಯ ನಾಲೆ ವ್ಯಾಪ್ತಿಗೆ ಒಳಪಡುವ ಪಟ್ಟಣ ಸೇರಿ ತಾಲೂಕಿನ ಹಂಚಿನಾಳ, ಪರಾಪುರು, ಗುಡಗಲದಿನ್ನಿ, ಹಂಪನಾಳ, ಮೇರನಾಳ, ಗೋನಾಳ, ಹೆಡಗಿಬಾಳ ಕ್ಯಾಂಪ್‌, ಮೇರನಾಳ ಎಸ್‌ಸಿ ಕಾಲೋನಿ, ರಂಗಾಪುರು, ದುರ್ಗಾಕ್ಯಾಂಪ್‌, ಚಿಕ್ಕ ಕಡಬೂರು, ಹಿರೇಕಡಬೂರು, ಹಾಲಾಪುರು, ನಾಗಲದಿನ್ನಿ, ಸಾಗರ ಕ್ಯಾಂಪ್‌ ಬುದ್ದಿನ್ನಿ, ಜಾಲವಾಡಗಿ, ಲಕ್ಷ್ಮೀ ಕ್ಯಾಂಪ್‌ ಸೇರಿದಂತೆ ಇನ್ನೂ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಕಿ.ಮೀ.ಗಟ್ಟಲೇ ದೂರ ಸಾಗಿ ನೀರು ತರುವಂತಾಗಿದೆ. ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ತಾಲೂಕು ಆಡಳಿತ ಮತ್ತು ಗ್ರಾಪಂ ಆಡಳಿತ, ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿವೆ.

ಶಾಶ್ವತ ಪರಿಹಾರವಿಲ್ಲ: ತಾಲೂಕಿನ ಮಸ್ಕಿ ಹೋಬಳಿ, ಪಾಮನಕೆಲ್ಲೂರು ಹೋಬಳಿ, ಸಂತೆಕೆಲ್ಲೂರು ಹೋಬಳಿ ವ್ಯಾಪ್ತಿಯ ನೂರಾರು ಗ್ರಾಮಗಳು ಮಳೆಯಾಶ್ರಿತ ಪ್ರದೇಶಗಳಾಗಿವೆ. ಈ ಹೋಬಳಿ ವ್ಯಾಪ್ತಿಗಳಲ್ಲಿ ಬೇಸಿಗೆ ಇರಲಿ ಮಳೆ, ಚಳಿಗಾಲದಲ್ಲೂ ನೀರಿಗಾಗಿ ಅಲೆದಾಡುವುದು ಸಾಮಾನ್ಯವಾಗಿದೆ.

ಅಂತರ್ಜಲ ಕುಸಿತ: ಮಸ್ಕಿ ಹೋಬಳಿ ವ್ಯಾಪ್ತಿಯ ಒಣಬೇಸಾಯ ಪ್ರದೇಶಗಳಾದ ಮಸ್ಕಿ ತಾಂಡಾ, ಮೆದಿಕಿನಾಳ, ಮಾರಲದಿನ್ನಿ, ತಲೇಖಾನ, ಅಡವಿಬಾವಿ (ಮಸ್ಕಿ), ಮಟ್ಟೂರು, ಪಾಮನಕೆಲ್ಲೂರು, ಸಂತೆಕೆಲ್ಲೂರು, ಅಂಕುಶದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹಳ್ಳಿಗಳಲ್ಲಿ ಅಂತರ್ಜಲ ತೀವ್ರ ಕುಸಿದಿದೆ. ಕೆಲ ಹಳ್ಳಿಗಳಲ್ಲಿ ನೀರಿನ ಲಭ್ಯತೆ ಗೋಚರಿಸುತ್ತಿಲ್ಲ. ಕಳೆದ 20 ವರ್ಷಗಳ ಹಿಂದೆ 100ರಿಂದ 150 ಅಡಿ ಕೊರೆದರೆ ಬೋರ್‌ವೆಲ್ಗಳಲ್ಲಿ ನೀರು ಸಿಗುತ್ತಿತ್ತು. 50ಕ್ಕೂ ಹೆಚ್ಚು ಕೊಳವೆಬಾವಿ ಕೊರೆದರೆ, 10 ಕೊಳವೆಬಾವಿಗಳು ಫೇಲ್ ಆಗುತ್ತಿದ್ದವು. ಆದರೆ ಈಗ 400ರಿಂದ 500 ಅಡಿ ಕೊರೆದರೂ ಶೇ.30 ಬೋರ್‌ವೆಲ್ಗಳಲ್ಲಿ ಮಾತ್ರ ನೀರು ಸ್ವಲ್ಪ ಪ್ರಮಾಣದಲ್ಲಿ ಸಿಗುತ್ತಿದೆ. ತಾಲೂಕಿನಲ್ಲಿ ಪಟ್ಟಣ ಪ್ರದೇಶ ಹೊರತುಪಡಿಸಿ 141 ಗ್ರಾಮಗಳಿವೆ. ಅಂದಾಜು 1000ಕ್ಕೂ ಅಧಿಕ ಬೋರ್‌ವೆಲ್ಗಳಿವೆ. ಇದರಲ್ಲಿ ಸುಮಾರು 253 ಕೊಳವೆಬಾವಿ ವಿಫಲವಾಗಿದ್ದು, 182 ದುರಸ್ತಿಗೀಡಾಗಿವೆ. ಅಂದಾಜು 6 ನೂರಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಕೊಳವೆಬಾವಿ ಕಾರ್ಯ ನಿರ್ವಹಿಸುತ್ತಿವೆ.

ಇದ್ದೂ ಇಲ್ಲದಂತಾದ ಬೋರ್ ವೆಲ್ ಗಳು : ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ಗ್ರಾಪಂ ವತಿಯಿಂದ ಹೊಸದಾಗಿ ಕೊಳವೆಬಾವಿ ಕೊರೆಸಲಾಗಿದೆ. ಆದರೆ ನೀರಿನಲ್ಲಿ ಫ್ಲೋರೈಡ್‌ ಅಂಶವಿದ್ದು, ನೀರು ಕುಡಿದರೆ ಮೈಮೇಲೆ ಗುಳ್ಳೆಗಳು ಏಳುವುದು, ಚರ್ಮ ತುರಿಕೆ ಇತರೆ ಸಮಸ್ಯೆ ಎದುರಾಗುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಅನುದಾನ ನೀರುಪಾಲು: ಗುಡದೂರು ಗ್ರಾಪಂ ವ್ಯಾಪ್ತಿಯಲ್ಲಿ ನಾನಾ ಹಳ್ಳಿಗಳಿಗೆ ನೀರು ಒದಗಿಸಲು 1 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೇ ಕೈಬಿಟ್ಟಿದ್ದಾರೆ. ಬಳಗಾನೂರು ಗ್ರಾಮ ಪಂಚಾಯಿತಿ ಇದ್ದಾಗ ಸುಮಾರು 10 ಎಕೆರೆ ಪ್ರದೇಶದಲ್ಲಿ ಶಾಶ್ವತ ಕುಡಿಯುವ ನೀರಿನ ಕೆರೆ ನಿರ್ಮಿಸಲು ನರೇಗಾ ಯೋಜನೆಯಲ್ಲಿ 1 ಕೋಟಿ ಸೇರಿದಂತೆ ಶಾಸಕರ ಅನುದಾನ ಮತ್ತು ಜಿ.ಪಂ. ವತಿಯಿಂದ ಬಿಡುಗಡೆಯಾದ ಲಕ್ಷಂತಾರ ರೂ. ಹಣವನ್ನು ಗುತ್ತಿಗೆದಾರರು, ಆಗಿನ ಗ್ರಾಪಂ ಅಧಿಕಾರಿಗಳು ಬೋಗಸ್‌ ಬಿಲ್ ಸೃಷ್ಟಿಸಿ ಬಿಲ್ ಪಾವತಿಸಿಕೊಂಡಿದ್ದಾರೆ ಎಂಬ ಆರೋಪಗಳಿವೆ. ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಯ ಹೂವಿನಬಾವಿ ಕೆರೆಯನ್ನು ಹೊಳೆತ್ತಿ ಅಭಿವೃದ್ಧಿ ಪಡಿಸಲು ಸಣ್ಣ ನೀರಾವರಿ ಇಲಾಖೆಯಿಂದ ಈಗಾಗಲೇ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಗುತ್ತಿಗೆದಾರರು ಬೇಕಾಬಿಟ್ಟಿಯಾಗಿ ಹೂಳು ತೆಗೆಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನಿರುಪಯುಕ್ತವಾದ ಮೇಲ್ತೊಟ್ಟಿ: ಮೇರನಾಳ ಗ್ರಾಮದಿಂದ ಎಸ್‌ಸಿ ಕಾಲೋನಿಗೆ ನೀರು ಸರಬರಾಜು ಮಾಡಲು 2013-14ನೇ ಸಾಲಿನಲ್ಲಿ ರಾಷ್ಟ್ರಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಮೇಲ್ತೊಟ್ಟಿ ನಿರ್ಮಿಸಲಾಗಿದೆ. ಆದರೆ ಈ ನೀರಿನ ಮೇಲ್ತೊಟ್ಟಿಯಿಂದ ಎಸ್‌ಸಿ ಕಾಲೋನಿಗೆ ಅಳವಡಿಸಿರುವ ಪೈಪ್‌ಲೈನ್‌ನನ್ನು ಮೇರನಾಳ ಗ್ರಾಮದ ಕೆಲವರು ಕಿತ್ತಿಹಾಕಿದ್ದರಿಂದ ಮೇಲ್ತೊಟ್ಟಿಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಮೇಲ್ತೊಟ್ಟಿ ನಿರುಪಯುಕ್ತವಾಗಿದೆ. ಜಿಲ್ಲಾಡಳಿತ ತಾಲೂಕಿನಲ್ಲಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೊದಲಿನಿಂದಲೂ ನಮಗೆ ಕುಡ್ಯಾಕ ನೀರಿಲ್ಲ. ಕಾಲುವೆಯಲ್ಲಿ ನೀರು ಇದ್ದಾಗ ಸಮಸ್ಯೆ ಆಗಲ್ಲ. ಕಾಲುವೆ ನೀರು ಬಂದಾದಾಗ ಮಾತ್ರ ಒರತಿಗಳನ್ನು ತೋಡಿ ಅದರಲ್ಲಿ ಬರುವ ನೀರನ್ನೇ ಕುಡಿಯಬೇಕು. ಪಂಚಾಯ್ತಿಯವರಿಗೆ ಸಮಸ್ಯೆ ಹೇಳಿ ಸಾಕಾಗೈತಿ. ಒರತಿ ನೀರು ಕುಡಿದು ವಾಂತಿ-ಭೇದಿಯಾಗಿ ಮಸ್ಕಿ ದವಾಖಾನ್ಯಾಗ ತೋರಿಸಿಕೊಂಡು ಬಂದಿನಿ.
••ಯಲ್ಲಮ್ಮ ,
ಮೇರನಾಳ ಎಸ್‌ಸಿ ಕಾಲೋನಿ ನಿವಾಸಿ

ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುತ್ತದೆ. ಇದರ ಬಗ್ಗೆ ಪಿಡಿಒ ಗಮನಕ್ಕೂ ತಂದರೂ ಸ್ಪಂದಿಸಿಲ್ಲ. ಇಲ್ಲಿ ಎಸ್‌ಸಿ ಜನಾಂಗದವರು ವಾಸಿಸುವ ಸಲುವಾಗಿ ಅಧಿಕಾರಿಗಳು ಮೂಲ ಸೌಕರ್ಯ ಕಲ್ಪಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
•ರವಿ ಕುಮಾರ, ಬಸವರಾಜ, ನಾಗರಾಜ,
ಮೇರನಾಳ ನಿವಾಸಿಗಳು

ಬೇಸಿಗೆಯಲ್ಲಿ ನೀರಿನ ತೊಂದರೆಯಾಗಬಾರದೆಂದು ಬೋರ್‌ವೆಲ್ ಹಾಕಿಸಲಾಗಿದೆ. ಮೇರನಾಳ ಗ್ರಾಮದ ನೀರಿನ ಟ್ಯಾಂಕ್‌ನಿಂದಲೂ ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ದನ-ಕರಗಳು ತುಳಿದು ಪೈಪ್‌ ಒಡೆದಿವೆ. ವಾಟರ್‌ಮ್ಯಾನ್‌ಗಳಿಗೆ ಹೇಳಿ ಸರಿಪಡಿಸುತ್ತೇವೆ. ಇಷ್ಟು ದಿನ ಎಲೆಕ್ಷನ್‌ ಡ್ಯೂಟಿಯಲ್ಲಿದ್ದಿದ್ದರಿಂದ ನೀರಿನ ಸಮಸ್ಯೆಯತ್ತ ಗಮನಹರಿಸಲು ಆಗಿಲ್ಲ. ಕೂಡಲೇ ಪರಿಹರಿಸುತ್ತೇವೆ.
••ಎಂ.ಡಿ. ಮಲ್ಲಣ್ಣ ಗುಡಸಲಿ
ಗುಡದೂರು ಗ್ರಾಪಂ ಪಿಡಿಒ

ಉಮೇಶ್ವರಯ್ಯ ಬಿದನೂರಮಠ

Advertisement

Udayavani is now on Telegram. Click here to join our channel and stay updated with the latest news.

Next