ಮಸ್ಕಿ: ಪಟ್ಟಣದ ಸಮೀಪದ ಹಳೆ ಕ್ಯಾತನಟ್ಟಿಯಲ್ಲಿ ನಿಧಿ ಶೋಧ ನಡೆದಿರುವ ಘಟನೆ ಶನಿವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಹಳೆ ಕ್ಯಾತನಟ್ಟಿಯ ಪುರಾತನವಾದ ವೀರಭದ್ರೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಈ ಘಟನೆ ನಡೆದಿದೆ.
ದೇವಸ್ಥಾನದ ಹಿಂಭಾಗದಲ್ಲಿ ಪೂಜಾ ಸಾಮಾಗ್ರಿಗಳು, ಸಿಹಿ ತಿನಿಸು, ಲಿಂಬೆ ಹಣ್ಣು, ಅರಿಶಿನ ಕೊಂಬು ಇಟ್ಟು ಪೂಜೆ ಮಾಡಲಾಗಿದೆ. ಅದರ ಪಕ್ಕದಲ್ಲೇ ವೃತ್ತಕಾರದಲ್ಲಿ 3 ಅಡಿಗಳಷ್ಟು ಗುಂಡಿ ಅಗೆಯಲಾಗಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಶನಿವಾರ ಬೆಳಿಗ್ಗೆ ವೀರಭದ್ರೇಶ್ವರ ಹಾಗೂ ಆಂಜನೇಯ ದೇವಸ್ಥಾನಕ್ಕೆ ತೆರಳಿದ್ದ ಭಕ್ತರಿಗೆ ನಿಧಿಗಾಗಿ ಪೂಜೆ ಮಾಡಿದ್ದು ಹಾಗೂ ಭೂಮಿ ಅಗೆದಿದ್ದು ಕಂಡು ಬಂದಿದೆ.
ಹಳೆ ಕ್ಯಾತನಟ್ಟಿಗೆ ಪುರಾತನ ಇತಿಹಾಸ ಇದ್ದು, ಹಲವಾರು ಭಾರಿ ಈ ಜಾಗದಲ್ಲಿ ನಿಧಿ ಶೋಧಗಳು ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಈ ಜಾಗದಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು ಎನ್ನಲಾಗಿದೆ.